ಸೋಲಿನಿಂದ ಆತ್ಮವಿಶ್ವಾಸ ಹೆಚ್ಚುತ್ತದೆ: ಮಾಸ್ಟರ್ ಆನಂದ್

Update: 2016-02-07 18:28 GMT

ಬೆಂಗಳೂರು, ಫೆ. 7: ಯಾವುದೇ ಒಂದು ಸ್ವರ್ಧೆಯಲ್ಲಿನ ಸೋಲು ಗೆಲುವಿನ ಬಗ್ಗೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಸೋತವರು ಯಾವುದೇ ಕಾರಣಕ್ಕೂ ಬೇಸರಪಟ್ಟುಕೊಳ್ಳದೆ ಮುಂದೆ ನಡೆಯುವ ಸ್ಪರ್ಧೆಗಳಿಗೆ ಸನ್ನದ್ಧರಾಗಿ ಮುನ್ನಡೆಯಬೇಕು ಎಂದು ಚಿತ್ರನಟ ಮಾಸ್ಟರ್ ಆನಂದ್ ಮಕ್ಕಳಿಗೆ ಸಲಹೆ ಮಾಡಿದ್ದಾರೆ.

ರವಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆರೆಂಜ್ ಟೆಕ್ ಸೆಲ್ಯೂಷನ್ಸ್ ವತಿಯಿಂದ ಆಯೋಜಿಸಲಾಗಿದ್ದ ಸೂಪರ್‌ಅವರ್ ರಸಪ್ರಶ್ನೆ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು.

 ಮಕ್ಕಳು ನಿರಂತರ ಗೆಲುವು ಪಡೆಯುತ್ತಿದ್ದರೆ ಮುಂದೆ ಭವಿಷ್ಯದಲ್ಲಿ ಒಂದು ಬಾರಿ ಆತಂಕವನ್ನು ಪಡಬೇಕಾಗುತ್ತದೆ. ಆದುದರಿಂದ ಮಕ್ಕಳು ಗೆಲುವು ಪಡೆಯುವುದಷ್ಟೇ ಮುಖ್ಯವಲ್ಲ. ಸೋಲಿನ ರುಚಿಯೂ ಅಗತ್ಯ. ಸೋಲನ್ನು ಸವಾಲಾಗಿ ಸ್ವೀಕರಿಸಬೇಕು. ಆ ನಿಟ್ಟಿನಲ್ಲಿ ಮುಂದೆ ಬರುವ ಸ್ಪರ್ಧೆಗಳಲ್ಲಿ ಹೆಚ್ಚಿನ ಪ್ರಯತ್ನ ಹಾಕಿ ಗೆಲುವು ಪಡೆಯಲು ಶ್ರಮಿಸಿಬೇಕು ಎಂದು ಕಿವಿಮಾತನ್ನು ಹೇಳಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಶ್ವೇಶ್ ರಾವ್ ಮಾತನಾಡಿ, ಪ್ರಸ್ತುತ ನಾವೆಲ್ಲಾ ಸ್ಪರ್ಧಾತ್ಮಕ ಯುಗದಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಮುಂದೆ ಬರುವಂತಹ ಎಲ್ಲ ಸ್ಪರ್ಧೆಗಳಲ್ಲಿ ಯಾವುದಕ್ಕೂ ಹೆದರಿಕೊಳ್ಳದೆ ನಾವು ಎದೆಯೊಡ್ಡಿ ಎದುರಿಸಬೇಕು. ಅದಕ್ಕಾಗಿ ಎಲ್ಲರೂ ಇಂದಿನಿಂದ ತಯಾರಾಗಬೇಕು. ಆ ನಿಟ್ಟಿನಲ್ಲಿ ಸಂಸ್ಥೆಯಿಂದ ಪ್ರತಿವರ್ಷ ಸೆಲ್ಯೂಷನ್ಸ್ ಅಂತರ್ ಶಾಲಾ ಸೂಪರ್‌ಅವರ್ ಕ್ವಿಜ್ ಸ್ವರ್ಧೆ ಏರ್ಪಡಿಸಲಿದೆ ಎಂದರು.

ನೃತ್ಯ ಸ್ಪರ್ಧೆಯಲ್ಲಿ ಜಯನಗರದ ಬಿಎಚ್‌ಎಸ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಮತ್ತು ವೆಂಕಟೇಶ್ವರ ಶಾಲೆಯ ವಿದ್ಯಾರ್ಥಿನಿಯರು ದ್ವಿತೀಯ ಬಹುಮಾನವನ್ನು ಪಡೆದು ಕೊಂಡರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಸೀನಿಯರ್ ವಿಭಾಗದಲ್ಲಿ ಲೌರಿ ಮೆಮೋರಿಯಲ್ ಪ್ರೌಢಶಾಲೆಯ ವಿದ್ಯಾರ್ಥಿ ಶರಂಗ್ ತಿಮ್ಮಯ್ಯ ಪ್ರಥಮ ಮತ್ತು ಶಾರದಾ ಶಾಲೆಯ ಎನ್.ಪ್ರಸನ್ನ ದ್ವಿತೀಯ ಬಹುಮಾನವನ್ನು ಪಡೆದುಕೊಂಡರು. ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಡಾ.ವಿಶ್ಣುಕಾಂತು ಚಟ್ಪಲ್ಲಿ, ಅರ್ಜುನ ಪ್ರಶಸ್ತಿ ವಿಜೇತ ಶರತ್ ಗಾಯಕ್ ವಾಡ, ಖೋಖೋ ಆಟಗಾರ ನಂಜುಂಡ ಎಲ್ಲಪ್ಪ, ವಿವಿ ಪುರಂ ವಾರ್ಡ್‌ನ ಬಿಬಿಎಂಪಿ ಸದಸ್ಯೆ ವಾಣಿ ವಿ.ರಾವ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News