ನ್ಯೂಝಿಲೆಂಡ್‌ನ ಬ್ಯಾಟಿಂಗ್ ದಂತಕತೆ, ಚುಟುಕು ಕ್ರಿಕೆಟ್ ಸ್ಥಾಪಕ ಮಾರ್ಟಿನ್ ಕ್ರೋವ್ ನಿಧನ

Update: 2016-03-03 18:21 GMT

ವೆಲ್ಲಿಂಗ್ಟನ್, ಮಾ.3: ನ್ಯೂಝಿಲೆಂಡ್‌ನ ಬ್ಯಾಟಿಂಗ್ ದಂತಕತೆ, ಟ್ವೆಂಟಿ-20 ಕ್ರಿಕೆಟ್ ಆರಂಭಕ್ಕೆ ನಾಂದಿ ಹಾಡಿದ್ದ ಮಾರ್ಟಿನ್ ಕ್ರೋವ್ (53 ವರ್ಷ) ದೀರ್ಘಕಾಲದಿಂದ ಬಾಧಿಸುತ್ತಿದ್ದ ಕ್ಯಾನ್ಸರ್‌ನಿಂದಾಗಿ ಗುರುವಾರ ನಿಧನರಾಗಿದ್ದಾರೆ.

ಕ್ರಿಕೆಟ್ ಹಿನ್ನೆಲೆಯಿರುವ ಕುಟುಂಬದಿಂದ ಬಂದಿರುವ ಕ್ರೋವ್‌ರ ತಂದೆ ಡೇವ್ ಕ್ರೌವ್ ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದರು. ಸಹೋದರ ಜೆಫ್ ಕ್ರೋವ್ ನ್ಯೂಝಿಲಂಡ್ ತಂಡದಲ್ಲಿ ನಾಯಕನಾಗಿದ್ದರು.

ಕ್ರೋವ್ 1982ರಲ್ಲಿ ತನ್ನ 19ನೆ ಹರೆಯದಲ್ಲಿ ಆಸ್ಟ್ರೇಲಿಯದ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದರು. 13 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಿದ್ದ ಕ್ರೋವ್ ನ್ಯೂಝಿಲೆಂಡ್ ಪರ ಹೊಸ ದಾಖಲೆಯನ್ನು ಬರೆದಿದ್ದರು. 1992ರ ವಿಶ್ವಕಪ್‌ನಲ್ಲಿ ಆಕ್ರಮಣಕಾರಿ ಶೈಲಿಯ ನಾಯಕತ್ವದಿಂದ ಎಲ್ಲರ ಗಮನ ಸೆಳೆದಿದ್ದರು. ವಿಶ್ವದ ಶ್ರೇಷ್ಠ ಯುವ ಬ್ಯಾಟ್ಸ್‌ಮನ್ ಆಗಿದ್ದ ಕ್ರೋವ್ 1985ರಲ್ಲಿ ‘ವಿಸ್ಡನ್ ವರ್ಷದ ಕ್ರಿಕೆಟಿಗ’ನಾಗಿ ಆಯ್ಕೆಯಾಗಿದ್ದರು.

ಕಿವೀಸ್‌ನ ಪರ ಗರಿಷ್ಠ ಟೆಸ್ಟ್ ರನ್(5,444), ಗರಿಷ್ಠ ವೈಯಕ್ತಿಕ ಸ್ಕೋರ್(299), ಗರಿಷ್ಠ ಅರ್ಧಶತಕ(35) ಹಾಗೂ ಗರಿಷ್ಠ ಶತಕ(17)ಗಳನ್ನು ಸಿಡಿಸುವ ಮೂಲಕ 1995ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದರು.

