ಸಿಯಾಚಿನ್ ಎಂಬ ಅತೀ ಎತ್ತರದ ಹುಚ್ಚು!

Update: 2016-02-28 17:30 GMT

ಸಿಯಾಚಿನ್ ಹಿಮಕಣಿವೆಯಲ್ಲಿ ಇತ್ತೀಚೆಗೆ 10 ಮಂದಿ ಭಾರತೀಯ ಯೋಧರು ಭೀಕರ ಹಿಮಪಾತದಿಂದ ಹಿಮಸಮಾಧಿಯಾದರು. ಇದೇ ಭಾಗದಲ್ಲಿ ಕೆಲ ವರ್ಷ ಹಿಂದೆ 150 ಮಂದಿ ಪಾಕಿಸ್ತಾನಿ ಯೋಧರು ಹಿಮಪಾತಕ್ಕೆ ಬಲಿಯಾಗಿದ್ದರು. ಬಾಲ್ಟಿ ಭಾಷೆಯಲ್ಲಿ ಸಿಯಾಚಿನ್ ಎಂದರೆ, ಯಥೇಚ್ಛ ಗುಲಾಬಿಗಳ ನಾಡು ಎಂಬ ಅರ್ಥ. ಆದರೆ ಇದು ಹೂವಿಗಿಂತ ಹೆಚ್ಚಾಗಿ ಇಲ್ಲಿ ನಿಯೋಜಿತರಾದ ಯೋಧರ ಪಾಲಿಗೆ ಮುಳ್ಳಿನ ಹಾಸಿಗೆ. ಕುತೂಹಲಕಾರಿ ಇತಿಹಾಸದ ಹೊರತಾಗಿಯೂ, ವಿಕಿಪೀಡಿಯಾ ಸಿಯಾಚಿನ್ ಹಿಮಕಣಿವೆ ವಿವಾದವನ್ನು ಹೀಗೆ ವಿವರಿಸುತ್ತದೆ-ಸಿಯಾಚಿನ್ ಹಿಮಕಣಿವೆ ಪರ್ವತಶ್ರೇಣಿಯ ಪೂರ್ವ ಕರಕೋರಂ ವಲಯ ವ್ಯಾಪ್ತಿಯಲ್ಲಿದೆ. ಭಾರತ ಮತ್ತು ಪಾಕಿಸ್ತಾನ ಗಳ ನಡುವಿನ ವಾಸ್ತವ ನಿಯಂತ್ರಣ ರೇಖೆ ಅಂತ್ಯವಾಗುವ ಪ್ರದೇಶಕ್ಕೆ ಅತ್ಯಂತ ಸನಿಹದಲ್ಲಿದೆ. ಇದು ಕರಕೋರಂ ವ್ಯಾಪ್ತಿಯ ಅತೀ ಉದ್ದದ ಹಾಗೂ ಧ್ರುವ ಪ್ರದೇಶವನ್ನು ಹೊರತುಪಡಿಸಿದರೆ, ವಿಶ್ವದ ಎರಡನೇ ಅತಿದೊಡ್ಡ ಹಿಮಕಣಿವೆ. ಇಂದಿರಾ ಪಾಯಿಂಟ್‌ನಲ್ಲಿ ತುರ್ಕಿಸ್ತಾನದ ಪೂರ್ವಗಡಿಗಿಂತ ಇದು ಸಮುದ್ರಮಟ್ಟದಿಂದ 18,875 ಅಡಿ ಎತ್ತರದಲ್ಲಿದೆ ಹಾಗೂ ಅಂತ್ಯದಲ್ಲಿ 11,875 ಅಡಿ ಕೆಳಕ್ಕೆ ಇದೆ. ಇಡೀ ಸಿಯಾಚಿನ್ ಹಿಮಕಣಿವೆಯ ಬಹುತೇಕ ಭಾಗ 1984ರಿಂದೀಚೆಗೆ ಭಾರತದ ವಶದಲ್ಲಿದೆ. ಪಾಕಿಸ್ತಾನ ಆಲ್ಟೊರೊ ರಿಜ್ಡ್‌ನ ಪಶ್ಚಿಮ ಪ್ರದೇಶವನ್ನು