ಬೆಸ್ಕಾಂ ವ್ಯಾಪ್ತಿಯಲ್ಲಿ ಕೈಗಾರಿಕಾ ಬದಲಿ ರಜೆ ರದ್ದು: ಡಿ.ಕೆ.ಶಿವಕುಮಾರ್
ಬೆಂಗಳೂರು, ಫೆ.6: ವಿದ್ಯುತ್ ಲಭ್ಯತೆಯಲ್ಲಿ ಹೆಚ್ಚಿನ ಸುಧಾರಣೆ ಯಾಗುತ್ತಿರುವುದರಿಂದ ಬೆಂಗಳೂರು ವಿದ್ಯುತ್ ಕಂಪೆನಿ(ಬೆಸ್ಕಾಂ) ವ್ಯಾಪ್ತಿಯಲ್ಲಿ ಹಾಲಿ ಜಾರಿಯಲ್ಲಿರುವ ಕೈಗಾರಿಕಾ ಬದಲಿ ರಜೆ ವ್ಯವಸ್ಥೆ ಯನ್ನು ಫೆ.6ರಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಶನಿವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತ ನಾಡಿದ ಅವರು, ಜಲ ವಿದ್ಯುತ್ ಉತ್ಪಾದನೆಯಲ್ಲಿನ ನಿರ್ಬಂಧ ಸಡಿಲಗೊಂಡಿರುವುದು, ರಾಜ್ಯ ಹಾಗೂ ಕೇಂದ್ರ ಸ್ವಾಮ್ಯದ ಶಾಖೋತ್ಪನ್ನ ಘಟಕಗಳಲ್ಲಿನ ಉತ್ಪಾದನೆಯಲ್ಲಿನ ಸುಧಾರಣೆ, ಕುಡಂಕುಳಂ ಅಣು ವಿದ್ಯುತ್ ಸ್ಥಾವರ ಮತ್ತೆ ವಿದ್ಯುತ್ ಉತ್ಪಾದನೆ ಪ್ರಾರಂಭಿಸಿರುವು ದರಿಂದ ವಿದ್ಯುತ್ ಲಭ್ಯತೆಯಲ್ಲಿ ಸುಧಾರಣೆಯಾಗಿದೆ ಎಂದರು.ಲವಿದ್ಯುತ್ ಉತ್ಪಾದನೆಯನ್ನು ಸೀಮಿತಗೊಳಿಸಿ ಲಿಂಗನಮಕ್ಕಿ, ಸೂಪಾ ಹಾಗೂ ಮಾಣಿ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆಯನ್ನು ಸಂರಕ್ಷಿಸಿರುವುದರಿಂದ ಮುಂಬರುವ ಬೇಸಿಗೆ ಹಾಗೂ ವಾರ್ಷಿಕ ಸಮಯದಲ್ಲಿ ಹೆಚ್ಚಿನ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.ುಡಂಕುಳಂ ಅಣು ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಒಂದು ಸಾವಿರ ಮೆಗಾವ್ಯಾಟ್ ಘಟಕ-1 ಉತ್ಪಾದನೆಯನ್ನು ಪುನರಾರಂಭಿಸಿರುವುದರಿಂದ ರಾಜ್ಯಕ್ಕೆ 220 ಮೆಗಾವ್ಯಾಟ್ ಹೆಚ್ಚಿನ ವಿದ್ಯುತ್ ಲಭ್ಯವಾಗುತ್ತಿದೆ. ಆದುದರಿಂದ, ಕೈಗಾರಿಕಾ ಬದಲಿ ರಜೆ ವ್ಯವಸ್ಥೆಯಿಂದ ಕಡಿಮೆಯಾಗಿರುವ 100-150 ಮೆಗಾವ್ಯಾಟ್ ವಿದ್ಯುತ್ತನ್ನು ಯಾವುದೇ ತೊಂದರೆಯಿಲ್ಲದೆ ಸರಬರಾಜು ಮಾಡಬಹುದಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಯರಮರಸ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಎರಡು 800 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕಗಳು ಉತ್ಪಾದನೆಯನ್ನು ಮುಂದಿನ ಎರಡು ತಿಂಗಳಲ್ಲಿ ಪ್ರಾರಂಭಿ ಸಲಿವೆ. ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಮೂರನೆ ಘಟಕವು ಮಾರ್ಚ್ ಮೊದಲ ವಾರದಲ್ಲಿ ವಿದ್ಯುತ್ ಉತ್ಪಾದನೆಯನ್ನು ಪ್ರಾರಂಭಿಸಲಿದೆ ಎಂದು ಅವರು ಹೇಳಿದರು.ನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಇಂಧನ ಕ್ಷೇತ್ರದಲ್ಲಿ 78,553 ಕೋಟಿ ರೂ.ಹೂಡಿಕೆ ಮಾಡುವ 38 ಪ್ರಸ್ತಾವನೆಗಳು ಬಂದಿವೆ. 12 ಸಾವಿರ ಎಕರೆ ಪ್ರದೇಶದಲ್ಲಿ ಪಾವಗಡದಲ್ಲಿ ನಿರ್ಮಾಣವಾಗುತ್ತಿರುವ ಸೋಲಾರ್ ಪಾರ್ಕ್‌ಗಾಗಿ 3,100 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇನ್ನುಳಿದ ಪ್ರಕ್ರಿಯೆಗಳು ಮುಂದು ವರಿದಿವೆ. 2017ರ ವೇಳೆಗೆ ಸೋಲಾರ್‌ಪಾರ್ಕ್ ಬಳಕೆಗೆ ಲಭ್ಯವಾಗಲಿದೆ ಎಂದು ಶಿವಕುಮಾರ್ ತಿಳಿಸಿದರು.
ರೈತರ ಕೃಷಿ ಪಂಪ್‌ಸೆಟ್‌ಗಳಿಗೆ 6-7 ಗಂಟೆ ನಿರಂತರ ವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಸಮಸ್ಯೆಯಿಲ್ಲ. ಮಕ್ಕಳ ಪರೀಕ್ಷೆ ಹಾಗೂ ಬೇಸಿಗೆಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.ಹೊಸಬೆಳಕು: ರಾಜ್ಯ ಸರಕಾರದ ‘ಹೊಸಬೆಳಕು’ ಯೋಜನೆಯಡಿ ವಿತರಿಸಲಾಗುತ್ತಿರುವ ಎಲ್‌ಇಡಿ ಬಲ್ಬ್‌ಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಈಗಾಗಲೇ ಸುಮಾರು 16 ಲಕ್ಷ ಎಲ್‌ಇಡಿ ಬಲ್ಬ್‌ಗಳು ಮಾರಾಟವಾಗಿವೆ ಎಂದು ಶಿವಕುಮಾರ್ ಹೇಳಿದರು.
ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಕನಕಪುರದ ಹಾರೋಹಳ್ಳಿಯಲ್ಲಿ ಇಂದು ನಡೆದ ಸಾರ್ವಜನಿಕ ಸಮಾವೇಶದಲ್ಲಿ ಸಿಂಧ್ಯಾ ಈ ಘೋಷಣೆ ಮಾಡಿದ್ದಾರೆ. ಅಲ್ಲದೆ, ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಸಿಂಧ್ಯಾ ಪ್ರಚಾರ ಮಾಡಲಿದ್ದಾರೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರವು ಈ ಬಾರಿ ಬಿಜೆಪಿಯಿಂದ ಕಾಂಗ್ರೆಸ್ ತೆಕ್ಕೆಗೆ ಬರುತ್ತದೆ. ಹೆಬ್ಬಾಳದ ಜನ ಕಾಂಗ್ರೆಸ್ ಅಭ್ಯರ್ಥಿ ರೆಹಮಾನ್ ಶರೀಫ್ ಪರವಾಗಿ ಒಲವು ಹೊಂದಿದ್ದಾರೆ. ಬಿಜೆಪಿ ಅಭ್ಯರ್ಥಿ ಸ್ಥಳೀಯರಲ್ಲ. ಆದುದರಿಂದ, ಅವರಲ್ಲಿ ಸಾಕಷ್ಟು ಗೊಂದಲಗಳಿವೆ.
ಡಿ.ಕೆ. ಶಿವಕುಮಾರ್, ಇಂಧನ ಸಚಿವ.