ಕೊಳಕು ಕಾಳೇ ಇವರ ಬಾಳ ಬೆಳಕು!

Update: 2016-02-13 17:49 GMT

ಗೂಡ್ಸ್ ರೈಲಿನ ವ್ಯಾಗನ್‌ಗಳ ಬಾಗಿಲು ದಡಕ್ಕನೆ ಮುಚ್ಚಿಕೊಳ್ಳುತ್ತಿದ್ದಂತೆ ಪೊರಕೆ, ಜರಡಿ ಹಾಗೂ ಬಟ್ಟೆ ಚೀಲಗಳನ್ನು ಹೊತ್ತ ಮಹಿಳೆಯರ ಗುಂಪು ಅಲ್ಲಿ ಪ್ರತ್ಯಕ್ಷವಾಗುತ್ತದೆ. ತೀರಾ ನಾಜೂಕಿನಿಂದ ರೈಲು ಗಾಲಿ ಅಚ್ಚಿನ ಕೆಳಕ್ಕೆ ನುಸುಳಿ ತಮ್ಮ ಹಕ್ಕಿನ ಜಾಗ ಹಿಡಿದುಬಿಡುತ್ತಾರೆ. ಇದು ವಡೋದರ ರೈಲು ನಿಲ್ದಾಣದ ಚಿತ್ರಣ.
ರೈಲುಹಳಿಗಳ ಮೇಲೆ ಚೆಲ್ಲಿದ ಸಿಮೆಂಟ್, ಧೂಳು, ಕಚ್ಚಾತೈಲದ ಕಲೆಗಳಲ್ಲಿ ಬೆರೆತುಹೋಗಿರುವ ಆಹಾರಧಾನ್ಯ ಬಾಚಿಕೊಂಡು ಜರಡೆ ಹಿಡಿಯುತ್ತಾರೆ. ಕೆಲ ಗಂಟೆಗಳಲ್ಲಿ ಕಾಯಕ ಮುಗಿಸಿ, ಪರಸ್ಪರ ಸಂಕೇತ ರವಾನಿಸಿಕೊಂಡು, ಕಾರ್ಯನಿರತ ಭದ್ರತಾ ಸಿಬ್ಬಂದಿಯ ಕಣ್ಣುತಪ್ಪಿಸಿ ಜಾಗ ಖಾಲಿ ಮಾಡುತ್ತಾರೆ.
ದಹೋದ್‌ನ ಈ ಬುಡಕಟ್ಟು ಮಹಿಳೆಯರು ವಡೋದರದಲ್ಲಿ ಹತ್ತು ವರ್ಷಗಳಿಂದ ನೆಲೆ ಇದ್ದರೂ, ಅಧಿಕೃತವಾಗಿ ಬಡತನ ರೇಖೆಗಿಂತ ಕೆಳಗಿರುವವರ ಪಟ್ಟಿಗೆ ಸೇರಿಲ್ಲ. ತಮ್ಮ ಕುಟುಂಬಗಳು ಹಸಿವಿನಿಂದ ಮುಕ್ತವಾಗಲು ಮಹಿಳೆಯರು ಮಾಡಬಹುದಾದ ಏಕೈಕ ಕಾಯಕವೆಂದರೆ, ಕೊಳಕು ಕಾಳಿಗಾಗಿ ರೈಲು ಹಳಿ ಗುಡಿಸುವುದು!
