ಬೆಂಗಳೂರು : ಶಾಲಾ ಮಕ್ಕಳಿಗೆ ಜೂನ್ ಮೊದಲ ವಾರದಲ್ಲಿ ಬೈಸಿಕಲ್, ಶೂ, ಸಾಕ್ಸ್ ವಿತರಿಸಲು ಕಂಪೆನಿಗಳಿಗೆ ಪತ್ರ
ಬೆಂಗಳೂರು.ಫೆ.15: ಶಾಲಾ ಮಕ್ಕಳಿಗೆ ಜೂನ್ ಮೊದಲ ವಾರದಲ್ಲಿ ಬೈಸಿಕಲ್, ಶೂ, ಸಾಕ್ಸ್ ವಿತರಿಸಲು ಈಗಿನಿಂದಲೇ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, ಈ ಬಾರಿ ವಿಳಂಬವಾಗುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಇಂದಿಲ್ಲಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಬೈಸಿಕಲ್ ವಿತರಣೆಗೆ ಪ್ರತಿವರ್ಷ ತೊಂದರೆಯಾಗುತ್ತಿದೆ. ಇನ್ನು ಮುಂದೆ ವಿಳಂಬವಾಗದಂತೆ ನೋಡಿಕೊಳ್ಳುತ್ತೇವೆ. ತಡವಾಗಲು ನ್ಯಾಯಾಲಯದ ತಡೆಯಾಜ್ಞೆ ಕಾರಣ. ಈ ಬಾರಿ ಜೂನ್ ವೇಳೆಗೆ ಬೈಸಿಕಲ್ ಪೂರೈಸುವಂತೆ ಸಂಬಂಧಪಟ್ಟ ಕಂಪೆನಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳದರು. ದೇಶದ ಶೇ 93 ರಷ್ಟು ಬೈಸಿಕಲ್‌ಗಳನ್ನು ಮೂರು ಕಂಪನಿಗಳು ಪೂರೈಸುತ್ತಿವೆ. ಇದರ ಮಧ್ಯೆ ಕೆಲವು ಸಣ್ಣ ಕಂಪನಿಗಳೂ ಈ ವಿಷಯದಲ್ಲಿ ಆಸಕ್ತಿ ತೋರಿಸುತ್ತವೆ. ಆದರೆ ಬೈಸಿಕಲ್ ಪೂರೈಕೆಗೆ ನಾವು ವಿಧಿಸಿದ ಷರತ್ತುಗಳನ್ನು ಒಪ್ಪದೆ ಕೆಲ ಕಂಪನಿಗಳವರು ನ್ಯಾಯಾಯಲದ ಮೊರೆ ಹೋಗಿದ್ದಾರೆ. ಲುಧಿಯಾನಾದಲ್ಲಿರುವ ಕಂಪನಿಯೊಂದರಿಂದ ಸುರಕ್ಷತಾ ಸರ್ಟಿಫಿಕೇಟ್ ಪಡೆದು ಬಂದವರಿಗೆ ಬೈಸಿಕಲ್ ಪೂರೈಸಲು ಅನುಮತಿ ನೀಡುವುದಾಗಿ ಹೇಳಿರುವುದು ಕೂಡಾ ಸಮಸ್ಯೆ ಬಿಗಡಾಯಿಸಲು ಕಾರಣ ಎಂದು ಹೇಳಿದರು.
ಈ ಸಂಬಂಧ ನಾಳೆ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆದಿದ್ದು, ಶಾಲೆಗಳ ಆರಂಭದ ಸಮಯಕ್ಕೆ ಸರಿಯಾಗಿ ಬೈಸಿಕಲ್ ಮತ್ತಿತರ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಸಂಬಂಧ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು. ರಾಜ್ಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಹೊಡೆದರೆ ಅದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು. ಮಕ್ಕಳನ್ನು ಪೋಷಕರೇ ಶಿಕ್ಷಿಸುವುದಿಲ್ಲ. ಹೀಗಿರುವಾ ಶಿಕ್ಷಕರು ಹೊಡೆಯುವುದನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಈ ಸಂಬಂಧ ಗಮನವಿಡಲು ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು. ಶಾಲೆಗಳಲ್ಲಿ ಮಕ್ಕಳಿಗೆ ಹೊಡೆಯಬಾರದು ಬದಲಿಗೆ ಪ್ರೀತಿ, ವಿಶ್ವಾಸಗಳಿಂದಲೇ ಅವರ ಮನ ಗೆಲ್ಲಬೇಕು. ಕಾನೂನಿನಲ್ಲೂ ಈ ವಿಷಯವನ್ನು ಸ್ಪಷ್ಟವಾಗಿ ಹೇಳಲಾಗಿದೆ. ಈ ಕಾನೂನು ಸರಿಯಾಗಿ ಜಾರಿಗೆ ಬರುತ್ತಿಲ್ಲ ಎಂಬ ದೂರುಗಳು ಕೇಳಿ ಬಂದ ಕಡೆ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗುವುದು. ಶಿಕ್ಷೆಯಿಂದ ಮಕ್ಕಳಲ್ಲಿ ಶಿಸ್ತು ಮೂಡಿಸಲು ಸಾಧ್ಯವಿಲ್ಲ. ಪ್ರೀತಿಯಿಂದ ಮಾತ್ರ ಸಾಧ್ಯ ಎಂದರು.
