×
Ad

ಕಡಲ ಚಿಪ್ಪಿನಲ್ಲಿ ಅರಳಿವೆ ಅಪರೂಪದ ಕಲಾಕೃತಿಗಳು!

Update: 2016-02-08 19:40 IST

ಕಡಲ ಕಿನಾರೆಯಲ್ಲಿ ದೊರೆಯುವ ವಿವಿಧ ಬಗೆಯ ಚಿಪ್ಪುಗಳಿಗೆ ತಮ್ಮ ಕಲೆಯ ಮೂಲಕ ವಿವಿಧ ಆಕಾರಗಳನ್ನು ನೀಡಿ ಮಾರಾಟಕ್ಕೆ ಸಿದ್ಧಗೊಳಿಸುವ ಕಾಯಕದಲ್ಲಿ ಸತ್ತಾರ್ ಕಳೆದ 25 ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸಮುದ್ರದ ಚಿಪ್ಪಿನಿಂದ ಕಲಾಕೃತಿಗಳನ್ನು ರಚಿಸುವ ಹವ್ಯಾಸ ಹೊಂದಿರುವವರು ಹಲವರಿದ್ದಾರೆ. ಆದರೆ ಕಲಾವಿದ ಎಂ.ಎ. ಸತ್ತಾರ್ ಮನೆಗಳ ದ್ವಾರಗಳಿಗೆ ನೇತಾಡಿಸುವ ಡೋರ್ ಕಾಟನ್, ಹಾಫ್ ಡೋರ್ ಕಾಟನ್, ಮನೆ ಅಥವಾ ಕಚೇರಿಯ ದ್ವೀಪಗಳಿಗೆ ಅಳವಡಿಸುವ ಲ್ಯಾಂಪ್ ಝೂಮರ್, ಪುಟ್ಟ ಆಕೃತಿಯ ಶಂಖ ಸಹಿತ ಇತರ ಚಿಪ್ಪುಗಳಿಂದ ತಯಾರಿಸಿದ ಕನ್ನಡಿಗಳು, ಶಂಖಗಳಿಂದ ಜೋಡಿಸಿದ ರಾಷ್ಟ್ರ ಪಕ್ಷಿ ನವಿಲಿನ ಆಕೃತಿಗಳ ಕಲಾಕೃತಿಗಳ ಮೂಲಕ ಕಪ್ಪೆ ಚಿಪ್ಪುಗಳಿಗೆ ಆಕರ್ಷಕ ರೂಪು ಕೊಡುವ ನಿಪುಣ ಕಲಾವಿದ. ಕಪ್ಪೆಚಿಪ್ಪುಗಳಿಂದ ತಯಾರಿಸಿದ ನೂರಾರು ಕಲಾಕೃತಿಗಳ ಮೂಲಕ ಎಲೆಮರೆಯ ಕಾಯಿಯಾಗೇ ಉಳಿದುಕೊಂಡಿರುವ ಎಂ.ಎ.ಸತ್ತಾರ್ ಸುರತ್ಕಲ್ ಸಮೀಪದ ಕೃಷ್ಣಾಪುರದ ನಿವಾಸಿ. ಕಳೆದ 25 ವರ್ಷಗಳಿಂದ ಪಣಂಬೂರು ಬೀಚ್‌ನಲ್ಲಿ ‘ಎಂ.ಎಸ್. ಸೀ ಶೆಲ್ ಕ್ರಾಫ್ಟ್ಸ್’ ಎಂಬ ಮಳಿಗೆಯನ್ನಿಟ್ಟು ಗ್ರಾಹಕರ ಅಭಿರುಚಿಗೆ ತಕ್ಕಂತೆ ತಮ್ಮ ಕುಂಚದಿಂದ ಕಡಲ ಚಿಪ್ಪಿನಲ್ಲಿ ಅದ್ಭುತ ಕಲಾಕೃತಿಗಳನ್ನು ಮೂಡಿಸುತ್ತಿದ್ದಾರೆ.

‘‘25 ವರ್ಷಗಳ ಹಿಂದೆ ವ್ಯಕ್ತಿಯೋರ್ವ ರಸ್ತೆಬದಿಯಲ್ಲಿ ಒಂದೆರಡು ಟೇಬಲ್‌ಗಳಿಟ್ಟು ಚಿಪ್ಪುಗಳನ್ನು ಮಾರಾಟ ಮಾಡುತ್ತಿದ್ದ. ಅದರಲ್ಲಿ ಆತನೇ ತಯಾರಿಸಿದ ಕೆಲವೇ ಕೆಲವು ಕಲಾಕೃತಿಗಳಿದ್ದವು. ಇದರಿಂದ ಪ್ರೇರಿತನಾದ ನಾನು ಸ್ವಂತ ಆಸಕ್ತಿಯಿಂದ ಕಡಲ ಕಿನಾರೆಯಲ್ಲಿ ದೊರೆಯುವ ಚಿಪ್ಪುಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಬೆಳೆಸಿಕೊಂಡೆ. ಅವುಗಳನ್ನು ಮನೆಗೆ ತಂದು ಜೋಡಿಸಿ ನಿರ್ದಿಷ್ಟ ರೂಪ ಮತ್ತು ಆಕೃತಿಯನ್ನು ನೀಡಲು ಪ್ರಯತ್ನಿಸುತ್ತಿದ್ದೆ. ಮೊದಲಿಗೆ ತ್ರಾಸದಾಯಕವಾಗಿ ಕಂಡಿದ್ದರೂ ಕ್ರಮೇಣ ಇನ್ನಷ್ಟು ಆಸಕ್ತಿ ಮೂಡಿ ಆ ವೃತ್ತಿ ಕರಗತವಾಯಿತು. ಅದನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದೇನೆ’’ ಎನ್ನುತ್ತಾರೆ ಸತ್ತಾರ್.

