ಗುಜರಾತ್ ಗಲಭೆ ಸಂತ್ರಸ್ತರ ಕಷ್ಟದೆದುರು ನನ್ನದು ಗೌಣ,
ನ್ಯಾಯಕ್ಕಾಗಿ ಹೋರಾಡಿದ ನಿವೃತ್ತ ಪೊಲೀಸ್ ಅಧಿಕಾರಿಯ ಬಿಚ್ಚುನುಡಿ
ಗುಜರಾತ್ ಗಲಭೆಗೆ ಕಾರಣವಾದ ಸಬರಮತಿ ಎಕ್ಸ್‌ಪ್ರೆಸ್ ರೈಲು ಸುಟ್ಟುಹಾಕಿದ ಘಟನೆ ನಡೆದದ್ದು 2002ರ ಫೆಬ್ರವರಿ 27ರಂದು. ಇದಕ್ಕೆ ಸ್ವಲ್ಪಮುನ್ನ ಐಪಿಎಸ್ ಅಧಿಕಾರಿ ರಾಹುಲ್ ಶರ್ಮಾ ಅವರನ್ನು ವಡೋಧರದಿಂದ ಭಾವನಗರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾಯಿಸಲಾಗಿತ್ತು.
ಇಲ್ಲಿ ಕೋಮುದಳ್ಳುರಿ ವಿಕೋಪಕ್ಕೆ ಹೋದಾಗ 10 ಸಾವಿರ ಮಂದಿ ಗಲಭೆಕೋರರಿಂದ ಅವರು 380 ಮುಸ್ಲಿಮ್ ಮಕ್ಕಳನ್ನು ರಕ್ಷಿಸಿದರು. ಸಹಜವಾಗಿಯೇ ಈ ಸಾಹಸ ಇಲಾಖಾ ವರಿಷ್ಠರು ಹಾಗೂ ಹಿರಿಯ ರಾಜಕಾರಣಿಗಳ ಹುಬ್ಬೇರಿಸಿತ್ತು. ರಾಹುಲ್ ಶರ್ಮಾ ಅವರ ಸರಣಿ ವರ್ಗಾವಣೆ, ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಕೆ ಹಾಗೂ ಷೋಕಾಸು ನೋಟಿಸ್‌ನಂಥ ದ್ವೇಷದ ಕ್ರಮಗಳು 2015ರಲ್ಲಿ ಅವರು ಸ್ವಯಂನಿವೃತ್ತಿ ಪಡೆಯುವವರೆಗೂ 23 ವರ್ಷ ನಿರಂತರವಾಗಿ ನಡೆದವು.
2002ರಲ್ಲಿ ಶರ್ಮಾ ಅವರನ್ನು ಭಾವನಗರದಿಂದ ಅಹ್ಮದಾಬಾದ್ ನಿಯಂತ್ರಣ ಕೇಂದ್ರದ ಡಿಸಿಪಿಯಾಗಿ ವರ್ಗಾಯಿಸಲಾಯಿತು. ನರೋಡಾ ಪಾಟಿಯಾ ಹಾಗೂ ಗುಲ್ಬರ್ಗ್ ಸೊಸೈಟಿ ಹಿಂಸಾಚಾರದ ಬಗ್ಗೆ ತನಿಖೆ ನಡೆಸುವ ವೇಳೆ ಅವರು, ಅಹ್ಮದಾಬಾದ್ ಗಲಭೆ ಸಂದರ್ಭ ಬಂದ ಹಾಗೂ ಅಲ್ಲಿಂದ ಮಾಡಲಾದ ಎಲ್ಲ ಕರೆಗಳ ವಿವರವನ್ನು ಮೊಬೈಲ್ ಸೇವಾ ಕಂಪೆನಿಗಳಿಂದ ಪಡೆದರು.
ಈ ಮಾಹಿತಿಯಲ್ಲಿ ಎಲ್ಲ ಹಿರಿಯ ಸಚಿವರು, ಪೊಲೀಸ್ ಅಧಿಕಾರಿಗಳು, ಆರೆಸ್ಸೆಸ್ಸ ಹಾಗೂ ವಿಎಚ್‌ಪಿ ಮುಖಂಡರ ವಿರುದ್ಧದ ಆರೋಪಗಳಿಗೆ ಬೇಕಾದ ಎಲ್ಲ ಅಂಶಗಳು ಒಳಗೊಂಡಿದ್ದವು. ಇದನ್ನು ಸಿ.ಡಿ. ರೂಪದಲ್ಲಿ ಅಪರಾಧ ವಿಭಾಗಕ್ಕೆ ಸಲ್ಲಿಸಿದರು. ಆದರೆ ಆ ಬಳಿಕ ಅದನ್ನು ಕಳೆದು ಹೋಗಿದೆ ಎಂದು ಬಿಂಬಿಸಲಾಯಿತು. 2002ರ ಗಲಭೆ ಬಗ್ಗೆ ವಿಚಾರಣೆಗೆ ನೇಮಿಸಿದ್ದ ನಾನಾವತಿ ಆಯೋಗದ ಮುಂದೆ ಆ ಮಾಹಿತಿಗಳ ಸಿ.ಡಿ.ಯ ಇನ್ನೊಂದು ಪ್ರತಿಯನ್ನು ಸಲ್ಲಿಸಿದರು.
ಇದೇ ವೇಳೆ ಅಪರಾಧ ವಿಭಾಗ ಶರ್ಮಾ ವಿರುದ್ಧ ಪುರಾವೆಗಳನ್ನು ತಿದ್ದಿದ ಆರೋಪ ಹೊರಿಸಿತು. ಈ ಆರೋಪಗಳಲ್ಲಿ ಹುರುಳಿಲ್ಲ ಎನ್ನುವುದು ಸಾಬೀತಾದಾಗ 2011ರ ಆಗಸ್ಟ್‌ನಲ್ಲಿ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು. ಇದರ ಪರಿಣಾಮವಾಗಿ ಅವರ ಭಡ್ತಿ ಅವಕಾಶ ತಪ್ಪಿಹೋಯಿತು.
