ಆಭರಣ ಕಳವು: ಆರೋಪಿಯ ಬಂಧನ
ಬೆಂಗಳೂರು, ಫೆ.16: ಆಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೇಲ್ಸ್‌ಮೆನ್, ಅದೇ ಮಳಿಗೆಯಲ್ಲಿ ಚಿನ್ನದ ಉಂಗುರ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧ ಇಲ್ಲಿನ ಜಯನಗರ ಠಾಣಾ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ತ್ಯಾಗರಾಜನಗರದ ನಿವಾಸಿ ಎಸ್.ಬಾಲಕೃಷ್ಣ ಯಾನೆ ಬಾಬು(32) ಎಂದು ಗುರುತಿಸಲಾಗಿದೆ. ಆರೋಪಿಯು ಸುಮಾರು ಎರಡು ವರ್ಷಗಳಿಂದ ಇಲ್ಲಿನ ಜಯನಗರ 3ನೆ ಬ್ಲಾಕ್‌ನಲ್ಲಿರುವ ಪಿಸಿ ಜ್ಯುವೆಲ್ಲರ್ಸ್‌ನಲ್ಲಿ ಸೇಲ್ಸ್‌ಮೆನ್ ಕೆಲಸ ಮಾಡುತ್ತಿದ್ದು, ಐದು ತಿಂಗಳಿನಿಂದ ಅಂಗಡಿ ಮಾಲಕನಿಗೆ ಗೊತ್ತಾಗದಂತೆ 24 ಲಕ್ಷ ರೂ. ವೌಲ್ಯದ ಒಟ್ಟು 79 ಚಿನ್ನದ ಉಂಗುರಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಹಿನ್ನೆಲೆಯಲ್ಲಿ ಮಳಿಗೆ ಮಾನ್ಯೇಜರ್ ಸತೀಶ್‌ರಾವ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಾಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಬಾಲಕೃಷ್ಣನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆತನ ವಶದಲ್ಲಿದ್ದ 24 ಲಕ್ಷ ರೂ.ಬೆಲೆ ಬಾಳುವ 756 ಗ್ರಾಂ ತೂಕದ 79 ಚಿನ್ನದ ಉಂಗುರಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.