ನಿಯಂತ್ರಿಸುತ್ತದೆ. ಭಾರತ-ಪಾಕಿಸ್ತಾನ ಸಂಘರ್ಷದ ಶಾಂತಿ ಒಪ್ಪಂದದ ಬಳಿಕ, ವಿಶ್ವಸಂಸ್ಥೆ ನಿಗದಿಪಡಿಸಿದ ಯುದ್ಧವಿರಾಮ ರೇಖೆ ಇದಾಗಿದೆ. ಈ ರೇಖೆಯು ಹಲವು ವಿಭಿನ್ನ ಲಕ್ಷಣಗಳನ್ನು ಹೊಂದಿದೆ. 1949ರ ಕರಾಚಿ ಒಪ್ಪಂದ ಮಾತ್ರ ಪ್ರತ್ಯೇಕತಾ ರೇಖೆಯನ್ನು ಸಮಪರ್ಕವಾಗಿ ಗುರುತಿಸಿದೆ. ಈ ಒಪ್ಪಂದದ ಅನ್ವಯ ಗಡಿ ನಿಯಂತ್ರಣ ರೇಖೆಯು ಮುಂದೆ ಉತ್ತರ ಹಿಮಕಣಿವೆಯಲ್ಲಿ ಮುಂದುವರಿಯುತ್ತದೆ ಎಂದು ಉಲ್ಲೇಖಿಸಲಾಗಿದೆ.

ಭಾರತದ ನಿಲುವಿನ ಪ್ರಕಾರ, ಪ್ರತ್ಯೇಕತಾ ರೇಖೆಯು ಉತ್ತರಕ್ಕೆ ಸಾಲ್ಟೊರೊ ವಲಯದ ದಿಕ್ಕಿನಲ್ಲಿ ಸಾಗುತ್ತದೆ. ಅಂದರೆ ಇದು ಸಿಯಾಚಿನ್ ಹಿಮಕಣಿವೆಯ ಪಶ್ಚಿಮ ಭಾಗದಲ್ಲಿ ಹಾದುಹೋಗುತ್ತದೆ. ಆದರೆ ಅಂತರಾರಾಷ್ಟ್ರೀಯ ಗಡಿಯಲ್ಲಿ ಜಲಾನಯನ ಕಣಿವೆಯನ್ನು ಸಾಲ್ಟೊರೊ ವಲಯದಂತೆ ವಿಭಜಿಸಿಲ್ಲ. 1972ರ ಶಿಮ್ಲಾ ಒಪ್ಪಂದದ ಅನ್ವಯ, 1949ರ ವಾಸ್ತವ ನಿಯಂತ್ರಣ ರೇಖೆಯನ್ನು ಉತ್ತರದ ತುತ್ತತುದಿಯಲ್ಲಿ ಬದಲಿಸಲಾಗಿಲ್ಲ. ಅದಾಗ್ಯೂ ಈ ರೇಖೆಯನ್ನು ಔಪಚಾರಿಕವಾಗಿ ಎನ್‌ಜೆ9842 ಪ್ರದೇಶದಿಂದಾಚೆಗೆ ಗುರುತಿಸಿಲ್ಲ. ಆದರೆ ಅಮೆರಿಕ ಮತ್ತು ಪಾಕಿಸ್ತಾನಿ ನಕ್ಷೆಯಲ್ಲಿ ಈ ರೇಖೆಯನ್ನು ಕರಕೊರಂ ಪಾಸ್‌ಗೆ ನೇರವಾಗಿ ಎಳೆಯಲಾಗಿದ್ದು, ಹಿಮಕಣಿವೆ ಪ್ರದೇಶ ಪಾಕಿಸ್ತಾನಕ್ಕೆ ಬರುತ್ತದೆ. ಆದರೆ ಭಾರತ ಇದನ್ನು ಕಾರ್ಟೊಗ್ರಫಿ ಲೋಪ ಎಂದು ಪರಿಗಣಿಸಿದೆ. ಇಡೀ ಪ್ರದೇಶ ಯಾವ ಬಳಕೆಗೂ ಬಾರದ ಹಿಮಚ್ಛಾದಿತ ಪ್ರದೇಶವಾಗಿದ್ದು, ಹಲವು ವರ್ಷಗಳ ವರೆಗೆ ಯಾರೂ ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. 