ಬೆಂಗಳೂರು : ಈ ಬಾರಿ 110 ಲಕ್ಷ ಟನ್ನುಗಳಷ್ಟು ಆಹಾರ ಧಾನ್ಯಗಳನ್ನು ಉತ್ಪಾದಿಸುವ ವಿಶ್ವಾಸವಿದೆ -ವಾಜೂಭಾಯಿ ವಾಲಾ
ಬೆಂಗಳೂರು,ಫೆ.29: ಬರಪರಿಸ್ಥಿತಿ ನಡುವೆಯೂ ಆಹಾರ ಉತ್ಪಾದನೆಯಲ್ಲಿ ಯಾವುದೇ ಕೊರತೆ ಉಂಟಾಗುವುದಿಲ್ಲ. ಈ ಬಾರಿ 110 ಲಕ್ಷ ಟನ್ನುಗಳಷ್ಟು ಆಹಾರ ಧಾನ್ಯಗಳನ್ನು ಉತ್ಪಾದಿಸುವ ವಿಶ್ವಾಸವಿದೆ ಎಂದು ರಾಜ್ಯಪಾಲ ವಾಜೂಭಾಯಿ ವಾಲಾ ಹೇಳಿದ್ದಾರೆ.
ಜನವರಿ ಅಂತ್ಯದ ವೇಳೆಗೆ ರಾಜ್ಯದ 9 ಲಕ್ಷ ರೈತರಿಗೆ 7800 ಕೋಟಿ ರೂ ಕೃಷಿ ಸಾಲ ನೀಡಲಾಗಿದೆ. ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ್ದು, ಕೃಷಿ, ಕೈಗಾರಿಕೆ, ವಿದ್ಯುತ್ ಸೇರಿದಂತೆ ಎಲ್ಲ ರಂಗಗಳಿಗೆ ಒತ್ತು ಕೊಡಲಾಗಿದೆ. ಆದ್ಯತೆ ನೀಡುವ ಮೂಲಕ ಸಾಮಾಜಿಕ ನ್ಯಾಯದ ಮಾರ್ಗದಲ್ಲಿ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ನೀರಾವರಿ ಸಾಮರ್ಥ್ಯವನ್ನು ಹೆಚ್ಚಿಸಲು ತಮ್ಮ ಸರ್ಕಾರ ಬದ್ಧವಾಗಿದ್ದು ಇದರಿಂದಾಗಿ ಡಿಸೆಂಬರ್ ಅಂತ್ಯದವರೆಗೆ 5277 ಎಕರೆ ಭೂಮಿಗೆ ನೀರಾವರಿ ಸೌಲ್ಯ ಕಲ್ಪಿಸಲಾಗಿದೆ. ಇದೇ ರೀತಿ ನಾರಾಯಣಪುರ ಎಡದಂಡೆ ಕಾಲುವೆ,ತುಂಗಭದ್ರಾ ಎಡದಂಡೆ ಕಾಲುವೆ ಮತ್ತು ಭದ್ರಾ ಕಾಲುವೆಗಳಡಿಯಲ್ಲಿ ನೀರಾವರಿ ಜಾಲದ ಆಧುನೀಕರಣ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದವರು ಘೋಷಿಸಿದರು.
ರಾಜ್ಯದಲ್ಲಿ ಕೃಷಿ ಭೂಮಿಯನ್ನು ಖರೀದಿಸಲು ಅನುಕೂಲವಾಗುವಂತೆ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದುಇದರಿಂದಾಗಿ ಭೂಮಿ ಖರೀದಿಸಲು ಇದ್ದ ಕೃಷಿಯೇತರ ವರಮಾನದ ಪ್ರಮಾಣವನ್ನು ಎರಡು ಲಕ್ಷ ರೂಗಳಿಂದ ಇಪ್ಪತ್ತೈದು ಲಕ್ಷ ರೂಗಳಿಗೆ ಹೆಚ್ಚಿಸಲಾಗಿದೆ. ರಾಜ್ಯದ 170 ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿರುವ ಪೋಡಿ ಆಂದೋಲನದಡಿ ನವೆಂಬರ್ ತಿಂಗಳ ತನಕ ಮೂರು ಲಕ್ಷ ಪೋಡಿ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು.
