ದ್ವಿತೀಯ ಪಿಯುಸಿ; ಮರು ಮೌಲ್ಯಮಾಪನಕ್ಕೆ ಉತ್ತರ ಪತ್ರಿಕೆ ಸ್ಕಾನ್ ಪ್ರತಿ ಕಡ್ಡಾಯ: ಎಐಡಿಎಸ್‌ಒ ಖಂಡನೆ
ಬೆಂಗಳೂರು, ಫೆ.8: ದ್ವಿತೀಯ ಪಿಯುಸಿಯ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಮತ್ತು ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿ ಪಡೆಯುವುದು ಕಡ್ಡಾಯ ಸೇರಿದಂತೆ ಇನ್ನಿತರ ಹೊಸ ಬದಲಾವಣೆಗಳನ್ನು ಜಾರಿಗೊಳಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕ್ರಮವನ್ನು ಆ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ರಾಜ್ಯ ಸಮಿತಿ ಖಂಡಿಸಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯು ಈ ವಿದ್ಯಾರ್ಥಿ ವಿರೋಧಿ ನಿರ್ಧಾರಗಳನ್ನು ಹಿಂಪಡೆಯಬೇಕು. ಹಾಗೂ ಈ ವಿದ್ಯಾರ್ಥಿ ವಿರೋಧಿ ನಿಯಮಗಳನ್ನು ಹಿಂಪಡೆಯಲು ಎಐಡಿಎಸ್‌ಒ ಆಗ್ರಹಿಸಿದೆ.
ಹಳ್ಳಿಗಳಲ್ಲಿ ಬಡ ವಿದ್ಯಾರ್ಥಿಗಳು ಕಾಲೇಜು ಶುಲ್ಕ ಹಾಗೂ ಪರೀಕ್ಷಾ ಶುಲ್ಕ ಕಟ್ಟಲು ಕಷ್ಟಪಡುತ್ತಿರುವಾಗ, ಫಲಿತಾಂಶ ಬಂದ ನಂತರ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಮುನ್ನ 504 ರೂ.ಗಳನ್ನು ಪಾವತಿಸಿ ಸ್ಕ್ಯಾನ್ ಪ್ರತಿ ಪಡೆಯಲೇಬೇಕು ಎಂದು ಕಡ್ಡಾಯ ಮಾಡಿರುವುದು ಅವೈಜ್ಞಾನಿಕ. ಅಲ್ಲದೆ, ಮರು ಎಣಿಕೆಗೆ 336 ರೂ. ಹಾಗೂ ಮರು ಮೌಲ್ಯಮಾಪನಕ್ಕೆ 1,260 ರೂ.ಕಟ್ಟಬೇಕಾಗಿದೆ. ಇಷ್ಟು ದುಬಾರಿ ಶುಲ್ಕ ಇಟ್ಟಿರುವ ಕಾರಣ ಪರೀಕ್ಷಾ ಫಲಿತಾಂಶ ಬಂದ ನಂತರ ವಿದ್ಯಾರ್ಥಿಗಳು ಮರು ಮೌಲ್ಯಮಾಪನದ ಗೋಜಿಗೆ ಹೋಗುವುದಿಲ್ಲ. ಹಾಗಾಗಿ ಬಹುಸಂಖ್ಯೆ ವಿದ್ಯಾರ್ಥಿಗಳು ಮರು ಮೌಲ್ಯಮಾಪನದ ಸೌಲಭ್ಯದಿಂದ ವಂಚಿತರಾಗುವುದಲ್ಲದೆ, ಭವಿಷ್ಯವನ್ನೇ ಕಳೆದುಕೊಳ್ಳುತ್ತಾರೆ ಎಂದು ಸಂಘಟನೆ ಆತಂಕ ವ್ಯಕ್ತಪಡಿಸಿದೆ. ಈ ವಿದ್ಯಾರ್ಥಿ ವಿರೋಧಿ ನೀತಿಯನ್ನು ಖಂಡಿಸಿ ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಪೋಷಕರು, ವಿದ್ಯಾರ್ಥಿಗಳು ರಾಜ್ಯಾದ್ಯಂತ ಬಲಿಷ್ಠ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಎಐಡಿಎಸ್‌ಒ ರಾಜ್ಯ ಸಮಿತಿಯು ಕರೆ ನೀಡಿದೆ.