‘ಕನ್ನಡ ಸಾಹಿತ್ಯ ಪರಿಷತ್‌ಗೆ ಸಾಹಿತಿಗಳನ್ನೇ ಆಯ್ಕೆ ಮಾಡಿ’
ಬೆಂಗಳೂರು, ಫೆ. 6: ಕನ್ನಡ ಸಾಹಿತ್ಯ ಪರಿಷತ್ ರಾಜಕೀಯ, ಭ್ರಷ್ಟಾಚಾರದ ಸುಳಿಗಳಲ್ಲಿ ಸಿಲುಕಿಕೊಂಡಿದೆ. ಅಲ್ಲಿ ನಡೆಯುತ್ತಿರುವ ಅನ್ಯಾಯ ಭ್ರಷ್ಟತೆಯನ್ನು ತಡೆಯಲು ಸದ್ಯದಲ್ಲಿ ನಡೆಯುವ ಚುನಾವಣೆಗಳಲ್ಲಿ ಹೆಚ್ಚು ಸಾಹಿತಿಗಳನ್ನು ಆಯ್ಕೆ ಮಾಡಬೇಕು ಎಂದು ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎನ್.ಪಿ.ಅಮೃತೇಶ್ ಹೇಳಿದ್ದಾರೆ.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರಕಾರ ನೀಡುವ ಅನುದಾನಗಳ ಕುರಿತು ಮಾಹಿತಿ ಕೇಳಿದರೆ ಸೂಕ್ತ ಉತ್ತರವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕನ್ನಡವನ್ನು ಉಳಿಸ ಬೇಕಾದರೆ ಪ್ರತಿಯೊಬ್ಬ ಕನ್ನಡಿಗರು ಸಾಹಿತ್ಯ ಪರಿಷತ್‌ನಲ್ಲಿ ಸದಸ್ಯನಾಗಬೇಕು. ಪರಿಷತ್‌ನಲ್ಲಿ ಎಲ್ಲ ವ್ಯವಹಾರಗಳು ಕನ್ನಡದಲ್ಲಿ ನಡೆಯಬೇಕು ಎಂದು ಒತ್ತಾಯಿಸಿದ ಅವರು, ಸಾಹಿತ್ಯ ಪರಿಷತ್ತಿನ ವ್ಯವಹಾರಗಳು ಇಂಗ್ಲಿಷ್‌ನಲ್ಲಿ ನಡೆಯುತ್ತಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದರು.
ಕಳೆದ 15 ವರ್ಷಗಳ ನಂತರದ ದಿನಗಳಲ್ಲಿ ನಡೆದ ಚುನಾವಣೆಗಳು ರಾಜಕೀಯ ಬಣ್ಣವನ್ನು ಪಡೆದು ಕೊಂಡಿವೆ. ಪರಿಷತ್‌ಗೆ ಆರಿಸಿ ಬರಲು ಅಭ್ಯರ್ಥಿಗಳು ಕೋಟಿಗಟ್ಟಲೆ ಹಣವನ್ನು ಖರ್ಚುಮಾಡುತ್ತಾರೆ. ಈ ಹಣವನ್ನು ಸರಕಾರದಿಂದ ಪುಸ್ತಕ ಮುದ್ರಣ ಮತ್ತಿತರ ಅನುದಾನಗಳಿಗೆ ಬಿಡುಗಡೆಯಾದ ಹಣವನ್ನು ದುರುಪಯೋಗ ಮಾಡಿಕೊಂಡು ಸಂಪಾದಿಸುತ್ತಾರೆ. ಇದನ್ನೆಲ್ಲ ತಡೆಯಬೇಕಾದರೆ ಪರಿಷತ್ ನಿಬಂಧನೆಗಳು ತಿದ್ದುಪಡಿಯಾಗಬೇಕು ಎಂದು ಆಗ್ರಹಿಸಿದರು.
ಕಸಾಪದಲ್ಲಿನ ಭ್ರಷ್ಟಾಚಾರವನ್ನು ತಡೆದು ಪಾರದರ್ಶಕ ಆಡಳಿತ ನೀಡಲು ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿದ್ದೇನೆ ಎಂದು ತಿಳಿಸಿದರು.