ಪ್ರಸಕ್ತ ಕೃಷಿ ಮಾರುಕಟ್ಟೆಗಾಗಿ ಪ್ರತ್ಯೇಕ ನೀತಿಯನ್ನು ಅಳವಡಿಸಿಕೊಂಡಿರುವ ದೇಶದ ಮೊಟ್ಟ ಮೊದಲ ಸರ್ಕಾರ ತಮ್ಮದು ಎಂದಿರುವ ಅವರು,ಇದರ ಪರಿಣಾಮವಾಗಿ ಇರುವ 157 ಕೃಷಿ ಉತ್ಪನ್ನು ಮಾರುಕಟ್ಟೆಗಳ ಪೈಕಿ ನೂರಾ ಮೂರು ಮಾರುಕಟ್ಟೆಗಳು ಆನ್‌ಲೈನ್‌ನಲ್ಲಿ ಇದುವರೆಗೆ ಹದಿನೈದು ಸಾವಿರ ಕೋಟಿ ರೂಗಳಷ್ಟು ವಹಿವಾಟು ನಡೆಸಿದೆ ಎಂದವರು ಹೇಳಿದರು.
ಜಾನುವಾರು ಮತ್ತು ಕೋಳಿ ಸಾಗಣೆಯು ರೈತರ ಜನಜೀವನಕ್ಕೆ ಉತ್ತೇಜನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇದರಡಿ ಆರು ಸಾವಿರ ಮಂದಿ ಫಲಾನುಭವಿಗಳು ಒಂದು ಕುರಿಗೆ ಐದು ಸಾವಿರ ರೂಗಳಂತೆ ಸಹಾಯಧನ ಪಡೆದಿದ್ದಾರೆ.ಮತ್ತು ಹಿತ್ತಲು ಕೋಳಿ ಸಾಕಣೆಯನ್ನು ಪ್ರೋತ್ಸಾಹಿಸುವ ಸಲುವಾಗಿ ನಲವತ್ತು ಸಾವಿರ ಗಿರಿರಾಜ ಕೋಳಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ.
ಅದೇ ರೀತಿ ರಾಜ್ಯದಲ್ಲಿ ನೂರು ಪ್ರಾಥಮಿಕ ಪಶುವೈದ್ಯಕೀಯ ಕೇಂದ್ರಗಳನ್ನು,ಪಶು ವೈದ್ಯಕೀಯ ಚಿಕಿತ್ಸಾಲಯಗಳನ್ನು ಮೇಲ್ದರ್ಜೆಗೇರಿಸಲಾಗಿದೆ.ನೂರು ಹೊಸ ಪಶುವೈದ್ಯಕೀಯ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು.
ರಾಜ್ಯದಲ್ಲಿ ಕುರಿಗಳು ಮತ್ತು ಮೇಕೆಗಳ ಉತ್ತಮ ಆರೋಗ್ಯ ನಿರ್ವಹಣೆಗಾಗಿ ಹದಿನೆಂಟು ಬಹೂಪಯೋಗಿ ಸಂಚಾರಿ ಆಂಬುಲೇಟರಿ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲಾಗಿದೆ. ರಾಜ್ಯದ ಸಮೃದ್ಧ ಪರಂಪರೆಯನ್ನು ರಕ್ಷಿಸುವುದರ ಮಹತ್ವವನ್ನು ತಮ್ಮ ಸರ್ಕಾರ ಮನಗಂಡಿದ್ದು ಇದೇ ಕಾರಣಕ್ಕಾಗಿ ಭದ್ರಾ ವನ್ಯಜೀವಿ ಅಭಯಾರಣ್ಯ ಹಾಗೂ ಸುತ್ತ ಮುತ್ತಲ ಪ್ರದೇಶಗಳನ್ನು ಮೈಸೂರು ಆನೆ ಮೀಸಲು ಪ್ರದೇಶಕ್ಕೆ ಸೇರಿಸಲಾಗಿದೆ.
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದು ಇದರಿಂದಾಗಿ ಯರಮರಸ್ ಉಷ್ಣ ವಿದ್ಯುತ್ ಸ್ಥಾವರದಿಂದ ಒಂದನೇ ಘಟಕದಿಂದ 800 ಮೆಗಾವ್ಯಾಟ್,ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರದ ಮೂರನೇ ಘಟಕದಿಂದ 700 ಮೆಗಾವ್ಯಾಟ್ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳಿಂದ 495 ಮೆಗಾವ್ಯಾಟ್ ವಿದ್ಯುತ್ ಸೇರಿದಂತೆ ಸುಮಾರು ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಹೊತಾಗಿ ರಾಜ್ಯದ ಗ್ರಿಡ್‌ಗೆ ಲಭ್ಯವಾಗಲಿದೆ ಎಂದು ಹೇಳಿದರು.