ಈ ಕಾಳು ನಮಗೆ ಕೆಲ ವಾರಗಳ ಕಾಲ, ಕೆಲವೊಮ್ಮೆ ತಿಂಗಳವರೆಗೂ ನಮ್ಮ ಹೊಟ್ಟೆ ತುಂಬಿಸುತ್ತದೆ. ಆದರೆ ನಮ್ಮನ್ನು ಭದ್ರತಾ ಸಿಬ್ಬಂದಿ, ಅಕ್ರಮ ಪ್ರವೇಶದ ಆರೋಪದಲ್ಲಿ ಬಂಧಿಸುವ ಹೆದರಿಕೆಯಿಂದಲೇ ಇಲ್ಲಿಗೆ ಬರುತ್ತೇವೆ. ಯಾರ ಉಪಯೋಗಕ್ಕೂ ಇಲ್ಲದ ಚೆಲ್ಲಿದ ಧಾನ್ಯವನ್ನು ಸಂಗ್ರಹಿಸಲಷ್ಟೇ ನಾವು ಇಲ್ಲಿಗೆ ಬರುತ್ತೇವೆ ಎಂದು ಮೂವರು ಮಕ್ಕಳನ್ನು ಹೊಂದಿರುವ ವಿಧವೆ ಶ್ರುತಿ ಪಾಗ್ರಾ ಭಿಲ್ ದೈನ್ಯದಿಂದ ಹೇಳುತ್ತಾರೆ. ರೈಲುಹಳಿ ಗುಡಿಸಿ ಒಂದು ಪ್ಲಾಸ್ಟಿಕ್ ಚೀಲದಷ್ಟು ಧಾನ್ಯ ಸಂಗ್ರಹಿಸಿದ್ದ ಈಕೆಯನ್ನು ಮಾತಿಗೆಳೆದಾಗ ಈ ಅಂಶ ಬಹಿರಂಗಪಡಿಸಿದಳು.
ಗಂಡಸರು ದಿನಗೂಲಿಗಳಾಗಿ ಹೆಚ್ಚಿನ ಆದಾಯ ಗಳಿಸಲು ಅವಕಾಶವಿಲ್ಲ ಎಂದು ಮಾಸಲು ಲಂಗ- ರವಿಕೆ ಹಾಕಿಕೊಂಡು ತಲೆಗೊಂದು ದುಪ್ಪಟ ಸುತ್ತಿದ್ದ ಶ್ರುತಿ ಹೇಳಿದಳು.
ಅಲ್ಲಿಂದ ಮೂರು ಮೂರು ಮಂದಿ ಗುಂಪಾಗಿ ಆಟೊ ಹಿಡಿದು, ತಾವು ಸಂಗ್ರಹಿಸಿದ ಧಾನ್ಯದೊಂದಿಗೆ, ಛಾನಿ ಪ್ರದೇಶದ ನರ್ಮದಾ ಕಾಲುವೆಯ ಬದಿಯ ಗುಡಿಸಲುಗಳಿಗೆ ತೆರಳುತ್ತಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕಳೆದ ಜನವರಿಯಲ್ಲಿ ಈ ಪ್ರದೇಶದಲ್ಲಿ ದೇಶದ ಅತಿ ದೊಡ್ಡ ಸೌರವಿದ್ಯುತ್ ಘಟಕವನ್ನು ಇಲ್ಲಿ ಉದ್ಘಾಟಿಸಿದ್ದರು.
ಪ್ರತಿ ಗುಡಿಸಲುಗಳ ಹೊರಗೆ, ತಾವು ಆಯ್ದು ತಂದ ಧಾನ್ಯವನ್ನು ಹರಡಿಕೊಂಡು ದೊಡ್ಡ ಕಶ್ಮಲಗಳಾದ ಲೋಹದ ತುಂಡು, ಸಿಮೆಂಟ್ ಗಟ್ಟಿ, ಕಳೆಗಳನ್ನು ಬೇರ್ಪಡಿಸುತ್ತಾರೆ. ಇವುಗಳನ್ನು ಚೆನ್ನಾಗಿ ತೊಳೆದು ಒಣಗಿಸಿ ಆ ಬಳಿಕ ರುಬ್ಬುವ ಕಲ್ಲಿನಲ್ಲಿ ಮನೆಗಳಲ್ಲಿ ರುಬ್ಬಿಕೊಳ್ಳುತ್ತೇವೆ. ಪ್ರತಿಯೊಬ್ಬರೂ ಸುಮಾರು ನಾಲ್ಕು ಕೆ.ಜಿ.ಯಷ್ಟು ಗೋಧಿಯನ್ನು ಹಳಿಯಿಂದ ಗುಡಿಸುತ್ತೇವೆ. ಇದು ಕೆಲ ವಾರಗಳ ಕಾಲ ನಮ್ಮ ಹೊಟ್ಟೆ ಹೊರೆದುಕೊಳ್ಳಲು ಸಾಕಾಗುತ್ತದೆ. ಉಳಿದ ದಿನಗಳಲ್ಲಿ ಪುರುಷರ ದುಡಿಮೆಯಲ್ಲಿ ಜೀವನ ನಡೆಸುತ್ತೇವೆ ಎಂದು ಮತ್ತೊಬ್ಬ ಬುಡಕಟ್ಟು ಮಹಿಳೆ ದೋಲ್ಕಿ ದಮೋರ್ ವಿವರಿಸುತ್ತಾರೆ.
