ರೌಡಿಶೀಟರ್‌ನನ್ನು ಕೊಲೆಗೈದು ಪರಾರಿ
ಬೆಂಗಳೂರು, ಮಾ. 2: ರೌಡಿಶೀಟರ್ ಪಟ್ಟಿಲ್ಲಿದ್ದ ವ್ಯಕ್ತಿಯೊಬ್ಬನನ್ನು ಅಪಹರಿಸಿ ಕೊಲೆಗೈದು ಪರಾರಿಯಾಗಿರುವ ದುರ್ಘಟನೆ ಇಲ್ಲಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಪ್ರಕಾಶ್ ಯಾನೆ ಚಿಕ್ಕವಲಂಗೊ (29) ಎಂದು ಗುರುತಿಸಲಾಗಿದೆ.
ಈತ ಇಲ್ಲಿನ ಕನಕನಗರ ನಿವಾಸಿ ಎಂದು ಹೇಳಲಾಗುತ್ತಿದ್ದು, ವಿಜಯನಗರ ಪೊಲೀಸ್ ಠಾಣೆಯ ರೌಡಿಶೀಟರ್ ಪಟ್ಟಿಯಲ್ಲಿ ಪ್ರಕಾಶ್ ಎಂಬ ಹೆಸರಿದೆ ಎಂದು ಪೊಲೀಸರು ಹೇಳಿದ್ದಾರೆ. ರೌಡಿಶೀಟರ್ ಪ್ರಕಾಶ್‌ನನ್ನು ನಿನ್ನೆ ರಾತ್ರಿ ದುಷ್ಕರ್ಮಿಗಳು ಕಾರಿನಲ್ಲಿ ಅಪಹರಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಬಳಿಕ ವಾಹನದಲ್ಲೇ ಶವ ತಂದು ಚಂದ್ರಾ ಲೇಔಟ್‌ನ ಸಿದ್ಧಗಂಗಾ ಶಾಲೆ ಬಳಿಯ ಈದ್ಗಾ ಮೈದಾನದಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಹಳೆ ದ್ವೇಷದಲ್ಲಿ ಕೊಲೆ ಮಾಡಿರಬೇಕೆಂದು ಪೊಲೀಸರು ಶಂಕಿಸಿದ್ದು, ಈ ಸಂಬಂಧ ಚಂದ್ರಾ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚುವರಿ ತನಿಖೆ ಕೈಗೊಂಡಿದ್ದಾರೆ.