×
Ad

ನಿಲ್ದಾಣಗಳಲ್ಲಿ ತಪಾಸಣಾ ಕೇಂದ್ರ ಸ್ಥಾಪನೆ: ಸಚಿವ ಖಾದರ್; ‘ಝಿಕಾ ವೈರಸ್’ ತಡೆಗಟ್ಟಲು ಕ್ರಮ

Update: 2016-02-03 23:56 IST

ಬೆಂಗಳೂರು, ಫೆ. 3: ತ್ವರಿತಗತಿಯಲ್ಲಿ ಹಬ್ಬುತ್ತಿರುವ ಆತಂಕಕಾರಿ ‘ಝಿಕಾ ವೈರಸ್’ ಹರಡುವುದನ್ನು ತಡೆಗಟ್ಟಲು ಬೆಂಗಳೂರು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ವಿದೇಶಿ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

 ಬುಧವಾರ ವಿಕಾಸಸೌಧದಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಆಫ್ರಿಕಾದಿಂದ ‘ಝಿಕಾ ವೈರಸ್’ ಹರಡುತ್ತಿರುವ ಮಾಹಿತಿಯಿದ್ದು, ಆ ದೇಶಗಳಿಂದ ಕರ್ನಾಟಕ ರಾಜ್ಯಕ್ಕೆ ಆಗಮಿಸುವ ವಿದೇಶಿ ಪ್ರಜೆಗಳನ್ನು ತಪಾಸಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಬೆಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ದಿನದ 24 ಗಂಟೆಗಳು ವೈದ್ಯಕೀಯ ತಂಡ ಕರ್ತವ್ಯ ನಿರ್ವಹಿಸಲಿದ್ದು, ಅದೇ ಸ್ಥಳದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಝಿಕಾ ವೈರಸ್ ಹರಡುವ ದೇಶದ ಪ್ರಜೆಗಳನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೆ ಒಳಪಡಿಸಲಾಗುವುದು. ಅಲ್ಲದೆ, ರೋಗದ ಲಕ್ಷಣ ಕಂಡುಬಂದರೆ ಕೂಡಲೇ ಅವರಿಗೆ ಅಗತ್ಯ ಚಿಕಿತ್ಸೆಯನ್ನೂ ನೀಡಲಾಗುವುದು ಎಂದು ಹೇಳಿದರು.

ಝಿಕಾ ವೈರಸ್ ಪತ್ತೆಯಾದವರಿಗೆ ಸೂಕ್ತ ಚಿಕಿತ್ಸೆ ನೀಡಲು ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯನ್ನು ನೋಡಲ್ ಆಸ್ಪತ್ರೆಯನ್ನಾಗಿ ನಿಗದಿಪಡಿಸಿದ್ದು, 22ದೇಶಗಳಿಂದ ಆಗಮಿಸುವ ಪ್ರಜೆಗಳನ್ನು ವಿಮಾನ ನಿಲ್ದಾಣಗಳಲ್ಲೇ ತಪಾಸಣೆ ಮಾಡುವುದು. ಅಲ್ಲದೆ, ರೋಗ ಹರಡದಂತೆ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಲಾಗುವುದು ಎಂದರು.

ಗರ್ಭಿಣಿಯರಿಗೆ ಝಿಕಾ ವೈರಸ್ ಬಹು ಬೇಗ ಬಾಧಿಸುವ ಅಪಾಯವಿದ್ದು, ರಾಜ್ಯದಲ್ಲಿ ‘ತಾಯಿ ಕಾರ್ಡ್’ ನೀಡುವ ಸಂದರ್ಭದಲ್ಲೇ ಮಸ್ಕಿಟೋ ರಿಪಾಲೆಂಟ್ ಹೆಸರಿನ ಮುಲಾಮನ್ನು ನೀಡಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದ ಖಾದರ್, ಝಿಕಾ ವೈರಸ್ ಬಗ್ಗೆ ಜನ ಸಾಮಾನ್ಯರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ಆರೋಗ್ಯ ಇಲಾಖೆ ಪ್ರಧಾನ ಕಾರ್ಯ ದರ್ಶಿ ಎಂ.ಲಕ್ಷ್ಮೀನಾರಾಯಣ, ಆಯುಷ್ ನಿರ್ದೇಶಕ ಸುಭಾಷ್ ಮಲಖೇಡ್, ಆಯುಕ್ತ ಪಿ.ಎಸ್.ವಸ್ತ್ರದ್, ನಿರ್ದೇಶಕ ವಾಮದೇವ್, ವಿಮಾನ ನಿಲ್ದಾಣ ಪ್ರಾಧಿಕಾರಿದ ಅಧಿಕಾರಿಗಳು ಹಾಗೂ ಹಿರಿಯ ವೈದ್ಯರು ಈ ವೇಳೆ ಉಪಸ್ಥಿತರಿದ್ದರು..

ಝಿಕಾ ವೈರಸ್‌ಯುಕ್ತ ರಕ್ತದ ಪರೀಕ್ಷೆಗೆ ಪುಣೆ ಮತ್ತು ದಿಲ್ಲಿಯಲ್ಲಿ ಪ್ರಾಥಮಿಕ ರಕ್ತದ ಮಾದರಿ ಕೇಂದ್ರಗಳಿದ್ದು, ಕೇಂದ್ರ ಸರಕಾರ ಬೇರೆ ಸ್ಥಳಗಳಲ್ಲಿಯೂ ಪರೀಕ್ಷಾ ಕೇಂದ್ರಗಳನ್ನು ತೆರೆಯಬೇಕು. ಝಿಕಾ ವೈರಸ್ ಸೋಂಕಿತರ ಪರೀಕ್ಷೆಗೆ ಅಗತ್ಯ ಕಿಟ್‌ಗಳನ್ನು ಕೇಂದ್ರ ಒದಗಿಸಬೇಕು.                                                                             ಯು.ಟಿ.ಖಾದರ್, ಆರೋಗ್ಯ ಸಚಿವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News