ದಾಂಡಿಗನಾಗಿ ಹಲವು ಸಾಧನೆಯಿಂದ ಗಮನ ಸೆಳೆದಿದ್ದ ಕ್ರೋವ್ ನಿವೃತ್ತಿಯ ನಂತರ ಕ್ರಿಕೆಟ್‌ನಲ್ಲಿ ಹೊಸ ಕ್ರಾಂತಿಗೆ ಕಾರಣರಾದರು. ಟ್ವೆಂಟಿ-20 ಕ್ರಿಕೆಟ್‌ಗೆ ಬುನಾದಿ ಹಾಕಿಕೊಟ್ಟಿದ್ದರು. ನ್ಯೂಝಿಲೆಂಡ್‌ನಲ್ಲಿ ಏಳು ವರ್ಷಗಳ ಕಾಲ ‘ಮ್ಯಾಕ್ಸ್ ಕ್ರಿಕೆಟ್’ಸಂಸ್ಥೆಯನ್ನು ಮುನ್ನಡೆಸಿದ್ದ ಕ್ರೋವ್ ಚುಟುಕು ಮಾದರಿಯ ಕ್ರಿಕೆಟ್‌ನ್ನು ಜಗತ್ತಿಗೆ ಪರಿಚಯಿಸಿದ್ದರು.

ಕ್ರೋವ್ 2 ಇನಿಂಗ್ಸ್‌ನಲ್ಲಿ ತಲಾ 10 ಓವರ್‌ಗಳ ಪಂದ್ಯವನ್ನು ಆರಂಭಿಸಿದ್ದರು. ಕ್ರೋವ್ ಆರಂಭಿಸಿದ್ದ 10 ಓವರ್‌ಗಳ ಪಂದ್ಯ 2003ರಲ್ಲಿ ಇಂಗ್ಲೆಂಡ್‌ನಲ್ಲಿ ಟ್ವೆಂಟಿ-20 ಕ್ರಿಕೆಟ್ ಆಗಿ ಮಾರ್ಪಡಾಯಿತು.

2015ರ ಮಾರ್ಚ್‌ನಲ್ಲಿ ನ್ಯೂಝಿಲೆಂಡ್-ಆಸ್ಟ್ರೇಲಿಯದ ಜಂಟಿ ಆತಿಥ್ಯದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಕ್ರೋವ್‌ಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ನೀಡಲಾಗಿತ್ತು. 2012ರಲ್ಲಿ ಕ್ಯಾನ್ಸರ್ ಪೀಡಿತರಾಗಿದ್ದ ಕ್ರೋವ್, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

ಮಾರ್ಟಿನ್ ಕ್ರೋವ್ ಫ್ಯಾಕ್ಟ್ ಫೈಲ್

*ಜನನ ಸೆ.22,1962, ಆಕ್ಲೆಂಡ್.

* ಜನವರಿ 1980ರಲ್ಲಿ ಆಕ್ಲೆಂಡ್ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ.

* ಫೆ.1982ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ.

*ಫೆ.1983ರಲ್ಲಿ ಆಸ್ಟ್ರೇಲಿಯ ವಿರುದ್ಧ ಎಸ್‌ಜಿಜಿ ಸ್ಟೇಡಿಯಂನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಕಿವೀಸ್ ತಂಡಕ್ಕೆ ವಾಪಸ್. ಆ ಪಂದ್ಯದಲ್ಲಿ 66 ರನ್ ಗಳಿಸಿದ್ದ ಕ್ರೋವ್ ಕಿವೀಸ್ 14 ರನ್‌ಗಳಿಂದ ಗೆಲ್ಲಲು ನೆರವಾಗಿದ್ದರು.

*1984ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ಇಂಗ್ಲೆಂಡ್‌ನ ವಿರುದ್ಧ ಚೊಚ್ಚಲ ಶತಕ(100) ಬಾರಿಸಿದ್ದರು. ಕೌಂಟಿ ಕ್ರಿಕೆಟ್‌ನಲ್ಲಿ 1,870 ರನ್ ಗಳಿಸುವ ಮೂಲಕ 1985ರಲ್ಲಿ ವಿಸ್ಡನ್ ವರ್ಷದ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದರು.

