ಗೋಡ್ಸೆ ಬೆಂಬಲಿಗರನ್ನು ಶಿಕ್ಷಿಸಿ: ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್
ಹೊಸದಿಲ್ಲಿ, ಮಾ.4: ಗೋಡ್ಸೆ ಶ್ಲಾಘನೆ ಮಾಡುವವರಿಂದ ಅಂತರ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ಮಹಾತ್ಮಗಾಂಧಿ ಹತ್ಯೆಯಾದ ದಿನದಂದು ಸಂಭ್ರಮಾಚರಣೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಗೋಡ್ಸೆಯನ್ನು ಯಾರಾದರೂ ಹೇಗೆ ಪೂಜಿಸಲು ಸಾಧ್ಯ? ಎಂದು ಸಿಂಗ್ ಪ್ರಶ್ನಿಸಿದ್ದಾರೆ. ಗಾಂಧೀಜಿಯನ್ನು ಕೊಂದ ಉಗ್ರವಾದಿಯನ್ನು ವೈಭವೀಕರಿಸುವವರ ವಿರುದ್ಧ ಕ್ರಮ ಕೈಗೊಳ್ಳದಂತೆ ಕೇಂದ್ರ ಸರಕಾರ ಯಾವ ರಾಜ್ಯಗಳನ್ನೂ ತಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಹಿಂದೂ ಮಹಾಸಭಾ ಗೋಡ್ಸೆ ದೇವಾಲಯ ನಿರ್ಮಿಸಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಮೋದಿ ಸರಕಾರವನ್ನು ಗುರು ಮಾಡಿದ್ದವು. ಜತೆಗೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ಗೋಡ್ಸೆಯನ್ನು ರಾಷ್ಟ್ರೀಯವಾದಿ ಎಂದು ಕರೆದಿದ್ದಾರೆ ಎನ್ನಲಾದ ಹೇಳಿಕೆ ವಿರೋಧ ಪಕ್ಷದವರ ಆಕ್ರೋಶಕ್ಕೆ ಕಾರಣವಾಗಿತ್ತು.
ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಆರ್.ಎಸ್.ಕಠಾರಿಯಾ ಹಾಗೂ ಇತರ ಬಿಜೆಪಿ ಸಂಸದರು ಮಾಡಿದ ಪ್ರಚೋದನಕಾರಿ ಭಾಷಣ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ ಗಮನ ಸೆಳೆಯುವ ಸೂಚನೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ, ರಾಜನಾಥ್ ಸಿಂಗ್ ಮಾತನಾಡಿದರು. ಆದರೆ ಕಠಾರಿಯಾ ಅವರಿಗೆ ರಾಜ್‌ನಾಥ್ ಕ್ಲೀನ್ ಚಿಟ್ ನೀಡಿದರು.