ಇದೇ ರೀತಿ ಸೌರ ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡಲು ಈಗಾಗಲೇ ಕೆಆರ್‌ಇಡಿಎಲ್ ಮೂಲಕ 1000 ಮೆಗಾವ್ಯಾಟ್‌ನಷ್ಟು ವಿದ್ಯುತ್‌ನ್ನು ಉತ್ಪಾದಿಸುವ ವಿವಿಧ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಇದೇ ರೀತಿ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ 11,500 ಎಕರೆ ಪ್ರದೇಶದಲ್ಲಿ 2000 ಮೆಗಾವ್ಯಾಟ್ ಸಾಮರ್ಥ್ಯದ ವಿಶ್ವದ ಅತಿ ದೊಡ್ಡ ಸೌರ ವಿದ್ಯುತ್ ಪಾರ್ಕನ್ನು ಸ್ಥಾಪಿಸಲಾಗುತ್ತಿದೆ ಎಂದರು.
ನೂತನ ಜವಳಿ ನೀತಿಯಡಿ 2018 ರ ವೇಳೆಗೆ ಒಟ್ಟು 8000 ಕೋಟಿ ರೂ ಬಂಡವಾಳ ಹೂಡಿಕೆಯಾಗಲಿದ್ದು ನಾಲ್ಕು ಲಕ್ಷ ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದ ಅವರು,ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ವಿಷನ್ ಗ್ರೂಪ್ ಸ್ಥಾಪಿಸಲಾಗಿದೆ ಎಂದರು.
ಇ-ಹರಾಜು ಪ್ರಕ್ರಿಯೆಯ ಮೂಲಕ ನವೆಂಬರ್‌ವರೆಗೂ 2580 ಕೋಟಿ ರೂ ಮೌಲ್ಯದ 17.45 ದಶಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಮಾರಾಟ ಮಾಡಲಾಗಿದೆ. ರಾಜ್ಯದಲ್ಲಿ ರೈಲ್ವೇ ಮಾರ್ಗಗಳನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ಭಾರತೀಯ ರೈಲ್ವೆಗೆ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿದ್ದು ಇದರಿಂದಾಗಿ ಕೇಂದ್ರ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸುವ ರೈಲ್ವೇ ಯೋಜನೆಗಳಿಗೆ ಶೇಕಡಾ ಐವತ್ತರಿಂದ ಹಿಡಿದು ಮೂರನೇ ಎರಡು ಭಾಗದ ತನಕ ಪಾಲು ಸಲ್ಲಿಸಲಿದೆ ಎಂದರು.
ರಾಮನಗರ-ಮೈಸೂರು ರೈಲ್ವೇ ಜೋಡಿ ಮಾರ್ಗ ಯೋಜನೆಯಲ್ಲಿ ಒಂದೂವರೆ ಕಿಲೋಮೀಟರುಗಳನ್ನು ಹೊರತುಪಡಿಸಿ ಉಳಿದಂತೆ ನೂರಿಪ್ಪತ್ತೈದು ಕಿಲೋಮೀಟರುಗಳಷ್ಟು ಮಾರ್ಗವನ್ನು ಪೂರ್ಣಗೊಳಿಸಲಾಗಿದೆ. ತಮ್ಮ ಸರ್ಕಾರ ಶುದ್ದ ಇಂಧನಗಳ ಬಳಕೆಯನ್ನು ಪ್ರೋತ್ಸಾಹಿಸುತ್ತಿದ್ದು ಕೆಎಸ್‌ಐಡಿಸಿ ಮತ್ತು ಭಾರತ ಸರ್ಕಾರದ ಗೇಲ್ ಗ್ಯಾಸ್ ಸಂಸ್ಥೆಗಳ ಮೂಲಕ ಒಂದು ವಿಶೇಷ ವಾಹನವನ್ನು ಸ್ಥಾಪಿಸಲಾಗಿದ್ದು ಈ ವಿಶೇಷ ವಾಹನ ಬೆಂಗಳೂರಿನಲ್ಲಿರುವ ಮನೆಗಳಿಗೆ ನೈಸರ್ಗಿಕ ಅನಿಲವನ್ನು ಕೊಳವೆಳ ಮೂಲಕ ಸರಬರಾಜು ಮಾಡಲಿದೆ ಎಂದರು.