 * 1985ರ ನವೆಂಬರ್‌ನಲ್ಲಿ ಬ್ರಿಸ್ಬೇನ್‌ನ ಗಾಬಾ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯದ ವಿರುದ್ಧ 188 ರನ್ ಗಳಿಸಿದ್ದರು.

* 1990ರಲ್ಲಿ ಜಾನ್ ರೈಟ್‌ರಿಂದ ತೆರವಾದ ನ್ಯೂಝಿಲೆಂಡ್ ನಾಯಕತ್ವವನ್ನು ವಹಿಸಿಕೊಂಡಿದ್ದರು.

* 1991ರಲ್ಲಿ ಶ್ರೀಲಂಕಾದ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆ್ಯಂಡ್ರೂ ಜಾನ್ಸ್ ಅವರೊಂದಿಗೆ 467 ರನ್ ಜೊತೆಯಾಟ ನಡೆಸಿ ವಿಶ್ವ ದಾಖಲೆ ನಿರ್ಮಿಸಿದ್ದ ಕ್ರೋವ್ ಅದೇ ಪಂದ್ಯದಲ್ಲಿ ಜೀವನಶ್ರೇಷ್ಠ 299 ರನ್ ಗಳಿಸಿದ್ದರು. ಕೇವಲ ಒಂದು ರನ್‌ನಿಂದ ತ್ರಿಶತಕ ವಂಚಿತರಾಗಿದ್ದರು.

* ಮಂಡಿನೋವಿನಿಂದಾಗಿ 1995ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದರು. ಕ್ರೋವ್ 77 ಟೆಸ್ಟ್ ಪಂದ್ಯಗಳಲ್ಲಿ 5,444 ರನ್, 143 ಏಕದಿನಗಳಲ್ಲಿ 4,704 ರನ್ ಗಳಿಸಿದ್ದರು. ಕ್ರೋವ್ ಈಗಲೂ ಕಿವೀಸ್ ಪರ ಗರಿಷ್ಠ ಸ್ಕೋರ್ ದಾಖಲಿಸಿದ ದಾಖಲೆ ಉಳಿಸಿಕೊಂಡಿದ್ದಾರೆ.

*1990ರ ಅಂತ್ಯದಲ್ಲಿ ‘ಮ್ಯಾಕ್ಸ್ ಕ್ರಿಕೆಟ್’ ಸಂಸ್ಥೆ ಸ್ಥಾಪಿಸಿದ್ದ ಕ್ರೋವ್ ಮೊದಲ ಬಾರಿ ಕ್ರಿಕೆಟ್‌ನಲ್ಲಿ ಎರಡು ಇನಿಂಗ್ಸ್‌ನಲ್ಲಿ ತಲಾ 10 ಓವರ್ ಪಂದ್ಯವನ್ನು ಪರಿಚಯಿಸಿದ್ದರು. ಈ ಮೂಲಕ ಟ್ವೆಂಟಿ-20 ಕ್ರಿಕೆಟ್‌ಗೆ ನಾಂದಿ ಹಾಡಿದ್ದರು.

*ರಾಸ್ ಟೇಲರ್ ಹಾಗೂ ಮಾರ್ಟಿನ್ ಗಪ್ಟಿಲ್‌ಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.

* ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 20 ಸಾವಿರ ರನ್ ಪೂರೈಸುವ ಉದ್ದೇಶದಿಂದ 49ರ ಹರೆಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಾಪಸಾಗಲು ಯತ್ನಿಸಿದ್ದರು. ಆದರೆ, ಗಾಯದ ಸಮಸ್ಯೆಯಿಂದಾಗಿ ಕೇವಲ ಮೂರು ಎಸೆತಗಳನ್ನು ಎದುರಿಸಿದ್ದರು.

*2012ರ ಅಕ್ಟೋಬರ್‌ನಲ್ಲಿ ಕ್ಯಾನ್ಸರ್ ಕಾಯಿಲೆ ಪತ್ತೆಯಾಗಿತ್ತು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News