1970ರ ದಶಕದ ಉತ್ತರಾರ್ಧ ಹಾಗೂ 1980ರ ದಶಕದ ಪೂರ್ವಾರ್ಧದಲ್ಲಿ, ಖ್ಯಾತ ಪರ್ವತಾರೋಹಿ ಕರ್ನಲ್ ನರೀಂದರ್ ಕುಮಾರ್ ಈ ಪ್ರದೇಶದಲ್ಲಿ ಹಲವು ಶಿಖರಗಳಿಗೆ ಪರ್ವತಾರೋಹಣ ಕೈಗೊಂಡರು. ಇಂದಿರಾ ಪಾಯಿಂಟ್‌ಗೆ ಕೂಡಾ ತೆರಳಿದ್ದ ಅವರು, ಪಾಕಿಸ್ತಾನಿ ಪ್ರದೇಶದಲ್ಲಿ ಕೆಲ ವಿದೇಶಿ ಪರ್ವತಾರೋಹಿಗಳು ಬಿಟ್ಟುಹೋಗಿದ್ದ ಕೆಲ ಪರಿಕರಗಳನ್ನೂ ಜತೆಗೆ ತಂದರು. ಈ ಪ್ರದೇಶಕ್ಕೆ ಗಸ್ತು ವ್ಯವಸ್ಥೆ ಮಾಡುವಂತೆ ಸೇನಾ ಪಡೆಯ ಕಮಾಂಡರ್ ಆಗಿದ್ದ ಜನರಲ್ ಪ್ರೇಮ್ ಹೂನ್ ಅವರ ಮನವೊಲಿಸಿದರು. ಸಾಲ್ಟೊರೊ ವಲಯದ ಜತೆಗೆ ಇಲ್ಲೂ ಭಾರತದ ಸಾರ್ವಭೌಮತ್ವವನ್ನು ಸ್ಥಾಪಿಸುವಂತೆ ಸಲಹೆ ಮಾಡಿದರು.
1984ರಲ್ಲಿ ಭಾರತ ಮೇಘದೂತ್ ಕಾರ್ಯಾಚರಣೆ ಮೂಲಕ, ಸಿಯಾಚಿನ್ ಹಿಮಕಣಿವೆ ಪ್ರದೇಶವನ್ನು ನಿಯಂತ್ರಣಕ್ಕೆ ಪಡೆಯಿತು. ಜತೆಗೆ ಇದರ ಉಪಕಣಿವೆಗಳೂ ಭಾರತದ ನಿಯಂತ್ರಣಕ್ಕೆ ಒಳಪಟ್ಟವು. 1984ರಿಂದ 1999ರವರೆಗೆ, ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಹಲವು ಕದನಗಳು ಸಂಭವಿಸಿವೆ. ಈ ಮೊದಲು ಪಾಕಿಸ್ತಾನ ಸೇನೆಯ ವಶದಲ್ಲಿದ್ದ ಸಿಯಾಚಿನ್ ಹಿಮಕಣಿವೆಯ ಪಶ್ಚಿಮ ಭಾಗದ ಸಾಲ್ಟೊರೊ ರಿಡ್ಜ್ ಪ್ರದೇಶವನ್ನು ಭಾರತದ ಪಡೆಗಳು ಒಂದೇ ದಿನದಲ್ಲಿ ವಶಪಡಿಸಿಕೊಂಡವು., ಆದರೆ ಉಭಯ ದೇಶಗಳಿಗೆ ಇಲ್ಲಿ ದೊಡ್ಡ ಪ್ರಮಾಣದ ಕಾರ್ಯಾಚರಣೆ ಕೈಗೊಳ್ಳಲು ಸಾಧ್ಯವಾಗಲಿಲ್ಲ.