ಕೆಲ ದಿನಗಳ ಹಿಂದೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಈ ಆರೋಪಗಳನ್ನು ವಜಾಗೊಳಿಸಿದೆ. ರಾಜಧರ್ಮಕ್ಕೆ ಅನುಗುಣವಾಗಿ ಸರಕಾರ ತನ್ನ ಪವಿತ್ರ ಜವಾಬ್ದಾರಿಯನ್ನು ಉಲ್ಲಂಘಿಸಿದೆ ಎಂದು ಸಿ.ಡಿ. ಮಾಹಿತಿಯನ್ನು ಮುಚ್ಚಿಟ್ಟ ಸರಕಾರದ ಕ್ರಮವನ್ನು ಕಟುಶಬ್ದಗಳಲ್ಲಿ ಟೀಕಿಸಿದೆ.
ಸರಕಾರವನ್ನು ಬಡಿದೆಚ್ಚರಿಸುವ ರೀತಿಯ ತೀರ್ಪಿನಲ್ಲಿ ಸಿಎಟಿ, ಶರ್ಮಾ ವಿರುದ್ಧದ ಆರೋಪಪಟ್ಟಿ ಕಾನೂನುಬಾಹಿರ, ಕ್ರಮವಿರೋಧಿ, ಕುಚೋದ್ಯದಿಂದ ಕೂಡಿದ ಹಾಗೂ ದುರುದ್ದೇಶಪೂರಿತ ಕ್ರಮ. ಇದರಿಂದಾಗಿ ಮೊಬೈಲ್ ಟ್ರ್ಯಾಕಿಂಗ್ ದಾಖಲೆಗಳನ್ನು ಹತ್ತಿಕ್ಕಲಾಗಿದೆ. ನೂರಾರು ಮಂದಿ ಅಮಾಯಕರ ಜೀವ ಬಲಿ ಪಡೆದ ದುಷ್ಕರ್ಮಿಗಳ ಹಿಂಸಾತ್ಮಕ, ಅಮಾನವೀಯ ಕೃತ್ಯಕ್ಕೆ ಲಾಭವಾಗುವಂತೆ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದೆ.
ಇದು ಶರ್ಮಾ ಅವರ ಪರವಾದ ಸಮರ್ಥನೆಯ ದೊಡ್ಡ ಧ್ವನಿಯಾಗಿ ಪ್ರಕಟವಾಗಿದೆ. ಸಿಎಟಿ ತೀರ್ಪಿನ ಬಗ್ಗೆ ಅವರು ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರ ಜತೆಗಿನ ಸಂವಾದದ ಪ್ರಮುಖ ಅಂಶಗಳು ಇಲ್ಲಿವೆ.
- ನಿಮ್ಮ ವಿರುದ್ಧದ ಆರೋಪಪಟ್ಟಿ, ನೋಟಿಸ್‌ಗಳ ಬಗ್ಗೆ ಹಾಗೂ ಅವುಗಳ ಪರಿಣಾಮಗಳ ಬಗ್ಗೆ ಹೇಳಬಹುದೇ?
- ವಿಭಾಗದ ಭಡ್ತಿ ಸಮಿತಿ 2013ರ ಡಿಸೆಂಬರ್ 7ರಂದು ಸಭೆ ಸೇರಿ ನನ್ನ ಭಡ್ತಿ ನಿರಾಕರಿಸಿತು. ಇದಕ್ಕೆ ಹಿಂದಿನ ದಿನವಷ್ಟೇ ಹೊಸ ಹಾಗೂ ಹಿಂದಿನ ಆರೋಪಗಳಿಗಿಂತ ಗಂಭೀರವಾಗಿದ್ದ ಆರೋಪಪಟ್ಟಿಯನ್ನು ಇಲಾಖೆ ನನಗೆ ನೀಡಿತ್ತು. ನಾನು ರಾಜ್‌ಕೋಟ್‌ನಲ್ಲಿ ಡಿಐಜಿ ಆಗಿದ್ದೆ. ಅಲ್ಲಿದ್ದ ಏಕೈಕ ಗಜೆಟೆಡ್ ಅಧಿಕಾರಿ ನಾನು. ಆದರೆ ನನ್ನ ಅನುಪಸ್ಥಿತಿಯಲ್ಲಿ ಕೆಲ ಕಚೇರಿ ಪತ್ರವ್ಯವಹಾರಗಳಿಗೆ ಗಜೆಟೆಡ್ ಅಧಿಕಾರಿಯಲ್ಲದವರು ಸಹಿ ಕಾನೂನುಬಾಹಿರವಾಗಿ ಸಹಿ ಮಾಡುತ್ತಿದ್ದರು. ಇದು 1995ರಲ್ಲಿ ರಾಜ್‌ಕೋಟ್ ಕಚೇರಿ ಆರಂಭವಾದಾಗಿನಿಂದಲೂ ನಡೆದುಕೊಂಡು ಬಂದ ರೂಢಿಯಾಗಿತ್ತು. ನನ್ನ ವರ್ಗಾವಣೆ ಬಳಿಕವೂ ಮುಂದುವರಿದಿದೆ. ದುರುದ್ದೇಶದಿಂದ ಇಡೀ ಪ್ರಕರಣ ಹುಟ್ಟುಹಾಕಲಾಗಿದೆ.
