×
Ad

ಹಣ ದ್ವಿಗುಣ ವಂಚನೆ: ಫೆ.8ರಂದು ಪ್ರತಿಭಟನೆ

Update: 2016-02-03 23:59 IST

ಬೆಂಗಳೂರು, ಫೆ.3: ಮೂರು ವರ್ಷಗಳಲ್ಲಿ ಹಣ ದ್ವಿಗುಣಗೊಳಿಸಲಾಗುವುದು ಎಂದು ನಂಬಿಸಿ ಗ್ರಾಹಕರನ್ನು ವಂಚಿಸಿರುವ ಹಿಂದೂಸ್ಥಾನ್ ಇನ್‌ಫ್ರಾಖಾನ್ ಸಂಸ್ಥೆಯ ವಿರುದ್ಧ ಫೆ.8ರಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಗ್ರಾಹಕರ ಜಾಗೃತಿ ವೇದಿಕೆ ತಿಳಿಸಿದೆ.

  ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ರಘುಪತಿ ಮಾತನಾಡಿ, ಹಿಂದೂಸ್ಥಾನ್ ಇನ್‌ಫ್ರಾಖಾನ್ ಸಂಸ್ಥೆ ಫಿಗ್ಮಿ, ಆರ್.ಡಿ. ಡಿಪಾಸಿಟ್ ಇನ್ನಿತರ ರೂಪದಲ್ಲಿ ಸಂಗ್ರಹಿಸಿ ಮೂರು ವರ್ಷಗಳಲ್ಲಿ ಹಣ ದ್ವಿಗುಣಗೊಳಿಸಲಾಗುವುದು ಎಂದು ನಂಬಿಸಿ ಸಾವಿರಾರು ಗ್ರಾಹಕರನ್ನು ವಂಚಿಸಿದೆ ಎಂದು ಆರೋಪಿಸಿದರು.

ಈ ಸಂಸ್ಥೆಯು ರಾಜ್ಯಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸಿ ಸುಮಾರು ಐದು ಸಾವಿರ ಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಿದೆ. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಲಕ್ಷ್ಮೀನಾರಾಯಣರ ಬಳಿ ಕಟ್ಟಿದ ಹಣವನ್ನು ಕೇಳಲು ಹೋದ ಗ್ರಾಹಕರ ಮೇಲೆ ರೌಡಿಗಳನ್ನು ಬಿಟ್ಟು ಹಲ್ಲೆ ನಡೆಸುತ್ತಿದ್ದಾರೆ. ಈ ಮೂಲಕ ಗ್ರಾಹಕರಲ್ಲಿ ಭಯದ ವಾತಾವರಣ ಸೃಷ್ಟಿಸಿ ಹಣವನ್ನು ದೋಚಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

  ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಲಕ್ಷ್ಮೀನಾರಾಯಣ ಮತ್ತು ಎಲ್ಲ ನಿರ್ದೇಶಕರ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಮೋಸ ಹೋದವರಿಗೆ ಹಣವನ್ನು ಹಿಂದಿರುಗಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಎಚ್.ಸ್ವಾಮಿ, ಕ್ರಾಂತಿ ಯುವಶಕ್ತಿ ಸಂಘಟನೆಯ ಅಧ್ಯಕ್ಷ ಟಿ.ಆರ್.ತುಳಸಿರಾಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News