ವಡೋದರ ಮಹಾನಗರ ಪಾಲಿಕೆ 2010ರಲ್ಲಿ ನಡೆಸಿದ ಕೊಳಗೇರಿ ಸಮೀಕ್ಷೆಯಲ್ಲಿ, ಈ ಬಹಳಷ್ಟು ಮಂದಿ ಸೇರ್ಪಡೆಯಾಗಿದ್ದಾರೆ. ಶ್ರುತಿಗೆ ಗುಡಿಸಲು ಗುರುತಿನ ಚೀಟಿ ಹಾಗೂ ಪಾಲಿಕೆ ನೀಡಿದ ಹೆಸರಿನ ಫಲಕವಾದ ಅಯಸ್ಕಾಂತೀಯ ಚಿಪ್ ಕೂಡಾ ಇದೆ.
ಆದರೆ ಆಕೆ ಹೇಳುವಂತೆ ಆಕೆಗೆ ತೀರಾ ಅಗತ್ಯವಿರುವುದು ಬಿಪಿಎಲ್ ಕಾರ್ಡ್. ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಪಕ್ಕದ ಕೊಳಗೇರಿಯಲ್ಲಿ ವಾಸವಿರುವ ನನ್ನ ಮಗ, ಮಾಸಿಕ 2000 ರೂಪಾಯಿ ಗಳಿಸುತ್ತಾನೆ. ಆದರೆ ನಮಗೆ ಇದುವರೆಗೆ ಯಾರೂ ಬಿಪಿಎಲ್ ಕಾರ್ಡ್ ಬಗ್ಗೆ ಹೇಳಿಲ್ಲ. ನಮಗೆ ಅಂಥ ಯಾವುದೇ ಕಾರ್ಡ್ ಇಲ್ಲ. ಅಧಿಕಾರಿಗಳು ಕೆಲ ವರ್ಷ ಹಿಂದೆ ಗಣತಿ ನಡೆಸಿದಾಗ ನಮಗೆ ಇದನ್ನು ನೀಡಿದ್ದಾರೆ ಎಂದು ಗುಡಿಸಲು ಗುರುತುಚೀಟಿಯನ್ನು ಶ್ರುತಿ ಪ್ರದರ್ಶಿಸಿದರು.
ಜಿಲ್ಲಾಧಿಕಾರಿ ಅವಂತಿಕಾ ಸಿಂಗ್ ಅವರನ್ನು ಈ ಬಗ್ಗೆ ಸಂಪರ್ಕಿಸಿದಾಗ, ದಹೋದ್‌ನಿಂದ ಉದ್ಯೋಗ ಅರಸಿ ಹೋದ ಬಹುತೇಕ ಮಂದಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಬರುತ್ತಾರೆ ಎಂದು ಉತ್ತರಿಸಿದರು.