ಇತ್ತೀಚಿನ ಷೋಕಾಸ್ ನೋಟಿಸ್‌ನಲ್ಲಿ, ಖಾಸಗಿ ಉದ್ದೇಶಗಳಿಗಾಗಿ ಸರಕಾರಿ ವಾಹನ ಬಳಕೆ ಮಾಡಿಕೊಂಡ ಬಗ್ಗೆ ಹಾಗೂ ಮೂರು ತಿಂಗಳ ಬಳಿಕ ಅದಕ್ಕೆ ಹಣ ಪಾವತಿ ಮಾಡಿದ ಆರೋಪ ಮಾಡಲಾಗಿದೆ. ಇದಕ್ಕೆ ಅವರು ಬಡ್ಡಿದರ ಅಥವಾ ದಂಡ ವಿಧಿಸಿದ್ದರೆ ಗರಿಷ್ಠ ಎಂದರೆ 10 ರೂಪಾಯಿ ಆಗುತ್ತಿತ್ತು. ಹೀಗೆ 10 ರೂಪಾಯಿಗೆ ಐಪಿಎಸ್ ಅಧಿಕಾರಿಗೆ ಷೋಕಾಸು ನೋಟಿಸ್ ನೀಡಿದರು. ಇಡೀ ರಾಜ್ಯದ ಆಡಳಿತ ಯಂತ್ರ ನನ್ನ ವಿರುದ್ಧ ಸನ್ನದ್ಧವಾದರೂ, ಅವರಿಗೆ ಸಿಕ್ಕಿರುವುದು ಅದೊಂದು ಕಾರಣ ಮಾತ್ರ! ಇದು ನನ್ನ ವಿರುದ್ಧದ ತೀರ್ಪೇ ಅಥವಾ ಶುಭ ಹಾರೈಕೆಯೇ?. ಇಂದಿನವರೆಗೆ ಈಗ ನನ್ನ ಮೇಲೆ ಯಾವ ಆರೋಪಪಟ್ಟಿ ಕೂಡಾ ಬಾಕಿ ಉಳಿದಿಲ್ಲ.
- 2000ದ ಹಿಂಸಾಚಾರ ಸಂದರ್ಭದಲ್ಲಿ ಸುಮಾರು 400 ಮುಸಲ್ಮಾನರನ್ನು ಉಳಿಸುವ ಸಲುವಾಗಿ ಗಲಭೆಕೋರರ ಮೇಲೆ ಗುಂಡು ಹಾರಿಸಲು ನೀವು ಪೊಲೀಸ್ ಪಡೆಗೆ ಆದೇಶಿಸಿದ ಘಟನೆಯನ್ನು ವಿವರಿಸಬಹುದೇ?
- ಅಂದು 2002ರ ಮಾರ್ಚ್ 2. ನಾನು ಆಗಷ್ಟೇ ಅಲ್ಲಿಗೆ ವರ್ಗಾವಣೆಯಾಗಿದ್ದೆ. ಗುಜರಾತ್‌ನ ಇತರೆಡೆಗಳಿಗಿಂತ ಭಿನ್ನವಾಗಿ ಭಾವನಗರದಲ್ಲಿ ಗಲಭೆ ಆರಂಭವಾದದ್ದು ಮಾರ್ಚ್ ಒಂದರಂದು. ಆಗ ನಮ್ಮಲ್ಲಿ ಶಿಫ್ಟ್‌ನಲ್ಲಿ 100 ಮಂದಿಯಷ್ಟೇ ಇದ್ದರು. ಮಧ್ಯಾಹ್ನ 3ರ ಸುಮಾರಿಗೆ ಭಾವನಗರದಿಂದ 14 ಕಿಲೋಮೀಟರ್ ದೂರದ ಮದ್ರಸಕ್ಕೆ ಅಧಿಕ ಭದ್ರತೆ ಬೇಕು ಎಂದು ಕೋರಿ ಇನ್‌ಸ್ಪೆಕ್ಟರ್ ಒಬ್ಬರು ಕರೆ ಮಾಡಿದರು. ಇದು ಅನಿರೀಕ್ಷಿತವಾದ್ದರಿಂದ ಅದನ್ನು ಪರಿಶೀಲಿಸಲು ಮುಂದಾದೆ.
ನಾನು ಅಲ್ಲಿಗೆ ತಲುಪಿದಾಗ ಐದರಿಂದ ಹತ್ತು ಸಾವಿರ ಮಂದಿಯ ಗುಂಪು ಸೇರಿತ್ತು. ಚಿಂದಿ ಹಾಗೂ ಟೈರ್‌ಗಳನ್ನು ಸುಟ್ಟಿತ್ತು. ಗಲಭೆ ಆರಂಭವಾಗಿ ಸುಮಾರು 20 ಗಂಟೆ ಆಗಿತ್ತು. ಅಲ್ಲಿ ಗುಂಡು ಹಾರಿಸುವುದಕ್ಕಿಂತ ಗಲಭೆಕೋರರನ್ನು ಎದುರಿಸುವುದೇ ಸೂಕ್ತ ಎನಿಸಿತು. ಆದ್ದರಿಂದ ಮೊದಲು ಎಚ್ಚರಿಕೆ ನೀಡಿದೆವು. ಆದರೆ ಯಾವ ಪ್ರಯೋಜನವೂ ಆಗಲಿಲ್ಲ. ನನ್ನಲ್ಲಿ ಸಣ್ಣ ಬಂದೂಕು ಹಾಗೂ 3.3 ರೈಫಲ್ ಇತ್ತು. ಆದರೆ ನಾನು ಸಣ್ಣ ಬಂದೂಕನ್ನೇ ಆಯ್ದುಕೊಂಡೆ. ಏಕೆಂದರೆ ಗಾಯವಾಗುತ್ತದೆಯೇ ವಿನಃ ಅದರಿಂದ ಯಾರೂ ಸಾಯುವ ಸಾಧ್ಯತೆ ಇರಲಿಲ್ಲ. ಯಾರೂ ಸಾಯಬಾರದು ಎನ್ನುವುದು ನನ್ನ ಆದ್ಯತೆಯಾಗಿತ್ತು. ನನ್ನ ತತ್ವಕ್ಕೆ ಅನುಗುಣವಾಗಿ ಗುಂಡು ಹಾರಿಸಲು ಸಿಬ್ಬಂದಿಗೆ ಆದೇಶ ನೀಡುವ ನಾನು ಮೊದಲ ಗುಂಡು ಹಾರಿಸುತ್ತಿದ್ದೆ.
