ಪಾರಾದೀಪ್ ತೈಲ ಸಂಸ್ಕರಣಾಗಾರ ಲೋಕಾರ್ಪಣೆ

Update: 2016-02-07 15:20 GMT

ಪಾರಾದೀಪ್, ಫೆ.7: ಪಾರಾದೀಪ್‌ನಲ್ಲಿ 34,555 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಭಾರತೀಯ ತೈಲ ನಿಗಮ(ಐಒಸಿ)ದ ತೈಲ ಸಂಸ್ಕರಣಾಗಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಲೋಕಾರ್ಪಣೆಗೊಳಿಸಿದರು. ಇದರೊಂದಿಗೆ ಐಒಸಿ ರಿಲಾಯನ್ಸ್ ಇಂಡಸ್ಟ್ರೀಸ್‌ನ್ನು ಹಿಂದಿಕ್ಕಿ ಮತ್ತೆ ದೇಶದ ಅತ್ಯುನ್ನತ ತೈಲ ಸಂಸ್ಕರಣ ಕಂಪನಿಯಾಗಿ ಹೊರಹೊಮ್ಮಿದೆ.


ವಾರ್ಷಿಕ 15 ಮಿಲಿಯನ್ ಟನ್ ಸಾಮರ್ಥ್ಯದ ಈ ತೈಲ ಸಂಸ್ಕರಣಾಗಾರ ಸುಮಾರು 16 ವರ್ಷಗಳ ಸುದೀರ್ಘ ಅವಧಿಯಲ್ಲಿ ನಿರ್ಮಾಣಗೊಂಡಿದೆ. 2000,ಮೇ 24ರಂದು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಐಒಸಿಯ ಈ 9ನೆ ಸ್ಥಾವರಕ್ಕೆ ಶಿಲಾನ್ಯಾಸವನ್ನು ನೆರವೇರಿಸಿದ್ದರು.ಪಾರಾದೀಪ್‌ಗೂ ಮುನ್ನ ಐಒಸಿ ತನ್ನ ಎಂಟು ಸ್ಥಾವರಗಳ ಮೂಲಕ ಒಟ್ಟೂ 54.2 ಮಿ.ಟ.ಕಚ್ಚಾತೈಲ ಸಂಸ್ಕರಣೆ ಸಾಮರ್ಥ್ಯವನ್ನು ಹೊಂದಿತ್ತು. ಇದೀಗ ಪಾರಾದೀಪ್ ಸೇರ್ಪಡೆಯೊಂದಿಗೆ ತನ್ನ ಒಟ್ಟೂ ಸಾಮರ್ಥ್ಯವನ್ನು 70.2 ಮಿ.ಟ.ಗೆ ಹೆಚ್ಚಿಸಿಕೊಂಡಿರುವ ಐಒಸಿ ರಿಲಾಯನ್ಸ್(62ಮಿ.ಟ.)ನ್ನು ಹಿಂದಿಕ್ಕಿದೆ.


ಒಡಿಶಾದ ರಾಜಧಾನಿ ಭುವನೇಶ್ವರದಿಂದ 140 ಕಿ.ಮೀ.ಅಂತರದಲ್ಲಿರುವ ಪಾರಾದೀಪ ತೈಲ ಸಂಸ್ಕರಣಾಗಾರವು ವಿಶ್ವದ ಅತ್ಯಂತ ಆಧುನಿಕ ರಿಫೈನರಿಗಳಲ್ಲಿ ಒಂದಾಗಿದ್ದು,ಗಂಧಕ ಅತ್ಯಧಿಕ ಪ್ರಮಾಣದಲ್ಲಿರುವ ಅಗ್ಗದ ಕಚ್ಚಾತೈಲವನ್ನು ಸಂಸ್ಕರಿಸಬಲ್ಲದು. ವಾರ್ಷಿಕ 5.6 ಮಿ.ಟ.ಡೀಸೆಲ್,3.79 ಮಿ.ಟ.ಪೆಟ್ರೋಲ್ ಮತ್ತು 1.96 ಮಿ.ಟ.ಸೀಮೆಎಣ್ಣೆ/ಎಟಿಎಫ್‌ನ್ನು ಉತ್ಪಾದಿಸಲಿದೆ. ಜೊತೆಗೆ 790,000 ಟನ್ ಎಲ್‌ಪಿಜಿ ಮತ್ತು 1.21ಮಿ.ಟ.ಪೆಟ್‌ಕೋಕ್‌ನ್ನೂ ಉತ್ಪಾದಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.ಪಾರಾದೀಪ್ ಸಂಸ್ಕರಣಾಗಾರವು ಡೀಸೆಲ್,ಸೀಮೆಎಣ್ಣೆ ಮತ್ತು ಎಲ್‌ಪಿಜಿಯನ್ನೊಳಗೊಂಡ ತನ್ನ ಮೊದಲ ಉತ್ಪಾದನೆಯನ್ನು ಕಳೆದ ವರ್ಷದ ನ.22ರಂದು ಹೊರಗೆ ಬಿಟ್ಟಿತ್ತು.
 

 ವಿಶೇಷತೆಗಳು

  • ರಿಫೈನರಿ ನಿರ್ಮಾಣದಲ್ಲಿ ಬಳಕೆಯಾಗಿರುವ ಉಕ್ಕಿನ ಪ್ರಮಾಣ 2.8ಲ.ಟನ್. ಇದು 30 ಐಫೆಲ್ ಗೋಪುರಗಳು ಅಥವಾ 350 ರಾಜಧಾನಿ ರೈಲುಗಳಿಗೆ ಸಮ.

  • ಕಾಂಕ್ರೀಟಿಕರಣಗೊಂಡಿರುವ ಪ್ರದೇಶದ ವಿಸ್ತೀರ್ಣ 11.6 ಲಕ್ಷ ಘನ ಮೀಟರ್‌ಗಳು. ಇದು ವಿಶ್ವದಲ್ಲಿ ಅತ್ಯಂತ ಎತ್ತರದ ಕಟ್ಟಡವಾಗಿರುವ ದುಬೈನ ಬುರ್ಜ್ ಖಲೀಫಾಕ್ಕಿಂತ ಮೂರು ಪಟ್ಟು ಹೆಚ್ಚು.
  • ಬಳಕೆಯಾಗಿರುವ ಪೈಪ್‌ಗಳ ಉದ್ದ 2,400 ಕಿ.ಮೀ. ಅಂದರೆ ಹೆಚ್ಚುಕಡಿಮೆ ಗಂಗಾ ನದಿಯಷ್ಟು ಉದ್ದ.
  • 126 ಇಂಚುಗಳ ಅತ್ಯಂತ ಹೆಚ್ಚಿನ ವ್ಯಾಸವನ್ನು ಹೊಂದಿರುವ ಪೈಪ್‌ಲೈನ್‌ನಲ್ಲಿ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಆರಾಮವಾಗಿ ಸಂಚರಿಸಬಲ್ಲದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News