ಮಹಾನಗರ ಪಾಲಿಕೆಯ ನಗರ ಸಮುದಾಯ ಅಭಿವೃದ್ಧಿ ಯೋಜನಾ ನಿರ್ದೇಶಕಿ ಕವಿತಾ ದೇಸಾಯಿ, 2000ನೆ ಇಸ್ವಿಯ ಬಿಪಿಎಲ್ ಪಟ್ಟಿಯನ್ನು ನಾವು ಅನುಸರಿಸುತ್ತಿದ್ದೇವೆ ಎಂದು ಹೇಳಿದರು. ವಡೋದರ ಜಿಲ್ಲಾಧಿಕಾರಿಗಳ ಕಚೇರಿ ಮಾಹಿತಿಯಂತೆ ಬಿಪಿಲ್ ಪಟ್ಟಿ ಪರಿಷ್ಕರಣೆ ಕಾರ್ಯ ಬಾಕಿ ಇದ್ದು, ಸದ್ಯದಲ್ಲೇ ಪರಿಷ್ಕರಿಸಲಾಗುತ್ತದೆ.
ಈ ಪಟ್ಟಿ ಪರಿಷ್ಕರಣೆಯಾಗುವವರೆಗೂ ಗೂಡ್ಸ್ ರೈಲುಗಳ ವ್ಯಾಗನ್‌ಗಳೇ ಈ ಕುಟುಂಬಗಳಿಗೆ ಜೀವನಾಧಾರ. ಆಹಾರಧಾನ್ಯ ತುಂಬಿಕೊಂಡು ಬರುವ ರೈಲ್ವೆ ವ್ಯಾಗನ್‌ಗಳ ಮೇಲೆ ಕಣ್ಣಿಡುವಂತೆ ಎಲ್ಲ ಮಹಿಳೆಯರಿಗೆ ಸೂಚಿಸಲಾಗಿದೆ. ಇದಕ್ಕೆ ನಿಗದಿತ ವೇಳಾಪಟ್ಟಿ ಇಲ್ಲದ ಕಾರಣ, ಆಗಾಗ ಯಾರ್ಡ್‌ಗೆ ಭೇಟಿ ನೀಡಿ, ವ್ಯಾಗನ್ ಯಾವಾಗ ಬರುತ್ತದೆ ಎಂದು ಕಾಯುತ್ತೇವೆ ಎಂದು ಧೋಲ್ಕಿ ಹೇಳುತ್ತಾರೆ.
ಒಂದು ತಿಂಗಳಲ್ಲಿ ಎರಡು ಸರಕು ಸಾಗಣೆ ರೈಲು ಆಹಾರಧಾನ್ಯ ತುಂಬಿಕೊಂಡು ಬಂದರೆ ನಮ್ಮ ಅದೃಷ್ಟ. ಆದರೆ ಬಹುತೇಕ ಬಾರಿ ಸಿಮೆಂಟ್ ಹಾಗೂ ಮರಳು ತುಂಬಿದ ವ್ಯಾಗನ್‌ಗಳು ಬಂದು ನಮಗೆ ನಿರಾಸೆ ಮಾಡುತ್ತವೆ. ಆಗ ನಾವು ಆಹಾರಕ್ಕಾಗಿ ಕಸದ ತೊಟ್ಟಿಯನ್ನೇ ಅವಲಂಬಿಸಬೇಕಾಗುತ್ತದೆ ಎನ್ನುವ ಧೋಲ್ಕಿ ಮಾತು, ಈ ಸಮುದಾಯದ ದೈನ್ಯ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.