ಹಿಮಕಣಿವೆಯ ಎತ್ತರದ ನೆಲೆಗಳಲ್ಲಿ ಬದುಕುವುದೆಂದರೆ ಶೀತ ನರಕದಲ್ಲಿ ಬದುಕು ಸಾಗಿಸುವುದು. ಉಷ್ಣಾಂಶ ಮೈನಸ್ 60 ಡಿಗ್ರಿ ಸೆಲ್ಸಿಯಸ್‌ವರೆಗೂ ಹೋಗುತ್ತದೆ. ಹಿಮಗಾಳಿಯಿಂದಾಗಿ ಕೆಲವೊಮ್ಮೆ 30 ಅಡಿ ಎತ್ತರದ ಹಿಮರಾಶಿ ಕೂಡಾ ಸೃಷ್ಟಿಯಾಗುತ್ತದೆ. ಹಿಮದಾಳಿ ಮತ್ತು ಶೀತದ ಹುಣ್ಣು ಸಮಸ್ಯೆ, ಎತ್ತರಕ್ಕೆ ಹೋದಂತೆಲ್ಲ ಕಡಿಮೆಯಾಗುವ ಆಮ್ಲಜನಕ ಪ್ರಮಾಣದಿಂದಾಗಿ, ಸೆರೆಬ್ರಲ್ ಹಾಗೂ ಪಲ್ಮನರಿ ಊತಗಳು ಕಾಣಿಸಿಕೊಳ್ಳುತ್ತವೆ. ಪರ್ವತಾರೋಹಿಗಳು ಕೂಡಾ ಸಾಹಸ ಮಾಡಿ ಇಲ್ಲಿಗೆ ಬಂದರೆ, ಉತ್ತಮ ವಾತಾವರಣದಲ್ಲಿಯೂ ಕೆಲ ವಾರಗಳಿಗಿಂತ ಹೆಚ್ಚಿನ ಅವಧಿಗೆ ಇಲ್ಲಿ ವಾಸಿಸುವುದು ಕಷ್ಟ. ಇಲ್ಲಿ ಸೈನಿಕರು ಮಾತ್ರ ಸರದಿಯ ಅನ್ವಯ, ತಿಂಗಳುಗಳ ಕಾಲ ವಾಸ ಇರಬೇಕಾಗುತ್ತದೆ. ಅದರಲ್ಲೂ ಎತ್ತರದ ಪ್ರದೇಶದಲ್ಲಿ ಪ್ರತಿ 21 ದಿನಗಳಿಗೊಮ್ಮೆ ನಿಯೋಜನೆಗೊಳ್ಳುತ್ತಾರೆ. ಬಂದೂಕುಗಳು ಶೀತಗೊಳ್ಳದಂತೆ ಮಾಡುವ ಸಲುವಾಗಿ ಪ್ರತಿ ಕೆಲ ಗಂಟೆಗಳಿಗೆ ಒಮ್ಮೆಯಾದರೂ ಗುಂಡು ಹಾರಿಸುತ್ತಲೇ ಇರಬೇಕಾಗುತ್ತದೆ. ಶಸ್ತ್ರಾಸ್ತ್ರ ಸಂಘರ್ಷದಲ್ಲಿ ಯಾವ ಜೀವಹಾನಿಯೂ ಆಗುವುದು ಕಡಿಮೆ. ಬಹುತೇಕ ಜೀವಹಾನಿಯಾಗುವುದು ಹವಾಮಾನ ವೈಪರೀತ್ಯದ ಕಾರಣದಿಂದ. ಈ ಕಷ್ಟಕರ ಪರಿಸ್ಥಿತಿಯಲ್ಲಿ ಜೀವಿಸುವ ಉಭಯ ದೇಶಗಳ ಹಲವು ಮಂದಿ ಸೈನಿಕರು ಅಂಗವೈಕಲ್ಯಕ್ಕೂ ತುತ್ತಾಗಿದ್ದಾರೆ.
