ಅಕ್ರಮ ವಸತಿ ಕಟ್ಟಡ ನಿರ್ಮಾಣ ಆರೋಪ
ಬೆಂಗಳೂರು, ಫೆ.6: ನಗರದ ಕೊತ್ತನೂರು ಗ್ರಾಮದ ಸರಕಾರಿ ಭೂಮಿಯಾದ ಸರ್ವೇ ನಂ.86/3ರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಸತಿ ಕಟ್ಟಡವನ್ನು ನಿರ್ಮಿಸಲು ಮುಂದಾಗಿರುವ ನಾಕೋಡ ಕನ್‌ಸ್ಟ್ರಕ್ಷನ್ ಸಂಸ್ಥೆಯ ಅಕ್ರಮದಲ್ಲಿ ಬಿಬಿಎಂಪಿ ಅಧಿಕಾರಿಗಳ ಕೈವಾಡವಿದೆ ಎಂದು ಮಾಜಿ ನಗರಸಭಾ ಸದಸ್ಯ ಲಕ್ಷ್ಮೀನಾರಾಯಣ ಗಂಭೀರವಾಗಿ ಆರೋಪಿಸಿದ್ದಾರೆ.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಕೋಡ ಕನ್‌ಸ್ಟ್ರಕ್ಷನ್ ಸಂಸ್ಥೆ ಕೊತ್ತನೂರು ಗ್ರಾಮದ ಮೀನಾಕ್ಷಿ ದೇವಸ್ಥಾನದ ಹಿಂಭಾಗ ಸರ್ವೇ ನಂ. 86/2ರ ದಾಖಲೆಗಳನ್ನು ನೀಡಿ ಕಟ್ಟಡದ ನಕ್ಷೆಯ ಅನುಮತಿಯನ್ನು ಪಡೆದುಕೊಂಡಿದ್ದಾರೆ. ಆದರೆ ಈ ಬಹುಮಹಡಿ ಕಟ್ಟಡವನ್ನು ಸರಕಾರಿ ಭೂಮಿಯಾದ ಸರ್ವೇ ನಂ. 86/3ರಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದರು.
ಸುಮಾರು 1.20 ಗುಂಟೆ ಇರುವ ಜಾಗದಲ್ಲಿ ಕೆರೆಯ ರಾಜ ಕಾಲುವೆ ಹಾದು ಹೋಗುತ್ತದೆ. ಆದರೂ ಅಕ್ರಮವಾಗಿ ಬಹು ಮಹಡಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಈ ಅಕ್ರಮವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಒತ್ತುವರಿ ಜಾಗವನ್ನು ತೆರವುಗೊಳಿಸಿ ಈ ಜಾಗ ಸರಕಾರಿ ಸ್ವತ್ತು ಎಂದು ಆದೇಶ ಹೊರಡಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳ ಆದೇಶಕ್ಕೂ ಸೊಪ್ಪು ಹಾಕದೆ ಮಾಲಕರು ಕಟ್ಟಡ ನಿರ್ಮಾಣ ಕಾರ್ಯವನ್ನು ಮುಂದುವರಿಸಿದ್ದಾರೆ ಎಂದು ದೂರಿದರು.
ಈ ಅಕ್ರಮ ಕುರಿತು ಬಿಬಿಎಂಪಿ ಆಯುಕ್ತ ಮತ್ತು ಮೇಯರ್ ಗಮನಕ್ಕೆ ತರಲಾಗಿದೆ. ಈ ಅಕ್ರಮದಲ್ಲಿ ಬಿಬಿಎಂಪಿ ಅಧಿಕಾರಿಗಳು ಭಾಗಿಯಾಗಿರುವುದರಿಂದ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಬಹು ಮಹಡಿ ಕಟ್ಟಡ ನಿರ್ಮಾಣ ಕಾರ್ಯ ಮುಗಿದಿದ್ದು, ಸದ್ಯ ಸಾರ್ವಜನಿಕರು ಬಹು ಮಹಡಿಯಲ್ಲಿ ಫ್ಲಾಟ್‌ಗಳನ್ನು ಕೊಂಡು ಮೋಸ ಹೋಗುವ ಮೊದಲು ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.