ಸತ್ತಾರ್ ಅವರ ಪ್ರಕಾರ ಕಡಲ ಕಿನಾರೆಯ ಮರಳಿನಲ್ಲಿ ದೊರೆಯುವ ವಿವಿಧ ರೀತಿಯ ಚಿಪ್ಪುಗಳಲ್ಲಿ 3750ಕ್ಕೂ ಅಧಿಕ ಬಗೆ ಶಂಖಗಳಿವೆಯಂತೆ. ಈ ಶಂಖಗಳ ಪೈಕಿ ಬರ್ಮಾ ಶೆಲ್, ಸಿಲ್ವರ್ ಕೂಡು, ಉಲ್ತಾನಿ, ರೆಡ್‌ಮುಲ್ಲಿ, ಪುಲ್ಲಿಮುಟ್ಟೈ ಮೊಲಾದವುಗಳು ಪ್ರಸಿದ್ಧಿಯಾಗಿವೆ. ಚಿಕ್ಕ ಗಾತ್ರದಿಂದ ದೊಡ್ಡ ಗಾತ್ರದವರೆಗಿನ ವಿವಿಧ ಬಣ್ಣದ 20ಕ್ಕೂ ಅಧಿಕ ಶಂಖದ ವಿವಿಧ ಮಾದರಿಯ ಕಲಾಕೃತಿಗಳು ಅವರ ಮಳಿಗೆಯಲ್ಲಿ ಮಾರಾಟಕ್ಕಿವೆ. 25ಕ್ಕೂ ಅಧಿಕ ಬಗೆಯ ಡೋರ್ ಕಾಟನ್, ಪುಟ್ಟ ಆಕೃತಿಯ ಶಂಖದಿಂದ ನಿರ್ಮಿಸಿದ 10ಕ್ಕೂ ಹೆಚ್ಚು ಬಗೆಯ ಲ್ಯಾಂಪ್ ಝೂಮರ್, ವಿವಿಧ ಬಗೆಯ ಕೀ ಪಂಚ್ ಸಹಿತ ಶಂಖಗಳ ವಿವಿಧ ಮಾದರಿಯ ಕಲಾಕೃತಿಗಳು ಗ್ರಾಹಕರನ್ನು ಸೆಳೆಯುವಂತಿದೆ.

ಕಡಲ ಕಿನಾರೆಯಲ್ಲಿ ದೊರೆಯುವ ವಿವಿಧ ಬಗೆಯ ಚಿಪ್ಪುಗಳಿಗೆ ತಮ್ಮ ಕಲೆಯ ಮೂಲಕ ವಿವಿಧ ಆಕಾರಗಳನ್ನು ನೀಡಿ ಮಾರಾಟಕ್ಕೆ ಸಿದ್ಧಗೊಳಿಸುವ ಕಾಯಕದಲ್ಲಿ ಸತ್ತಾರ್ ಕಳೆದ 25 ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಂ.ಎ.ಸತ್ತಾರ್ ಹೇಳುವಂತೆ.. ಎಲ್ಲಾ ಬಗೆಯ ಚಿಪ್ಪುಗಳು ಸಮುದ್ರ ತೀರದಲ್ಲಿ ಅಲಭ್ಯ ಇರುವುದರಿಂದ ಇತ್ತೀಚಿನ ಕೆಲವು ವರ್ಷಗಳಲ್ಲಿ ನಾನು ಕಲಾಕೃತಿಗೆ ಸಂಬಂಧಿಸಿದ ಕಚ್ಚಾ ಸಾಮಗ್ರಿಗಳನ್ನು ಮಧುರೈನ ರಾಮೇಶ್ವರಂ ಮತ್ತು ಚೆನ್ನೈನ ಕಡ್ಲೂರುನಿಂದ ಖರೀದಿಸುತ್ತಿದ್ದೇನೆ. ಇಂತಹ ಕಚ್ಚಾ ವಸ್ತುಗಳನ್ನು ಮನೆಯಲ್ಲೇ ಜೋಡಿಸಿ ವಿವಿಧ ಆಕಾರ ನೀಡಿ ಮಾರಾಟಕ್ಕೆ ಸಿದ್ಧಗೊಳಿಸುತ್ತಿದ್ದೇನೆ. ಚಿಪ್ಪಿನಿಂದ ನಿರ್ಮಿತ ಮನೆ, ಕಚೇರಿಗಳಿಗೆ ಆಲಂಕಾರಿಕ ವಸ್ತುಗಳು, ಮಹಿಳೆಯರ ಆಭರಣದ ವಸ್ತುಗಳು, ಮಕ್ಕಳ ಆಟಿಕೆ, ಗೋಡೆ ಕನ್ನಡಿ, ಶೋಕೇಸ್‌ಗಳಲ್ಲಿ ಇಡುವ ಆಕರ್ಷಕ ಸಾಮಗ್ರಿಗಳ ಸಹಿತ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಕಲಾಕೃತಿಗಳ ಸಂಗ್ರಹವಿದೆ ಎನ್ನುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News