ನಕಲಿ ನೋಂದಣಿ ಫಲಕ: ವಾಹನಗಳ ವಿರುದ್ಧ ಕಾನೂನು ಕ್ರಮಕ್ಕೆ ಆದೇಶ
ಬೆಂಗಳೂರು, ಫೆ.16: ನಕಲಿ ನೋಂದಣಿ ಫಲಕಗಳನ್ನು ಅಳವಡಿಸಿರುವ ವಾಹನಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಸಾರಿಗೆ ಇಲಾಖೆ ಆದೇಶ ನೀಡಿದೆ.
ನಕಲಿ ನೋಂದಣಿ ಫಲಕಗಳನ್ನು ಬಳಕೆ ಮಾಡಲು ನಿರ್ಬಂಧ ಹೇರಲಾಗಿದ್ದರೂ, ಇತ್ತೀಚೆಗೆ ಹಲವಾರು ವಾಹನಗಳಲ್ಲಿ ಅತಿ ಸುರಕ್ಷತಾ ನೋಂದಣಿ ಫಲಕಗಳ ಮಾದರಿಯಲ್ಲಿ ಕಾಣುವ ನಕಲಿ ನೋಂದಣಿ ಫಲಕಗಳನ್ನು ಅಳವಡಿಸಿರುವುದಾಗಿ ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಇದೇ ಫೆ.12ರಿಂದ ಸರಕಾರವು ಕಡ್ಡಾಯವಾಗಿ ಅತಿ ಸುರಕ್ಷತಾ ನೋಂದಣಿ ಫಲಕಗಳ ಬಳಕೆ ಮಾಡದೇ ಇರುವ ಮತ್ತು ನಕಲಿ ಫಲಕಗಳನ್ನು ಹೊಂದಿರುವ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದೆ.
ಈ ಕುರಿತು ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಇಲಾಖೆಯ 2009 ಮತ್ತು 2011ರಲ್ಲಿ ಎಲ್ಲಾ ರಾಜ್ಯಗಳ ಪ್ರಧಾನ ಕಾರ್ಯದರ್ಶಿ ಮತ್ತು ಸಾರಿಗೆ ಆಯುಕ್ತರುಗಳಿಗೆ, ನಕಲಿ ಮತ್ತು ಐಎನ್‌ಡಿ ಫಲಕಗಳ ತಯಾರಿಕೆ, ಮಾರಾಟ, ಹಂಚಿಕೆ ಮಾಡುವವರ ವಿರುದ್ಧ ಕ್ರಮ ಜರಗಿಸಲು ಸೂಚನೆ ನೀಡಿತ್ತು.
ಈ ಕುರಿತು ರಾಜ್ಯದಲ್ಲಿ ಅತಿ ಸುರಕ್ಷತಾ ನೋಂದಣಿ ಫಲಕಗಳನ್ನು ಅಳವಡಿಸುವ ಯೋಜನೆಯನ್ನು ಜಾರಿಗೆ ತರಲು ಸಾರಿಗೆ ಇಲಾಖೆ 2013ರಲ್ಲಿ ಟೆಂಡರ್ ಕರೆಯಲಾಗಿತ್ತು. ಈ ಪ್ರಕ್ರಿಯೆಯನ್ನು ಪ್ರಶ್ನಿಸಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ರಿಟ್ ಅರ್ಜಿಗಳು ಬಾಕಿ ಇರುವ ಕಾರಣ ಸುರಕ್ಷತಾ ನೋಂದಣಿ ಫಲಕಗಳನ್ನು ಅಳವಡಿಸುವ ಯೋಜನೆಯನ್ನು ಜಾರಿಗೊಳಿಸಲು ಹಿನ್ನಡೆಯಾಗಿತ್ತು.
ಇದೇ ಫೆ.12ರಂತರ ನಕಲಿ ಐಎನ್‌ಡಿ ನೋಂದಣಿ ಫಲಕಗಳ ತಯಾರಿಕೆ, ಮಾರಾಟ ಮತ್ತು ಸರಬರಾಜು ಮಾಡುವುದು ಮತ್ತು ನಕಲಿ ನೋಂದಣಿ ಫಲಕಗಳ ಅಳವಡಿಕೆಯು ಕಾನೂನು ಬಾಹಿರವಾಗಿರುತ್ತದೆ. ನಕಲಿ ನೋಂದಣಿ ಫಲಕಗಳ ತಯಾರಿಕೆ, ಮಾರಾಟ ಮತ್ತು ವಾಹನಗಳಿಗೆ ಅಳವಡಿಸುವುದು ಕಂಡು ಬಂದಲ್ಲಿ ಅಂತಹ ಸಂಸ್ಥೆ ಮತ್ತು ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಪ್ರಕಟನೆಯಲ್ಲಿ ತಿಳಿಸಿದೆ.