ಆದ್ದರಿಂದ ನಾನು ಕೈಗೋವಿಯಿಂದ ಗುಂಡು ಹಾರಿಸಿದೆ. ಭಾವನಗರ ಪೊಲೀಸರು ಏನು ಮಾಡುತ್ತಿದ್ದಾರೆ ಎನ್ನುವುದು ಗಲಭೆಕೋರರಿಗೆ ಅರ್ಥವಾಯಿತು. ಆದ್ದರಿಂದ ಬಹುತೇಕ ಮಂದಿ ಪರಾರಿಯಾದರು. ಕಟ್ಟಾ ಗಲಭೆಕೋರರು ಮಾತ್ರ ಉಳಿದುಕೊಂಡರು. ಗುಂಪು ಚದುರುತ್ತಿದ್ದಂತೆ ನಾನು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಗ್ರಾಮಸ್ಥರನ್ನು ಕುರಿತು, ಇದೇ ರೀತಿ ನೀವು ಮುಂದುವರಿದರೆ, ಸಂಜೆಯ ವೇಳೆಗೆ ನಿಮ್ಮ ಗ್ರಾಮದಲ್ಲಿ ಶೋಕಸಭೆ ನಡೆಯಬೇಕಾಗುತ್ತದೆ ಎಂದು ಎಚ್ಚರಿಸಿದೆ. ಮದ್ರಸ ಮೇಲಿನ ದಾಳಿ ನಿಲ್ಲಿಸದಿದ್ದರೆ, ಗುಂಡು ಹಾರಿಸುವುದು ಅನಿವಾರ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಇದೇ ವೇಳೆ ಭಾವನಗರ ನಗರಪ್ರದೇಶವನ್ನು ಕೂಡಾ ಹೆಚ್ಚು ಹೊತ್ತು ಹಾಗೆಯೇ ಬಿಡುವಂತಿರಲಿಲ್ಲ. ಅಹಿತಕರ ಘಟನೆ ನಡೆದರೆ ಗುಂಡು ಹಾರಿಸಲು ಹಿಂಜರಿಯಬೇಡಿ ಎಂದು ಇನ್‌ಸ್ಪೆಕ್ಟರ್‌ಗೆ ಆದೇಶ ನೀಡಿದೆ. ಮದ್ರಸದ 380 ವಿದ್ಯಾರ್ಥಿಗಳು ಹಾಗೂ 20 ಮಂದಿ ಬೋಧಕ ಸಿಬ್ಬಂದಿಯನ್ನು ರಾತ್ರಿ ವೇಳೆ ಸ್ಥಳಾಂತರಿಸುವುದಾಗಿ ಹೇಳಿದೆ. ಈ ಆದೇಶದೊಂದಿಗೆ ಭಾವನಗರಕ್ಕೆ ವಾಪಸಾದೆ. ಆದರೆ ಸಂಜೆ ವೇಳೆ ಮತ್ತೆ ಮದ್ರಸ ಸುತ್ತ ಜನ ಗುಂಪು ಸೇರಿದರು. ಆಗ ಇನ್‌ಸ್ಪೆಕ್ಟರ್ ಒತ್ತಡಕ್ಕೆ ಮಣಿಯಲಿಲ್ಲ. ಯಾರು ಗುಂಡು ಹಾರಿಸಿದ್ದು ಎಂದು ನನಗೆ ನೆನಪಿಲ್ಲ. ದುರದೃಷ್ಟವಶಾತ್ ಇಬ್ಬರು ಅಸುನೀಗಿದರು.
- 400 ಮಂದಿಯ ರಕ್ಷಣಾ ಕಾರ್ಯ ಹೇಗೆ ನಡೆಯಿತು?
- ರಾತ್ರಿ 9ರ ವೇಳೆಗೆ ನಾನು ವನಗರದಿಂದ ಹೊರಟೆ. ಮದ್ರಸಕ್ಕೆ ಒಂದಷ್ಟೇ ಸಂಪರ್ಕ ರಸ್ತೆ ಇತ್ತು. ರಸ್ತೆಯಲ್ಲಿ ಟೈರುಗಳನ್ನು ಉರಿಸುತ್ತಿದ್ದುದು ಕಾಣುತ್ತಿತ್ತು. ಆದ್ದರಿಂದ ಮದ್ರಸ ತಲುಪಲು ಪೊಲೀಸರಿಗೆ ಬೇರೆ ಮಾರ್ಗವೇ ಇರಲಿಲ್ಲ. ಆದರೆ ಪಕ್ಕದ ಗ್ರಾಮದ ಕಚ್ಚಾ ರಸ್ತೆಯ ಮೂಲಕ ಸಂಚರಿಸಿ ನಾವು ಮದ್ರಸ ತಲುಪಿದೆವು. ಅವರನ್ನು ಹೊರಕ್ಕೆ ಕರೆತರುವಲ್ಲಿ ಎರಡು ಸವಾಲುಗಳಿದ್ದವು. ಒಂದು ದೊಡ್ಡ ಗುಂಪು ಎದುರು ಕಾಯುತ್ತಿತ್ತು. ಹಾಗೂ ಇನ್ನೊಂದು 400 ಮಂದಿಗೆ ಕೇವಲ ಮೂರು ಬಸ್ಸುಗಳು ನಮ್ಮ ಬಳಿ ಇದ್ದವು. ಹೇಗೋ ಎಲ್ಲರನ್ನೂ ಅದರಲ್ಲಿ ತುಂಬಿದೆವು. ಆ ಸಂದರ್ಭದಲ್ಲಿ ನಾನು ಸಹೋದ್ಯೋಗಿಗಳಿಗೆ ಸೂಚನೆ ನೀಡಿ, ಯಾವ ಘರ್ಷಣೆಗೂ ಮುಂದಾಗಬೇಡಿ. ಏಕೆಂದರೆ 400 ಮಂದಿಯನ್ನು ಭಾವನಗರದ ಇಬ್ರಾಹೀಂ ಮಸೀದಿಗೆ ಸುರಕ್ಷಿತವಾಗಿ ಸೇರಿಸುವುದು ಮುಖ್ಯ ಎಂದು ಹೇಳಿದೆ.