ಈ ಶೀತನರಕದ ಹೊರತಾಗಿ, ಈ ಪ್ರದೇಶದಲ್ಲಿ ರ್ವಹಿಸುವುದು ಕೂಡಾ ಅತ್ಯಂತ ದುಬಾರಿ. ಅತೀ ಎತ್ತರದ ಪರಿಕರಗಳು, ಒಣ ದವಸಧಾನ್ಯ, ಬಿಸಿ ಮಾಡಲು ಮತ್ತು ಬಂದೂಕುಗಳನ್ನು ಬೆಚ್ಚಗಿಡಲು ಸೀಮೆಎಣ್ಣೆ ಪೂರೈಕೆ ಅತ್ಯಂತ ದುಬಾರಿಯಾಗಿ ಪರಿಣಮಿಸುತ್ತದೆ. ಈ ಪ್ರದೇಶಲ್ಲಿ ಒಂದು ಲೀಟರ್ ಸೀಮೆ ಎಣ್ಣೆಯನ್ನು ಹೆಲಿಕಾಪ್ಟರ್ ಮೂಲಕ ಸಾಗಿಸಲು 500 ರೂಪಾಯಿ ವೆಚ್ಚ ತಗಲುತ್ತದೆ ಎಂದು ಹೇಳಲಾಗಿದೆ. ವಿಶೇಷವಾದ ಪರ್ವತಾರೋಹಣ ಪರಿಕರಗಳನ್ನು ಕೂಡಾ ಅತ್ಯಂತ ದುಬಾರಿ ಬೆಲೆಯಲ್ಲಿ ಆಮದು ಮಾಡಿಕೊಳ್ಳಬೇಕಾಗುತ್ತದೆ. ವಿಚಿತ್ರವೆಂದರೆ, ಎರಡೂ ಕಡೆಗಳಿಗೆ ಇಂಥ ಪರಿಕರಗಳನ್ನು ಸರಬರಾಜು ಮಾಡುವುದು ಪಶ್ಚಿಮ ಯೂರೋಪ್‌ನ ಉತ್ಪಾದನಾ ಘಟಕಗಳು.
ಎಲ್ಲಕ್ಕಿಂತ ಭೀಕರ ಪರಿಣಾಮವೆಂದರೆ, ಅದು ಅತಿಯಾದ ಪರಿಸರ ಮಾಲಿನ್ಯದ್ದು. ಈ ಹಿಮಕಣಿವೆಗೆ ಪ್ರತಿದಿನ ಸೈನಿಕರು ಒಂದು ಟನ್ ಪ್ರಮಾಣದ ತ್ಯಾಜ್ಯಗಳನ್ನು ಎಸೆಯುತ್ತಾರೆ. ಸಾಮಾನ್ಯ ಘನ ತ್ಯಾಜ್ಯಗಳು ಮಾತ್ರವಲ್ಲದೇ, ಖಾಲಿ ಬಂದೂಕು ಶೆಲ್‌ಗಳು, ಪ್ಯಾರಾಚೂಟ್ ಮತ್ತಿತರ ವಸ್ತುಗಳನ್ನೂ ಎಸೆಯಲಾಗುತ್ತದೆ. ಹಲವು ಕಡೆಗಳಲ್ಲಿ ಮಂಜುಗಡ್ಡೆ ಕಪ್ಪುಬಣ್ಣಕ್ಕೆ ತಿರುಗಿದೆ. ಇಂಥ ತ್ಯಾಜ್ಯದಲ್ಲಿ ಬಹುತೇಕ ಭಾಗ ಪ್ಲಾಸ್ಟಿಕ್, ಲೋಹಗಳು, ರಾಸಾಯನಿಕಗಳಾಗಿದ್ದು, ಇವು ಶೈಲಾಕ್ ನದಿಯನ್ನು ಮಲಿನಗೊಳಿಸಲು ಕಾರಣವಾಗುತ್ತವೆ. ಇದು ಇಂಡುಸ್ ನದಿಗೆ ನೀರು ಹೋಗುವ ಮೂಲವೂ ಆಗಿದೆ. ಈ ಎಲ್ಲ ಕಲ್ಮಶಗಳು ನೀರಿನ ಮೇಲೆ ಪರಿಣಾಮ ಬೀರುತ್ತವೆ. ಎವೆರೆಸ್ಟ್ ಮೂಲಶಿಬಿರ ಹೊರತುಪಡಿಸಿದರೆ ಇದು ಅತ್ಯಂತ ಹೆಚ್ಚು ಮಲಿನ ಪ್ರದೇಶವಾಗಿದೆ. ಭಾರಿ ಪ್ರಮಾಣದ ಮಿಲಿಟರಿ ಪಡೆ ಇಲ್ಲಿ ನೆಲೆ ನಿಂತಿರುವುದರಿಂದ ಈ ಭಾಗದ ಸಸ್ಯಪ್ರಬೇಧ ಹಾಗೂ ಪ್ರಾಣಿಪ್ರಬೇಧಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.