ಹಿಂದೆಯೂ ಶಾಲೆಗಳಲ್ಲಿ ಮಕ್ಕಳಿಗೆ ಹೊಡೆಯಬಾರದು ಎಂಬ ಕಾನೂನು ಇತ್ತು. ಆದರೆ ಅವತ್ತಿನ ದಿನಗಳಲ್ಲಿ ಶಿಕ್ಷಕರು ಹೊಡೆಯುತ್ತಿದ್ದ ನಿದರ್ಶನಗಳು ಜಾಸ್ತಿ. ಪೋಷಕರೂ ಇದನ್ನು ಪ್ರಶ್ನಿಸುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಪೋಷಕರೇ ಮಕ್ಕಳನ್ನು ಹೊಡೆಯುವುದಿಲ್ಲ ಎಂದರು. ಬರುವ ಶೈಕ್ಷಣಿಕ ವರ್ಷದಿಂದ 12,700 ಮಂದಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದ್ದು ಈಗಾಗಲೇ ಒಂಭತ್ತು ಸಾವಿರ ಮಂದಿಯ ನೇಮಕಾತಿ ಪ್ರಕ್ರಿಯೆ ಪೂರ್ಣವಾಗಿದೆ. ಆದರೆ ಪ್ರೌಢಶಾಲೆಯ ಇಂಗ್ಲೀಷ್ ಶಿಕ್ಷಕರು ಹಾಗೂ ಪಿಯೂಸಿಯ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ವಿಷಯದಲ್ಲಿ ನ್ಯಾಯಾಲಯದ ತಡೆಯಾಜ್ಞೆ ಇದೆ ಎಂದು ವಿವರಿಸಿದರು.
ಈ ಮುನ್ನ ಇಂಗ್ಲೀಷ್ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಇಂಗ್ಲೀಷ್ ವಿಷಯವನ್ನು ಮುಖ್ಯ ವಿಷಯವನ್ನಾಗಿ ಓದಿಕೊಂಡವರು ಸಿಗುತ್ತಿರಲಿಲ್ಲ.ಹೀಗಾಗಿ ಪದವಿಯ ಜತೆ ಒಂಭತ್ತು ತಿಂಗಳ ಕೋರ್ಸು ಮಾಡಿದವರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು.
ಆದರೆ ಇದೀಗ ಹೈಕೋರ್ಟ್ ಆದೇಶದ ಪ್ರಕಾರ ಇಂಗ್ಲೀಷ್‌ನ್ನು ಮುಖ್ಯ ವಿಷಯವನ್ನಾಗಿ ಓದಿದವರನ್ನು ಮತ್ತು ಒಂಭತ್ತು ತಿಂಗಳ ಕೋರ್ಸು ಮಾಡಿದವರನ್ನು ಒಂದೇ ತರಹ ಪರಿಗಣಿಸಲು ಸಾಧ್ಯವಿಲ್ಲ.ಹೀಗಾಗಿ ನಾವು ನ್ಯಾಯಾಲಯದ ಆದೇಶವನ್ನು ಪಾಲಿಸಲೇಬೇಕು ಎಂದು ಹೇಳಿದರು.
ಇಷ್ಟಾದರೂ ಒಂಭತ್ತು ತಿಂಗಳ ಕೋರ್ಸು ಮಾಡಿದವರಿಗೆ ಇಂಗ್ಲೀಷ್‌ನ್ನು ಮುಖ್ಯ ವಿಷಯವನ್ನಾಗಿ ತೆಗೆದುಕೊಂಡು ಪದವಿ ಮಾಡಲು ಅವಕಾಶ ನೀಡುವ ಕುರಿತು ಚಿಂತನೆ ನಡೆದಿದೆ ಎಂದು ಅವರು ಹೇಳಿದರು.
ಕಡ್ಡಾಯ ಶಿಕ್ಷಣ ಕಾಯ್ದೆಯಡಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ವಿಷಯದಲ್ಲಿ ನ್ಯಾಯಾಲಯ ಈ ಹಿಂದೆ ತಡೆಯಾಜ್ಞೆ ನೀಡಿತ್ತು.ಆದರೆ ಅದನ್ನೀಗ ತೆರವು ಮಾಡಿದೆ.ಹೀಗಾಗಿ ಈ ಹಿಂದಿನಂತೆ ಕಾಯ್ದೆಯನುಸಾರ ಮಕ್ಕಳಿಗೆ ಪ್ರವೇಶ ಸಿಗುವಂತೆ ಮಾಡುವುದಾಗಿ ಅವರು ಹೇಳಿದರು.
ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಖಾಸಗಿ ಸಂಸ್ಥೆಗಳು ಮುಂದೆ ಬಂದಲ್ಲಿ ಅವರಿಗೆ ಮುಕ್ತ ಅವಕಾಶವಿದೆ. ಅಕ್ಷರ ಪ್ರತಿಷ್ಠಾನ ಹಾಗೂ ಇನ್ಪೋಸಿಸ್‌ನಂತಹ ಸಂಸ್ಥೆಗಳು ಈ ನಿಟ್ಟಿನಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿವೆ ಎಂದು ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.