ನಾನು ಬಸ್ ಜತೆಗೇ ಪ್ರಯಾಣಿಸಲು ನಿರ್ಧರಿಸಿದೆ. ಏಕೆಂದರೆ ನಮ್ಮ ವಾಹನ ನೋಡಿದ ಮೇಲೆ ಯಾರೂ ಬಸ್ಸುಗಳ ಮೇಲೆ ದಾಳಿ ಮಾಡುವ ಧೈರ್ಯ ತೋರುವುದಿಲ್ಲ ಎಂಬ ಖಾತ್ರಿ ಇತ್ತು. ನನ್ನ ವೈರ್‌ಲೆಸ್ ಧ್ವನಿಯನ್ನು ದೊಡ್ಡ ಸ್ವರಕ್ಕೆ ಏರಿಸಲು ಸೂಚಿಸಿದೆ. ಏಕೆಂದರೆ ನಾನು ಹಾಗೂ ನನ್ನ ಗನ್‌ಮ್ಯಾನ್ ಮಾತ್ರ ಜತೆಗೆ ಇಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗಲಿ ಎನ್ನುವುದು ಉದ್ದೇಶವಾಗಿತ್ತು. ಆದ್ದರಿಂದ ಎಲ್ಲರನ್ನೂ ಸುರಕ್ಷಿತವಾಗಿ ಭಾವನಗರ ತಲುಪಿಸಲು ಸಾಧ್ಯವಾಯಿತು.
- ಕೆಲವೇ ದಿನಗಳಲ್ಲಿ ನಿಮ್ಮನ್ನು ಭಾವನಗರದಿಂದ ವರ್ಗಾಯಿಸಲಾಯಿತು?
-ಫೆೆಬ್ರವರಿ 17ರಂದು ಡಿಐಜಿಯಾಗಿ ಭಾವನಗರಕ್ಕೆ ವರ್ಗಾವಣೆಗೊಂಡ ನನ್ನನ್ನು ಮಾರ್ಚ್ 26ರಂದು ಅಹ್ಮದಾಬಾದ್‌ನ ನಿಯಂತ್ರಣ ಕಚೇರಿಗೆ ಡಿಸಿಪಿಯಾಗಿ ವರ್ಗಾಯಿಸಲಾಯಿತು.
- ಗಲಭೆಯ ತನಿಖೆ ಹೊಣೆ ಇದ್ದ ದೊಡ್ಡ ಜವಾಬ್ದಾರಿಗೆ ನಿಮ್ಮನ್ನು ವರ್ಗಾಯಿಸಿದ್ದು ಅಚ್ಚರಿಯಲ್ಲವೇ?
-ನಾನು ಲಭ್ಯವಿದ್ದ ಕಾರಣ ಪಾಟಿಯಾ ಹಾಗೂ ಗುಲ್ಬರ್ಗ್ ಸೊಸೈಟಿ ತನಿಖಾ ತಂಡಕ್ಕೆ ಸೇರಲು ನನಗೆ ಸೂಚಿಸಲಾಯಿತು. ವಿನಾಶ ಕಾಲೇ ವಿಪರೀತ ಬುದ್ಧಿ ಎಂಬ ನಾಣ್ನುಡಿಯೊಂದಿದೆ. ನಿಮ್ಮ ಕಾಲ ಚೆನ್ನಾಗಿಲ್ಲ ಎಂದಾದಾಗ ನೀವು ತಪ್ಪು ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತೀರಿ.
- ಭಾವನಗರ ಹಿಂಸಾಚಾರದ ಹಿಂದೆ ಯಾವ ಬಗೆಯ ಸಾಂಸ್ಥಿಕ ವ್ಯವಸ್ಥೆ ಇತ್ತು?
- ಭಾವನಗರದಲ್ಲಿ ನಾನು ಅತ್ಯಂತ ಹಿರಿಯ ಪೊಲೀಸ್ ಅಧಿಕಾರಿ. ಹಲವು ಮಂದಿ ನನ್ನ ಕಾರ್ಯದಲ್ಲಿ ಹಸ್ತಕ್ಷೇಪಕ್ಕೆ ಪ್ರಯತ್ನ ಮಾಡಿದರೂ ಯಶಸ್ವಿಯಾಗುವುದಿಲ್ಲ ಎಂದು ತಿಳಿದಿದ್ದರು. ಮಾರ್ಚ್ 21ರಂದು ಮತ್ತೊಂದು ಗುಂಪು ಗಲಭೆ ಸೃಷ್ಟಿಸುವ ಪ್ರಯತ್ನ ನಡೆಸಿತು. ರಿಕ್ಷಾದಲ್ಲಿ ಎರಡು ಬ್ಯಾರೆಲ್ ತುಂಬಾ ಸೀಮೆಎಣ್ಣೆ ಸಾಗಿಸುತ್ತಿದ್ದುದನ್ನು ನಾವು ಪತ್ತೆ ಮಾಡಿದೆವು. ನಮ್ಮ ಪಡೆ ಅದನ್ನು ವಶಕ್ಕೆ ಪಡೆಯಿತು. ಇದರಿಂದ 20 ಮಂದಿ ನಮ್ಮ ಬಳಿಗೆ ಬಂದರು. ಅವರನ್ನು ತಕ್ಷಣ ಬಂಧಿಸಿದಾಗ, ಅವರ ಬಿಡುಗಡೆಗಾಗಿ ಉಪ ಡಿಜಿಪಿ ಚಕ್ರವರ್ತಿಯೂ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳ ಮೂಲಕ ಒತ್ತಡ ಹೇರಿದರು. ಅವರು ಎದುರು ಬಾರದಿದ್ದರೂ, ಅವರಿಂದ ಸೂಚನೆಗಳು ಸ್ಪಷ್ಟವಾಗಿದ್ದವು.
- ನೀವು ಅಹ್ಮದಾಬಾದ್‌ನಲ್ಲಿ ವಿಚಾರಣೆ ಆರಂಭಿಸಿದ್ದು ದೊಡ್ಡ ವಿವಾದ ಹಾಗೂ ನಿಮ್ಮ ವಿರುದ್ಧದ ಆರೋಪಗಳನ್ನು ಹುಟ್ಟುಹಾಕಿತು. ಗಲಭೆ ಬಗೆಗಿನ ಪ್ರಮುಖ ದಾಖಲೆ ಎನಿಸಿದ ಸಿ.ಡಿ. ತಯಾರಿಸಿದ ಬಗೆ ಹಾಗೂ ಅದರ ಅಂಶಗಳ ಬಗ್ಗೆ ವಿವರಿಸಬಹುದೇ?