ವಡೋದರ ರೈಲ್ವೆ ಯಾರ್ಡ್‌ನಲ್ಲಿ ಭಾರತದ ಆಹಾರ ನಿಗಮ ಹಾಗೂ ಖಾಸಗಿ ನಗಟು ಮಾರಾಟದಾರರಿಗೆ ಕೂಡಾ ಆಹಾರ ಧಾನ್ಯಗಳು ಬರುತ್ತವೆ. ಬಹುತೇಕ ಅಕ್ಕಿ ಮತ್ತು ಗೋಧಿ. ಸಿಮೆಂಟ್, ಕಚ್ಚಾ ತೈಲ, ರಾಸಾಯನಿಕ ಹಾಗೂ ನಿರ್ಮಾಣ ಸಾಮಗ್ರಿ ಸಾಗಾಟದ ವ್ಯಾಗನ್‌ಗಳು ಕೂಡಾ ಬರುತ್ತವೆ.
 ಈ ವಾರ ವ್ಯಾಗನ್ ಎಫ್‌ಸಿಐ ಗೋದಾಮಿಗೆ ಧಾನ್ಯ ತಂದಿದೆ ಎಂದು ಎಫ್‌ಸಿಐನ ಬರೋಡಾ ಕ್ಷೇತ್ರ ವ್ಯವಸ್ಥಾಪಕ ಅನಿಲ್ ಶ್ರೀವಾಸ್ತವ ಹೇಳುತ್ತಾರೆ. ಆಹಾರಧಾನ್ಯ ಲೋಡ್ ಮಾಡುವ ವೇಳೆ ಅಥವಾ ಲೋಡ್ ಇಳಿಸುವ ವೇಳೆ ಚೀಲಗಳು ಹರಿದು ಆಹಾರಧಾನ್ಯ ಚೆಲ್ಲುವುದು ತೀರಾ ಅಪರೂಪ. ಹಾಗೊಂದು ವೇಳೆ ಚೆಲ್ಲಿದರೂ ನಮ್ಮ ಕೆಲಸಗಾರರು ಅದನ್ನು ಸಂಗ್ರಹಿಸಿ ತರುತ್ತಾರೆ. ಏಕೆಂದರೆ ಲೋಡಿಂಗ್ ಹಾಗೂ ಅನ್‌ಲೋಡಿಂಗ್ ಕೇಂದ್ರಗಳಲ್ಲಿದ್ದ ಆಹಾರಧಾನ್ಯ ಪ್ರಮಾಣವನ್ನು ನಾವು ತಾಳೆ ಮಾಡಬೇಕಾಗುತ್ತದೆ. ಕೇವಲ ಸಿಮೆಂಟ್ ಅಥವಾ ಇತರ ಕಶ್ಮಲಗಳಿಂದ ಮಿಶ್ರಿತವಾದ ಕಾಳನ್ನಷ್ಟೇ ಹಳಿ ಮೇಲೆ ಚೆಲ್ಲಲಾಗುತ್ತದೆ ಎಂದು ಅವರು ವಿವರಿಸುತ್ತಾರೆ. ಆಹಾರಧಾನ್ಯ ತರುವ ರೈಲುಗಳು ಯಾವ ವೇಳೆಗೆ ಬರುತ್ತದೆ ಎಂಬ ನಿಗದಿತ ವೇಳಾಪಟ್ಟಿಯಂತೇನಿಲ್ಲ. ರಾಜ್ಯ ಸರ್ಕಾರ ಸಲ್ಲಿಸುವ ಬೇಡಿಕೆಯ ಪ್ರಸ್ತಾವನೆಗೆ ಅನುಗುಣವಾಗಿ ಧಾನ್ಯ ಬರುತ್ತದೆ. ಆಹಾರಧಾನ್ಯವನ್ನು ವಡೋದರಾದಲ್ಲಿ ಅನ್‌ಲೋಡ್ ಮಾಡಿ, ಎಫ್‌ಸಿಐನ ಛಾನಿ ಗೋದಾಮಿನಲ್ಲಿ ದಾಸ್ತಾನು ಮಾಡಲಾಗುತ್ತದೆ. ಸರಾಸರಿಯಂತೆ, ಎರಡು ವಾರಕ್ಕೊಮ್ಮೆ ಆಹಾರಧಾನ್ಯ ವ್ಯಾಗನ್‌ಗಳು ಬರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News