ಸಿದ್ದರಾಮಯ್ಯ ವಿರುದ್ಧ ಒಂದಾದರೆ ಯಡಿಯೂರಪ್ಪ ಹಾಗು ದೇವೇಗೌಡ ?
ಬೆಂಗಳೂರು.ಮಾ.2: ತಮ್ಮ ವಿರುದ್ಧ ಸಿಡಿದು ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮಣಿಸುವ ಉದ್ದೇಶದಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಟ್ಟುಗೂಡಿದ್ದು, ಇದು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆವಣಿಗೆಯಾಗಿ ಮಾರ್ಪಟ್ಟಿದೆ.
ವಾಚ್ ಪ್ರಕರಣದಲ್ಲಿ ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವ ಬೆನ್ನಲ್ಲೇ, ಬಿಜೆಪಿ ಮತ್ತು ಜೆಡಿಎಸ್‌ನ ಪ್ರಬಲ ನಾಯಕರು ಒಗ್ಗಟ್ಟಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಂಸತ್ ಅಧಿವೇಶನದಲ್ಲಿ ಪಾಲ್ಗೊಂಡಿರುವ ಈ ಇಬ್ಬರೂ ನಾಯಕರು ಮಂಗಳವಾರ ರಾತ್ರಿ ರಾಜ್ಯದ ಬಿಜೆಪಿ ಸಂಸದರೊಬ್ಬರು ಆಯೋಜಿಸಿದ್ದ ಔತಣದಲ್ಲಿ ಭಾಗವಹಿಸಿದ್ದರು. ಬಹು ಹೊತ್ತು ಇಬ್ಬರೂ ನಾಯಕರು ಪ್ರತ್ಯೇಕವಾಗಿ ಕುಳಿತು ಹಲವು ರಹಸೆ್ಯ ಸಂಗತಿಗಳ ಬಗ್ಗೆ ಚರ್ಚೆ ನಡೆಸಿದರು ಎಂದು ನಂಬಲರ್ಹ ಮೂಲಗಳು ಹೇಳಿವೆ.
ಊಟದ ನೆಪದಲ್ಲಿ ಸೇರಿದ್ದ ಈ ಸಭೆಯಲ್ಲಿ ಬಿಜೆಪಿ ಸಂಸದರು, ಕೆಲ ಅತೃಪ್ತ ಕಾಂಗ್ರೆಸ್ ಸಂಸದರು ಮತ್ತು ದೇವೇಗೌಡರು ಪಾಲ್ಗೊಂಡಿದ್ದರು ಎನ್ನಲಾಗಿದೆ. ರಾತ್ರಿ ಬಹುಹೊತ್ತು ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಸವಾಲೋಚನೆ ನಡೆಯಿತು ಎನ್ನಲಾಗಿದೆ.
ಇದೇ ಕಾಲಕ್ಕೆ ಸಿದ್ದರಾಮಯ್ಯ ಅವರ ಓಟಕ್ಕೆ ಹೇಗೆ ಕಡಿವಾಣ ಹಾಕಬೇಕೆಂಬ ಬಗ್ಗೆ ಈ ಇಬ್ಬರೂ ನಾಯಕರು ಪರಸ್ಪರ ಚರ್ಚೆ ನಡೆಸಿದರು. ಇತ್ತೀಚೆಗೆ ಯಡಿಯೂರಪ್ಪ ಮತ್ತು ಕುಮಾರ ಸ್ವಾಮಿ ಹುಬ್ಬಳ್ಳಿ ಸೇರಿದಂತೆ ಹಲವೆಡೆ ಭೇಟಿ ಮಾಡಿದ ಬೆಳವಣಿಗೆಯ ನಂತರ ದಿಲ್ಲಿಯಲ್ಲಿ ಮತ್ತೊಂದು ಮಹತ್ವದ ಭೇಟಿ ಭಾರಿೀ ಕುತೂಹಲಕ್ಕೆ ದಾರಿಮಾಡಿಕೊಟ್ಟಿದೆ.
ಜತೆಗೆ ವಾಚ್ ಪ್ರಕರಣವನ್ನು ಸಂಸತ್ತಿನಲ್ಲಿ ಹೇಗಾದರೂ ಮಾಡಿ ಪ್ರಸ್ತಾಪಿಸಿ, ಸಿದ್ದರಾಮಯ್ಯ ಅವರಿಗೆ ಮುಜುಗರವುಂಟು ಮಾಡಬೇಕೆಂಬ ಕಾರ್ಯತಂತ್ರವೂ ಸಹ ಇಲ್ಲಿ ರೂಪುಗೊಂಡಿದೆ.
ಈ ಬೆಳವಣಿಗೆಯನ್ನು ಅರಿತ ಸಿದ್ದರಾಮಯ್ಯ ಸಂಸತ್ತಿನಲ್ಲಿ ಪ್ರಕರಣ ಪ್ರಸ್ತಾಪಿಸಲು ನಡೆಯುತ್ತಿರುವ ಷಡ್ಯಂತ್ರಕ್ಕೆ ತಿರುಗೇಟು ನೀಡಲು ತಮ್ಮ ವಾಚ್‌ನ್ನು ಸರ್ಕಾರದ ಸುಪರ್ದಿಗೆ ನೀಡಿ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.
ಒಂದು ವೇಳೆ ಸಂಸತ್ತಿನಲ್ಲಿ ಪ್ರಕರಣ ವಿಚಾರಣೆಗೆ ಬಂದರೆ ಅಥವಾ ಯಾರಾದರೂ ಪ್ರಸ್ತಾಪಿಸಿದರೆ, ಪಕ್ಷವನ್ನು ಸಮರ್ಥಿಸಿಕೊಳ್ಳಲು ಮತ್ತು ಮುಜುಗರದಿಂದ ಹೊರ ಬರಲು ಪೂರಕ ವಾತಾವರಣವನ್ನು ಸಿದ್ದರಾಮಯ್ಯ ರೂಪಿಸಿದ್ದಾರೆ.
ಆದರೆ ಏನೇ ಆಗಲಿ ಸಿದ್ದರಾಮಯ್ಯ ಅವರನ್ನು ಹಣಿಯಲು ದೇವೇಗೌಡ ಮತ್ತು ಯಡಿಯೂರಪ್ಪ ಒಂದಾಗಿರುವುದು ಮಾತ್ರ ಹೊಸ ರಾಜಕೀಯ ಬೆಳವಣಿಗೆಯಾಗಿದೆ.