 ಈ ವಿವಾದವನ್ನು ಬಗೆಹರಿಸುವ ಹಲವು ಪ್ರಯತ್ನಗಳು ನಡೆದಿದ್ದರೂ, ವಿಫಲವಾಗಿವೆ. ಮನಮೋಹನ ಸಿಂಗ್ ಸಿಯಾಚಿನ್ ಪ್ರದೇಶಕ್ಕೆ ಭೇಟಿ ನೀಡಿದ ಮೊಟ್ಟಮೊದಲ ಭಾರತೀಯ ಪ್ರಧಾನಿ. ವ್ಯಾಜ್ಯವನ್ನು ಶಾಂತಿಯುತವಾಗಿ ಬಗೆಹರಿಸುವಂತೆ ಅವರು ಕರೆ ನೀಡಿದ್ದರು. ಸಿಯಾಚಿನ್ ಪ್ರದೇಶವನ್ನು ಶಾಂತಿವನವಾಗಿ ಘೋಷಿಸುವಂತೆ ಪರಿಸರವಾದಿಗಳು ಆಗ್ರಹಿಸಿದ್ದಾರೆ. ಆದರೆ ವ್ಯಾಜ್ಯದ ಕುರಿತ ನಿರ್ಣಯ ಸ್ಥಗಿತಗೊಂಡಿದೆ. ಪಾಕಿಸ್ತಾನದ ವಶದಲ್ಲಿರುವ ಪ್ರದೇಶದ ಬಗ್ಗೆ ಅಧಿಕೃತ ನಕ್ಷೆಯನ್ನು ಆ ದೇಶ ಬಿಡುಗಡೆ ಮಾಡಬೇಕು ಎಂದು ಭಾರತ ಬಯಸಿದೆ. ಉಭಯ ದೇಶಗಳ ರಾಜಕೀಯ ಹಾಗೂ ಸೇನಾ ಮುಖಂಡರು ಇದೇ ಪ್ರದೇಶದಲ್ಲೇ ಶಾಂತಿ ಮಾತುಕತೆ ನಡೆಸುವಂತೆ ಮಾಡಿದರೆ, ಆಗ ಅವರಿಗೆ ಈ ಪ್ರದೇಶದ ವಾಸ್ತವ ಸಮಸ್ಯೆ ಅರ್ಥವಾಗಬಹುದು. ಆಗ ಉಭಯ ಪಕ್ಷಗಳು ಆ ಪ್ರದೇಶದಿಂದ ವಾಪಸು ತೆರಳಲು ಒಪ್ಪಿಕೊಳ್ಳಬಹುದು. ಈ ಮೂಲಕ ಈ ಅತೀ ಎತ್ತರದ ಹುಚ್ಚು ಕೊನೆಗಾಣಿಸಬಹುದು. ಇದು ಎಷ್ಟು ಬೇಗ ಸಾಧ್ಯವಾಗುತ್ತದೋ, ಉಭಯ ದೇಶಗಳಿಗೆ ಒಳ್ಳೆಯದು; ಇಲ್ಲಿ ನರಳುವ ಸೈನಿಕರಿಗೆ ಮತ್ತು ಮಲಿನವಾಗುತ್ತಿರುವ ಪರಿಸರಕ್ಕೆ.

Writer - ಎಂ.ಅಶ್ರಫ್

contributor

Editor - ಎಂ.ಅಶ್ರಫ್

contributor

Similar News