-ಅಹ್ಮದಾಬಾದ್ ನಗರದಲ್ಲಿ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ವಿನಿಮಯವಾದ ದೂರವಾಣಿ ಕರೆಗಳ ಬಗೆಗಿನ ಮಾಹಿತಿಯನ್ನು ಒಳಗೊಂಡ ಸಿ.ಡಿ. ಅದು. ಆಗ ಎಟಿ ಆ್ಯಂಡ್‌ಟಿ ಹಾಗೂ ಸೆಲ್‌ಫೋರ್ಸ್ ಮಾತ್ರ ಆಗ ಕಾರ್ಯನಿರ್ವಹಿಸುತ್ತಿತ್ತು. ಮೊಬೈಲ್ ಕಾರ್ಯನಿರ್ವಹಿಸುವ ಕ್ರಮವೆಂದರೆ, ಯಾವ ಸ್ಥಳದಿಂದ ಕರೆ ಮಾಡಲಾಗಿದೆ ಎನ್ನುವುದು ದಾಖಲಾಗುತ್ತದೆ. ಎಲ್ಲ ಟವರ್‌ಗಳ ಕವರೇಜನ್ನು ಮೂರು ಭಾಗವಾಗಿ ವಿಂಗಡಿಸಿ 120 ಡಿಗ್ರಿಗೆ ನಿಗದಿಪಡಿಸಲಾಗಿರುತ್ತದೆ. ಐಐಟಿ ಕಾನ್ಪುರದಲ್ಲಿ ಎಂಜಿನಿಯರಿಂಗ್ ಪಡೆದ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ನನಗೆ ಸ್ಪಷ್ಟ ಕಲ್ಪನೆ ಇತ್ತು.
ಗಲಭೆ ಸಂದರ್ಭದಲ್ಲಿ ಗುಂಪುಗಳನ್ನು ಬೆಳೆಸಲು ಮೊಬೈಲ್ ಏಕೈಕ ಸಾಧನವಾಗಿತ್ತು. ರಸ್ತೆವಾರು ಯೋಜನೆ ರೂಪಿಸಿ, ಎಲ್ಲಿಗೆ ಬೆಂಕಿ ಹಚ್ಚಬೇಕು, ಯಾರನ್ನು ಗುರಿ ಮಾಡಬೇಕು ಎಂಬ ಯೋಜನೆಯೂ ನಡೆದಿತ್ತು. ಆದ್ದರಿಂದ ಒಂದು ಗುಂಪನ್ನು ಯಾರು ನಿಯಂತ್ರಿಸುತ್ತಿದ್ದ ಎಂದು ತಿಳಿಯಬೇಕಾದರೆ, ಆತನ ಮೊಬೈಲ್ ಟ್ರ್ಯಾಕ್ ಮಾಡಿದರೆ ಆತ ಎಲ್ಲಿದ್ದಾನೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು. ಆದ್ದರಿಂದ ಸತ್ಯ ತಿಳಿಯಲು ಪ್ರಮುಖ ಹಾಗೂ ವೈಜ್ಞಾನಿಕ ನೆರವಾಗಿ ಸಿ.ಡಿ. ಸಹಕರಿಸಿತು.
- ನೀವು ಟ್ರ್ಯಾಕ್ ಮಾಡಿದ ಪ್ರಮುಖ ವ್ಯಕ್ತಿಗಳು ಯಾರು?
-ತನಿಖೆ ಇನ್ನೂ ಪ್ರಗತಿಯಲ್ಲಿರುವುದರಿಂದ ಅವರ ಹೆಸರು ಹೇಳಲು ನಾನು ಇಚ್ಛಿಸುವುದಿಲ್ಲ. ಆದರೆ ಒಂದು ಉದಾಹರಣೆ ನೀಡುತ್ತೇನೆ.
ಒಬ್ಬ ಹಿರಿಯ ಐಪಿಎಸ್ ಅಧಿಕಾರಿ ಗುಲ್ಬರ್ಗ್ ಸೊಸೈಟಿಯಲ್ಲಿ ಮಧ್ಯಾಹ್ನ 12ರ ಸಮಯದಲ್ಲಿ ಇದ್ದಾಗ ಪೊಲೀಸ್ ಆಯುಕ್ತರಿಂದ ಒಂದು ಕರೆ ಬರುತ್ತದೆ. ನರೋಡಾ ಪಾಟಿಯಾದಲ್ಲಿ ಗಲಭೆ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ತಕ್ಷಣ ಅಲ್ಲಿಗೆ ಧಾವಿಸುವಂತೆ ಸೂಚಿಸಲಾಗುತ್ತದೆ. ಅಧಿಕಾರಿ ಅಲ್ಲಿಂದ ಹೊರಟ ತಕ್ಷಣ ಗುಲರ್ಬ್ ಸೊಸೈಟಿ ಠಾಣೆಯಿಂದ ಪೊಲೀಸರು ಗುಂಡುಹಾರಿಸಿದ ಮಾಹಿತಿ ಬರುತ್ತದೆ. ಈ ಗುಂಡಿನ ಗದ್ದಲದಲ್ಲಿ ಮಾಹಿತಿ ಕಳುಹಿಸಲು ಮೈಕ್ರೋಪೋನ್ ಬಳಸಬೇಕಾಗುತ್ತದೆ.
ಅಂದರೆ ಪೊಲೀಸ್ ಅಧಿಕಾರಿ ಗುಲ್ಬರ್ಗ್ ಸೊಸೈಟಿ ಬಿಡುವ ಮುನ್ನವೇ, ಕೆಲವೇ ನಿಮಿಷಗಳಲ್ಲಿ ಗುಂಡುಹಾರಿಸುವ ಮಟ್ಟಕ್ಕೆ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಅಂದರೆ ಪೊಲೀಸ್ ಅಧಿಕಾರಿ ಅಲ್ಲಿ ಇರುವಾಗಲೇ ಅಲ್ಲಿ ಗುಂಡು ಹಾರಿಸಲಾಗಿತ್ತು.
