ನಿವೇಶನ ಹಂಚಿಕೆ ಹಗರಣ ತನಿಖೆಗೆ ಒತ್ತಾಯ
ಬೆಂಗಳೂರು, ಫೆ.8: ಬಿಬಿಎಂಪಿ ವಾರ್ಡ್ ನಂ. 176ರಲ್ಲಿ 2000ದಿಂದ 2016ರವರೆಗೆ ನಡೆದಿರುವ ಬಿಡಿಎ ನಿವೇಶನ ಹಂಚಿಕೆ ಹಗರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಒಕ್ಕಲಿಗರ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಸಿ.ಗಂಗಾಧರ್ ಒತ್ತಾಯಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರ್ಡ್ ನಂ. 176ರಲ್ಲಿನ ಹಸಿರು ವಲಯದ ಜಮೀನನ್ನು ಸೈಟ್‌ಗಳನ್ನಾಗಿ ಪರಿವರ್ತಿಸಿ ಬಿಡಿಎಗೆ ಬೋಕ್ಕಸಕ್ಕೆ ನಷ್ಟ ವನ್ನುಂಟುಮಾಡಿದ್ದಾರೆ.ಇದರಲ್ಲಿ ಬಿಡಿಎ ಆಯುಕ್ತರು, ಬಿಬಿಎಂಪಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಎಲ್ಲಾ ಹಗರಣಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿ ಕೂಡ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಕಳೆದ ಒಂದು ವರ್ಷದಿಂದ ಹಗರಣಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿದ್ದು, ಸುಮಾರು 5 ಪುಸ್ತಕಗಳನ್ನು ಶೀಘ್ರವೇ ಲೋಕಾಯುಕ್ತಕ್ಕೆ ಒಪ್ಪಿಸಲಾಗುವುದು. ಲೋಕಾಯುಕ್ತರು ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಸದಸ್ಯ ಸುರೇಶ್ ಉಪಸ್ಥಿತರಿದ್ದರು.