ಬೈಕ್ ಕಳವು: ಆರೋಪಿಯ ಸೆರೆ: 20ಲಕ್ಷ ರೂ.ಮೊತ್ತದ 38 ಬೈಕ್‌ಗಳ ವಶ
Update: 2016-02-08 23:50 IST
ಬೆಂಗಳೂರು, ಫೆ. 8: ಮೋಜಿನ ಜೀವನ ನಡೆಸಲು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪದ ಮೇಲೆ ಇಲ್ಲಿನ ಮಹದೇವಪುರ ಠಾಣಾ ಪೊಲೀಸರು ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಗೊರ್ತುಪಲ್ಲಿ ಗ್ರಾಮದ ನಿವಾಸಿ ನಾಗರಾಜು (29) ಎಂದು ಗುರುತಿಸಲಾಗಿದೆ. ಆರೋಪಿಯು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯಿಂದ 20 ಲಕ್ಷ ರೂಪಾಯಿ ಬೆಲೆ ಬಾಳುವ 38 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಹೀರೋಹೊಂಡಾ ಸ್ಲೆಂಡರ್, ಪ್ಯಾಷನ್ ಹಾಗೂ ಬಜಾಜ್ ಪಲ್ಸರ್ ಬೈಕ್‌ಗಳನ್ನೇ ಕಳವು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಹದೇವಪುರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.