ನೊರಾಡ ಪಾಟಿಯಾದಲ್ಲಿ ಈ ಅಧಿಕಾರಿ ಮಧ್ಯಾಹ್ನ 12.29ಕ್ಕೆ ಕರ್ಫ್ಯೂ ವಿಧಿಸಿ, 12.31ಕ್ಕೆ ಅಲ್ಲಿಂದ ಯಾವ ಅಹಿತಕರ ಘಟನೆಯೂ ನಡೆಯದ ದರಿಯಾಪುರಕ್ಕೆ ಹೊರಡುತ್ತಾರೆ. ಗುಲ್ಬರ್ಗ್ ಸೊಸೈಟಿಯಲ್ಲಿ ಗುಂಡು ಹಾರಿಸಲಾಗಿದ್ದು, ನರೋಡಾದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇದ್ದರೂ, ಅಲ್ಲಿ ನಿಯಂತ್ರಿಸುವ ಬದಲು ಗಲಭೆ ಇಲ್ಲದ ಪ್ರದೇಶಕ್ಕೆ ಪ್ರಯಾಣ ಬೆಳೆಸುತ್ತಾರೆ. ಕರ್ಫ್ಯೂ ವಿಧಿಸಿದ ಎರಡು ನಿಮಿಷಗಳಲ್ಲೇ ಅವರಿಗೆ ಗುಂಪನ್ನು ಚದುರಿಸುವ ವ್ಯವಧಾನ ಇರಲಿಲ್ಲ. ಆ ಎರಡು ಸ್ಥಳಗಳಲ್ಲಿ ಕ್ರಮವಾಗಿ 97 ಹಾಗೂ 47 ಸಾವುಗಳು ಸಂಭವಿಸಿದವು.
ಈ ಅಧಿಕಾರಿಯಿಂದ ವಿವರಣೆ ಕೇಳಬೇಡವೇ? ರಾಜ್ಯಾದ್ಯಂತ ಇಂಥ ಹಲವು ಪ್ರಕರಣಗಳು ನಡೆದಿವೆ. ಪೊಲೀಸ್ ಅಧಿಕಾರಿಯಾಗಿ ನಿಷ್ಪಕ್ಷಪಾತ ತನಿಖೆ ನಡೆಸಬೇಕಿತ್ತು. ಆದರೆ ಎಸ್‌ಐಟಿ ಕೂಡಾ ಅದನ್ನು ಮಾಡಿಲ್ಲ.
- ಎಸ್‌ಐಟಿ ಮಾಡಿದ ತಪ್ಪೇನು?
-ಯಾರೂ ಸರಿಯಾದ ಪ್ರಶ್ನೆ ಕೇಳಿಲ್ಲ. ಅವರು ಮಾಯಬೆನ್ ಕೊಡ್ನಾನಿ ಹಾಗೂ ಇತರನ್ನು ಬಂಧಿಸಿದಲ್ಲಿಗೆ ಮುಗಿಯಿತೇ? ಕೊಡ್ನಾನಿಯವರ ಒತ್ತಾಯದಿಂದಾಗಿ ಗಲಭೆ ನಡೆದಿತ್ತೇ?
ಎಸ್‌ಐಟಿಯಲ್ಲೂ ವೌನ ಸಮ್ಮತಿ ಇತ್ತು ಎಂದು ನನಗನಿಸುತ್ತದೆ. ಪ್ರತಿ ಹೆಜ್ಜೆ ಯಲ್ಲೂ ತನಿಖೆಗೆ ಪೂರಕವಾದ ಅಂಶಗಳನ್ನು ಹೊಂದಿರಬೇಕಿತ್ತು. ಆದರೆ ಅದನ್ನು ಅವರು ಮಾಡಲಿಲ್ಲ.
ಅದು ನಡೆದದ್ದು ಹೀಗೆ. ಮೊಬೈಲ್ ಕಂಪೆನಿಗಳು ತಮ್ಮ ಕಾರ್ಯವ್ಯಾಪ್ತಿಯ ಎಲ್ಲ ಪ್ರದೇಶಗಳಲ್ಲಿ ಟವರ್ ಅಳವಡಿಸುತ್ತವೆ. ಅದಕ್ಕೆ ನಿರ್ದಿಷ್ಟ ಕಾರ್ಯವ್ಯಾಪ್ತಿ ಇರುತ್ತದೆ. ಮೊದಲು ಎಸ್‌ಐಟಿ ಮಾಡಬೇಕಿದ್ದ ಕಾರ್ಯವೆಂದರೆ ಯಾವ ಮೊಬೈಲನ್ನು ಯಾರು ಬಳಸುತ್ತಿದ್ದಾರೆ ಎಂದು ಪತ್ತೆ ಮಾಡಬೇಕಿತ್ತು. ಎರಡನೆಯದಾಗಿ ಟವರ್ ಗುರುತಿಸಬೇಕಿತ್ತು. ಅಂದರೆ ಈ ಮೊಬೈಲ್ ಎಲ್ಲಿತ್ತು ಎಂದು ನಾನು ಹೇಳಬೇಕಾದರೆ, ಆ ಟವರ್ ನಿರ್ದಿಷ್ಟ ಜಾಗದಲ್ಲಿದೆ ಎನ್ನಲು ನಾನು ಸಮರ್ಥನಿರಬೇಕು. ಆಗ ಮಾತ್ರ ಕರೆಯ ಕ್ರಮಬದ್ಧತೆಯನ್ನು ನಿರೂಪಿಸಲು ಸಾಧ್ಯವಾಗುತ್ತದೆ.
ಮೊಬೈಲ್ ಸೇವಾ ಕಂಪೆನಿಗಳನ್ನು ಹೇಳಿಕೆಗಾಗಿ ಎಸ್‌ಐಟಿ ಕರೆದಾಗ, ಗಲಭೆ ನಡೆದ ಪ್ರದೇಶದಲ್ಲಿ ಈ ನಿರ್ದಿಷ್ಟ ಟವರ್ ಇದೆಯೇ ಎಂದು ಸ್ಪಷ್ಟವಾಗಿ ಕೇಳಬೇಕಿತ್ತು. ಈ ಉದ್ದೇಶಕ್ಕಾಗಿ ಎಟಿ ಆ್ಯಂಡ್ ಟಿ ಹಾಗೂ ಸೆಲ್‌ಫೋರ್ಸ್‌ನ ಹಿರಿಯ ಅಧಿಕಾರಿಗಳನ್ನು ಕರೆಯಲಾಗಿತ್ತು. ಆದರೆ ಅವರು ನೀಡಿದ ಹೇಳಿಕೆ, ಆ ಟವರ್ ಇದಯೇ ಇಲ್ಲವೇ ಎಂಬ ಬಗ್ಗೆ ನಿಖರವಾಗಿ ಗೊತ್ತಿಲ್ಲ ಇದನ್ನು ನಂಬಲು ಸಾಧ್ಯವೇ? ಟೆಲಿಕಾಂ ಕಂಪೆನಿ ತನ್ನ ಟವರ್ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಮಾಹಿತಿ ಹೊಂದಿಲ್ಲ!
