ಕೆನರಾ ಬ್ಯಾಂಕಿಗೆ 1,552 ಕೋಟಿ ರೂ.ಲಾಭ: ರಾಕೇಶ್ ಶರ್ಮಾ

Update: 2016-02-12 18:29 GMT

ಬೆಂಗಳೂರು, ಫೆ. 12: ಪ್ರತಿಷ್ಠಿತ ಬ್ಯಾಂಕುಗಳಲ್ಲೊಂದಾದ ಕೆನರಾ ಬ್ಯಾಂಕ್ 2016ನೆ ಸಾಲಿನ ಆರ್ಥಿಕ ವರ್ಷದ ಮೂರನೆ ತ್ರೈಮಾಸಿಕದಲ್ಲಿ ಒಟ್ಟು 1,552 ಕೋಟಿ ರೂ.ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶರ್ಮಾ ತಿಳಿಸಿದ್ದಾರೆ.

ಶುಕ್ರವಾರ ಇಲ್ಲಿನ ಕೆನರಾ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆನರಾ ಬ್ಯಾಂಕಿನ ಒಟ್ಟಾರೆ ವ್ಯವಹಾರ 8.23 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.6.2ರಷ್ಟು ಏರಿಕೆ ಕಂಡಿದೆ ಎಂದು ಮಾಹಿತಿ ನೀಡಿದರು.

ಒಟ್ಟಾರೆ ಠೇವಣಿ 4.91 ಲಕ್ಷ ಕೋಟಿ ರೂ.ಗಳಾಗಿದ್ದು, ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇ.6.1ರಷ್ಟು ಏರಿಕೆಯಾಗಿದೆ. ಚಾಲ್ತಿ ಮತ್ತು ಉಳಿತಾಯ ಠೇವಣಿಗಳು ಶೇ.12.5ರ ಬೆಳವಣಿಗೆಯೊಂದಿಗೆ 1.18 ಲಕ್ಷ ಕೋಟಿ ರೂ.ಗಳಾಗಿದೆ ಎಂದು ಅವರು ಇದೇ ವೇಳೆ ವಿವರಿಸಿದರು.

ಆದ್ಯತಾ ಕ್ಷೇತ್ರಕ್ಕೆ ಶೇ.26.6, ಕೃಷಿ ಸಾಲ-ಶೇ.15.2, ಎಂಎಸ್‌ಎಂಇ-ಶೇ.16.3, ಎಂಎಸ್‌ಇ-ಶೇ.16.4, ನೇರಗೃಹ ಸಾಲ-ಶೇ.26.8, ವಾಹನ ಸಾಲ-ಶೇ.13.8, ಶಿಕ್ಷಣ ಸಾಲ- ಶೇ.19.2 ಮತ್ತು ಇತರೆ ವೈಯಕ್ತಿಕ ಸಾಲ ಶೇ.14.6ರಷ್ಟು ಪ್ರಗತಿಯನ್ನು ಕಂಡಿದೆ ಎಂದು ರಾಕೇಶ್ ಶರ್ಮಾ ತಿಳಿಸಿದರು.

‘ಜನ್‌ಧನ್’ ಯೋಜನೆಯಡಿ ಈವರೆಗೂ 72.11 ಲಕ್ಷ ಖಾತೆಗಳನ್ನು ತೆರೆದಿದ್ದು, ಒಟ್ಟು ಠೇವಣಿ 1,176 ಕೋಟಿ ರೂ.ಗಳಾಗಿದೆ. ಸಾಮಾಜಿಕ ಭದ್ರತೆ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಬಿಮಾ ಯೋಜನೆಯಡಿ 65.84 ಲಕ್ಷ ನೋಂದಣಿ ಮಾಡಲಾಗಿದೆ. ಅಟಲ್ ಪೆನ್ಷನ್ ಯೋಜನೆಯಡಿ 80 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News