ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ತೀನಂಶ್ರೀ ಸಾಹಿತ್ಯ: ಡಾ.ಚಿದಾನಂದಮೂರ್ತಿ
ಬೆಂಗಳೂರು, ಫೆ. 7: ಹಿರಿಯ ಲೇಖಕ ತೀ.ನಂ. ಶ್ರೀಕಂಠಯ್ಯನವರ ಸಾಹಿತ್ಯ ಪ್ರಕಾರಗಳು ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡಿವೆ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ನಯನ ಸಭಾಂಗಣದಲ್ಲಿ ಹೊಂಬಾಳೆ ಪ್ರತಿಭಾರಂಗ ಹಾಗೂ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ತೀ.ನ. ಶ್ರೀಕಂಠಯ್ಯನಗರ ಕವಿತೆಗಳ ಓದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಷ್ಯರು ತಮ್ಮ ಗುರುಗಳ ಅಭಿಪ್ರಾಯಗಳನ್ನು ವಿರೋಧಿಸುವುದು ತಪ್ಪಲ್ಲ ಎಂದರು.
ತಾನು ಇಂದು ಸಂಶೋಧಕನಾಗಿ ಇಷ್ಟೊಂದು ಎತ್ತರಕ್ಕೆ ಬೆಳೆಯಲು ತೀನಂಶ್ರೀಯವರು ಕಾರಣ ಎಂದು ಸ್ಮರಿಸಿದ ಚಿದಾನಂದಮೂರ್ತಿ, ಕನ್ನಡ ಸಾಹಿತ್ಯ ಪರಂಪರೆಗೆ ಶ್ರೀಕಂಠಯ್ಯನವರ ಕೊಡುಗೆ ಅನನ್ಯ. ತೀನಂ.ಶ್ರೀ ಕನ್ನಡ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳ ಮೇಲೆ ಪ್ರಭುತ್ವಹೊಂದಿದ್ದರು ಎಂದು ಸ್ಮರಿಸಿದರು.
ಅಧ್ಯಯನ ಹಾಗೂ ಸಂಶೋಧನೆಗೆ ವಿಶೇಷ ಆದ್ಯತೆ ನೀಡಿದ್ದ ತೀನಂಶ್ರೀಯವರು, ಅತ್ಯಂತ ಸರಳ ಜೀವನದ ಅಪರೂಪದ ವ್ಯಕ್ತಿ. ಇಂತಹ ವ್ಯಕ್ತಿಯ ವಿದ್ವತ್ತು ಮತ್ತಷ್ಟು ಪ್ರಚಾರಪಡಿಸುವ ಅಗತ್ಯವಿದೆ ಎಂದು ಚಿದಾನಂದಮೂರ್ತಿ ಇದೇ ವೇಳೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರ ಪುತ್ರ ಡಾ.ತೀನಂಶ್ರೀ.ನಾಗಭೂಷಣ, ಕವಿ, ವಿದ್ವಾಂಸರನ್ನು ಬೆಳೆಸುವುದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದ ನಮ್ಮ ತಂದೆ, ಬೇಂದ್ರೆ, ಪುತಿನ ಸೇರಿದಂತೆ ಹಲವು ಲೇಖಕರೊಂದಿಗೆ ಉತ್ತಮ ಒಡನಾಡ ಹೊಂದಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಿಧನರಾದ ಹಿರಿಯ ಸಾಹಿತಿ ಡಾ.ಸಾ.ಶಿ. ಮರುಳಯ್ಯ ನವರಿಗೆ ಒಂದು ನಿಮಿಷ ವೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಲೇಖಕ ಎಂ.ಎನ್.ವ್ಯಾಸರಾವ್, ಪತ್ತೂರು ನರಸಿಂಹ ನಾಯಕ್, ಎಸ್.ಮಧುಸೂದನ್, ಎಲ್.ಎನ್. ವಸಂತ ಕುಮಾರ್, ಡಾ. ಅರ್ಚನಾ ಭಟ್, ಜಿ.ಪಿ.ರಾಜಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.