ರಾಜ್ಯದಲ್ಲಿ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಮೂಲಕ,ಸಾಮಾಜಿಕ ನ್ಯಾಯವನ್ನು ಒದಗಿಸಲು ಪರಿಶಿಷ್ಟರಿಗೆ ಬೆಂಬಲ ನೀಡುವ ಮೂಲಕ,ಅಲ್ಪಸಂಖ್ಯಾತರಿಗೆ ಬೆಂಬಲ ನೀಡುವ ಮೂಲಕ,ಐವತ್ತೆರಡು ಲಕ್ಷ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ,ವಿಧವಾ ವೇತನ,ಸಂಧ್ಯಾ ಸುರಕ್ಷಾ,ಅಂಗವಿಕಲರ ಪಿಂಚಣಿ,ಮನಸ್ವಿನಿ,ಮೈತ್ರಿ ಯೋಜನೆಗಳ ಸೌಲಭ್ಯ ವಿತರಿಸಲಾಗುತ್ತಿದೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರೋತ್ಸಾಹ ನೀಡಲು ಮತ್ತು ಸ್ಥಳದಲ್ಲಿಯೇ ಅವರ ಅರ್ಜಿಗಳನ್ನು ವಿಲೇ ಮಾಡಲು ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದ್ದು ಇದಕ್ಕಾಗಿ 1410 ಅದಾಲತ್‌ಗಳನ್ನು ನಡೆಸಲಾಗಿದೆ ಎಂದರು.
ರಾಜ್ಯದ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದು,ನೈರ್ಮಲ್ಯವನ್ನು ತಡೆಗಟ್ಟುವುದು ತಮ್ಮ ಸರ್ಕಾರದ ಗುರಿಯಾಗಿದ್ದು ಇದೇ ರೀತಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದ ಐವತ್ತೈದು ಲಕ್ಷ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯವನ್ನು ಒದಗಿಸಲಾಗಿದೆ. ಭೂಮಿಯ ಮೇಲಿರುವ ಮೂಲಗಳಿಂದ ಶುದ್ಧ ಕುಡಿಯುವ ನೀರನ್ನು ತರಲು ಸರ್ಕಾರ ಯತ್ನಿಸುತ್ತಿದ್ದು ಇದಕ್ಕಾಗಿ ಸಮಗ್ರ ಯೋಜನೆಯನ್ನು ತಯಾರಿಸಿ ನೆರವು ನೀಡಲು ಭಾರತ ಸರ್ಕಾರವನ್ನು ಕೋರಲಾಗುತ್ತಿದೆ ಎಂದು ಅವರು ಹೇಳಿದರು.
ತಾಯಂದಿರ ಮತ್ತು ಮಕ್ಕಳ ಆರೋಗ್ಯ ಸುಧಾರಣೆಗೆ ನನ್ನ ಸರ್ಕಾರ ಒತ್ತು ನೀಡಿದ್ದು ಶಿಶು ಮರಣದ ಪ್ರಮಾಣ ಇಳಿಕೆಯಾಗಿದ್ದು ಪ್ರತಿ ಸಾವಿರ ಮಕ್ಕಳ ಜನನ ಪ್ರಮಾಣಕ್ಕೆ ಹೋಲಿಸಿದರೆ 28 ಮಕ್ಕಳು ಮಾತ್ರ ಸಾವನ್ನಪ್ಪುತ್ತಿವೆ. ಆರೋಗ್ಯ ಸೌಲಭ್ಯವನ್ನು ಸುಧಾರಿಸುವ ಸಲುವಾಗಿ ರಾಜ್ಯದಲ್ಲಿ ಅರವತ್ತು ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಇಪ್ಪತ್ತೈದು ತಾಲ್ಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಇರುವ ತುರ್ತು ನಿಗಾ ಘಟಕಗಳನ್ನು ಸ್ಥಾಪಿಸಲಾಗಿದೆ.ಅದೇ ರೀತಿ ನಲವತ್ತು ಆಸ್ಪತ್ರೆಗಳಲ್ಲಿ ಜನಸಂಜೀವಿನಿ ಜೆನರಿಕ್ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
ರಕ್ತನಿಧಿಗಳಲ್ಲಿ ಸಂಗ್ರಹವಿರುವ ರಕ್ತದ ಪ್ರಮಾಣವನ್ನು ಕುರಿತಾದ ಮಾಹಿತಿಯನ್ನು ಒದಗಿಸಲು ರಕ್ತ ಸಂಜೀವಿನಿ ವೆಬ್ ಪೋರ್ಟಲ್ ಅನ್ನು ಸ್ಥಾಪಿಸಲಾಗಿದೆ ಎಂದು ರಾಜ್ಯಪಾಲ ವಾಜೂಭಾಯಿ ವಾಲಾ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ 2015-16 ನೇ ಸಾಲಿನಿಂದ ಮೂರು ವೈದ್ಯಕೀಯ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದ್ದು ಕೊಪ್ಪಳ,ಗದಗ ಹಾಗೂ ಕಲ್ಬುರ್ಗಿಯಲ್ಲಿ ಈಗಾಗಲೇ ಕಾಲೇಜುಗಳು ಆರಂಭವಾಗಿದ್ದು ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ನಾನೂರೈವತ್ತು ಎಂಬಿಬಿಎಸ್ ಸೀಟುಗಳು ಲಭ್ಯವಾಗಲಿವೆ.
ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿರುವ ಮತ್ತು ಶಾಲೆಗಳಲ್ಲಿರುವ ಒಟ್ಟು 99 ಲಕ್ಷ ಮಕ್ಕಳಿಗೆ ಹಾಲು ನೀಡಲಾಗುತ್ತಿದೆ.
ಅದೇ ರೀತಿ ಬಾಲಸಂಜೀವಿನಿ ಯೋಜನೆಯಡಿ ಹದಿನೆಂಟು ರೋಗಗಳಿಗೆ ಈಗಾಗಲೇ ಗುರುತಿಸಲಾಗಿರುವ ಮೂವತ್ಮೂರು ಆಸ್ಪತ್ರೆಗಳಲ್ಲಿ 5400 ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಅವರು ವಿವರ ನೀಡಿದರು.
ಬಡತನ ರೇಖೆಗಿಂತ ಕೆಳಗಿರುವ ರಾಜ್ಯದ ಒಂದು ಕೋಟಿಗಿಂತಲೂ ಹೆಚ್ಚು ಜನ ಅನ್ನಭಾಗ್ಯ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದು ಈ ವರ್ಷದಿಂದ ಇಪ್ಪತ್ತೈದು ರೂಪಾಯಿಗೆ ಒಂದು ಲೀಟರ್ ತಾಳೆ ಎಣ್ಣೆ ಹಾಗೂ ಎರಡು ರೂಗೆ ಕೆಜಿ ಅಯೋಡಿನ ಉಪ್ಪನ್ನು ಒದಗಿಸುತ್ತಿದೆ ಎಂದರು.
ರಾಜೀವ್ ಆವಾಸ್ ಯೋಜನೆಯ ಮೊದಲನೆ ಹಂತದಲ್ಲಿ 22,000 ಮನೆಗಳನ್ನು ನಾಗರೀಕ ಮೂಲ ಸೌಲಭ್ಯಗಳೊಂದಿಗೆ ನಿರ್ಮಿಸಲಾಗುತ್ತಿದ್ದು ರಾಜಧಾನಿ ಬೆಂಗಳೂರನ್ನು ಸರ್ವಾಂಗೀಣ ಅಭಿವೃದ್ಧಿಗೆ ಸಜ್ಜುಗೊಳಿಸಲಾಗುತ್ತಿದ್ದು ರಾಜ್ಯದ ಮೈಸೂರು ನಗರ ದೇಶದಲ್ಲೇ ಅತ್ಯಂತ ನಿರ್ಮಲ ನಗರವೆಂದು ಸತತ ಎರಡನೇ ಬಾರಿ ಪ್ರಶಸ್ತಿ ಪಡೆದಿದೆ ಎಂದು ಹೆಗ್ಗಳಿಕೆ ವ್ಯಕ್ತಪಡಿಸಿದರು.
ರಾಜ್ಯದ ಜನ ಸಾಮಾನ್ಯರಿಗೆ ಶೀಘ್ರಗತಿಯಲ್ಲಿ ನ್ಯಾಯ ಒದಗಿಸುವ ಸಲುವಾಗಿ ಸರ್ಕಾರ ಅರವತ್ತು ಹೊಸ ನ್ಯಾಯಾಲಯಗಳನ್ನು ಮತ್ತು ಮೂರು ಲೋಕಾಯುಕ್ತ ನ್ಯಾಯಾಲಯಗಳನ್ನು ಸ್ಥಾಪಿಸಿದೆ.ಇನ್ನು ನೂರಾ ನಲವತ್ತೈದು ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.