- ಅಂದರೆ ಮೊಬೈಲ್ ಕಂಪೆನಿಗಳು ಕೂಡಾ ಸಂಚಿನಲ್ಲಿ ಶಾಮೀಲಾಗಿವೇೆ?
- ಇದಕ್ಕಿಂತ ಹೆಚ್ಚು ನಾನು ಏನು ಹೇಳಲು ಸಾಧ್ಯ? ನೀವೇ ಅದನ್ನು ಹೇಳಿದ್ದೀರಿ.
- ಯಾವ ಮಟ್ಟಕ್ಕೆ ವಿಚಾರಣೆ ನಡೆದಿದೆ? ಸಂಜಯ ಭಟ್ ಹಾಗೂ ಇತರ ಅಧಿಕಾರಿಗಳ ವಿರುದ್ಧ ಸಂಚು ರೂಪಿಸುವ ಮಟ್ಟಕ್ಕೂ ಇತ್ತು ಎಂದು ಅನಿಸುತ್ತದೆಯೇ?
-2002ರ ಗಲಭೆಯನ್ನು ನಿಯಂತ್ರಿಸಲು ಸಾಧ್ಯವಾದದ್ದು ಕೇವಲ ಭಾವನಗರದಲ್ಲಿ. ಆದರೆ ಆ ಗಲಭೆ ನಿಯಂತ್ರಿಸಿದ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಎಸ್ಪಿಯನ್ನು ಏನೂ ಕೆಲಸವಿಲ್ಲದ ಕಡೆಗೆ ವರ್ಗಾಯಿಸಲಾಯಿತು. ಗಲಭೆಯನ್ನು ನಿಯಂತ್ರಿಸಿದ ಅಧಿಕಾರಿಗಳನ್ನಷ್ಟೇ ಏಕೆ ವರ್ಗಾಯಿಸಲಾಯಿತು? ಅವರನ್ನು ಏಕೆ ಗುರಿಮಾಡಲಾಯಿತು? ಹಲವು ಸಾವುಗಳು ಸಂಭವಿಸಿದ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಮೇಲೆ ಯಾಕೆ ಆರೋಪಪಟ್ಟಿ ಸಲ್ಲಿಸಲಾಗಿಲ್ಲ?
ಇಷ್ಟು ಹೇಳಿದ ಮೇಲೆ ನನಗೆ ಕಿರುಕುಳ ನೀಡಿದಂತೆ ಅನಿಸಿಲ್ಲ ಎಂದು ಹೇಳಬಹುದು. ಸತ್ಯದ ಬೆನ್ನಿಗೆ ನಿಂತ ಸಂಜೀವ ಭಟ್, ಬಿ.ಬಿ.ಶ್ರೀಕುಮಾರ್ ಹಾಗೂ ಇತರ ಹಲವರ ಪ್ರಕರಣದಲ್ಲೂ ಇದೇ ಆಗಿದೆ. ಇದು ಕಿರುಕುಳ ನೀಡುವ ಪ್ರಶ್ನೆಯಲ್ಲ. ಗಲಭೆ ಸಂದರ್ಭದಲ್ಲಿ ಹಲವು ಮಂದಿ ತಮ್ಮ ಜೀವ, ಭೂಮಿ, ಕುಟುಂಬದ ಸದಸ್ಯರನ್ನು ಕಳೆದುಕೊಂಡರು. ನನ್ನ ನೋವನ್ನು ಇವರ ನೋವಿನ ಜತೆಗೆ ತುಲನೆ ಮಾಡಬೇಕಾಗುತ್ತದೆ.
ನನಗೆ ಅವರು ಇದಕ್ಕಿಂತ ಹೆಚ್ಚು ಏನು ಮಾಡಲು ಸಾಧ್ಯವಿತ್ತು? ತೀರಾ ಕೆಟ್ಟ ಸ್ಥಳಕ್ಕೆ ನನ್ನನ್ನು ವರ್ಗಾಯಿಸಿದರು. ನಾನು ಸ್ವೀಕರಿಸಿದೆ. ನನ್ನ ಬಡ್ತಿಯನ್ನು ತಡೆದರು. ನಾನು ಸ್ವೀಕರಿಸಿದೆ. ಐಪಿಎಸ್ ಅಧಿಕಾರಿಯಾಗಿ ನಾನು ಜನರಿಗೆ ಏನಾದರೂ ಮಾಡಿದ್ದರೆ ಅದು ನನ್ನ ಯಶಸ್ಸು. ಕೆಲ ಬೆರಳೆಣಿಕೆಯ ಅಧಿಕಾರಿಗಳು ಇಂಥ ಯಶಸ್ಸಿಗೆ ನಿದರ್ಶನವಾಗಿದ್ದಾರೆ. ಹಲವು ಮಂದಿ ಕಿರಿಯ ಪೊಲೀಸ್ ಅಧಿಕಾರಿಗಳು, ಪೇದೆಗಳು ಜನರ ರಕ್ಷಣೆಗಾಗಿ ತಮ್ಮ ಜೀವ ಮುಡಿಪಾಗಿಟ್ಟಿದ್ದರು.
- ಅಂದರೆ ನಿಮಗೆ ಸಿಗಬೇಕಾದ್ದು ಸಂದಿದೆಯೇ? ನಿಗದಿತ ಅವಧಿಯಲ್ಲಿ ನೀವು ವಾಪಾಸಾದರೆ ಭಿನ್ನವಾಗಿ ಮಾಡಲು ಸಾಧ್ಯವಿದೆಯ