ಜೆಟ್ ಏರ್‌ವೇಸ್ ವಿಮಾನದ ಟೈರ್ ಸ್ಫೋಟ: ರನ್‌ವೇ ಕಾರ್ಯಾಚರಣೆ ಅಸ್ತವ್ಯಸ್ತ
ಮುಂಬೈ, ಮಾ.4: ಗುರುವಾರ ಸಂಜೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಜೆಟ್ ಏರ್‌ವೇಸ್ ವಿಮಾನವೊಂದರ ಟೈರ್ ಸಿಡಿದಿದ್ದು, ಆತಂಕದ ವಾತಾವರಣ ನಿರ್ಮಾಣವಾಯಿತು.
ಈ ಘಟನೆಯಿಂದಾಗಿ ಮುಖ್ಯ ರನ್‌ವೇಯನ್ನು ಮುಚ್ಚಬೇಕಾಯಿತು. ಬಳಿಕ ವಿಮಾನ ಕಾರ್ಯಾಚರಣೆಯನ್ನು ಎರಡನೇ ರನ್‌ವೇಗೆ ಸ್ಥಳಾಂತರಿಸಿ ಇತರ ವಿಮಾನಗಳ ಹಾರಾಟಕ್ಕೆ ಅನುಕೂಲ ಮಾಡಿಕೊಡಲಾಯಿತು.
ಈ ಘಟನೆಯಿಂದಾಗಿ ಮುಂಬೈಗೆ ಆಗಮಿಸುವ ಹಲವು ವಿಮಾನಗಳನ್ನು ತಡೆ ಹಿಡಿಯಲಾಯಿತು. ರಾತ್ರಿ 9:50ರ ವೇಳೆಗೆ ಘಟನೆ ನಡೆಸಿದ್ದು, ದಿಲ್ಲಿಯಿಂದ 127 ಮಂದಿ ಪ್ರಯಾಣಿಕರನ್ನು ಹೊತ್ತು ಬರುತ್ತಿದ್ದ 9ಡಬ್ಲ್ಯು 354 ವಿಮಾನ ಮುಖ್ಯ ರನ್‌ವೇಯಲ್ಲಿ ಇಳಿಯುವಾಗ ಟೈರ್ ಸಿಡಿದಿದ್ದು, ಯಾವುದೇ ದುರಂತ ಸಂಭವಿಸಿಲ್ಲ.
ವೇಗವಾಗಿ ಬಂದ ವಿಮಾನ ದೊಡ್ಡ ಸದ್ದಿನೊಂದಿಗೆ ಲ್ಯಾಂಡ್ ಆಯಿತು. ಬೆಂಕಿಯ ಕಿಡಿ ಕಾಣಿಸಿಕೊಂಡಿತು" ಎಂದು ಪ್ರಯಾಣಿಕರೊಬ್ಬರು ಹೇಳಿದರು. ಸ್ವಲ್ಪ ಹೊತ್ತಿನಲ್ಲೇ ದೊಡ್ಡ ಸದ್ದು ಕೇಳಿಬಂತು.
ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ಬಲಕ್ಕೆ ಹೊರಳಿಸಲಾಯಿತು. ಬಲಭಾಗದ ಎಂಜಿನ್ ನೆಲಕ್ಕೆ ಸ್ಪರ್ಶಿಸಿದ್ದರಿಂದ ಕಿಡಿಗಳು ಕಾಣಿಸಿಕೊಂಡವು. ಎಲ್ಲರಿಗೂ ಭೀತಿ ಆವರಿಸಿತು. ವಿಮಾನ ನಿಲ್ಲುವವರೆಗೂ ಈ ಆತಂಕ ಎಲ್ಲರಲ್ಲಿತ್ತು ಎಂದು ವಿವರಿಸಿದರು.
ಲ್ಯಾಂಡಿಂಗ್ ಗೇರ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಸ್ವಲ್ಪ ಅನಾನುಕೂಲವಾಯಿತು ಎಂದು ಪೈಲಟ್ ಹೇಳಿದ್ದಾಗಿ ಜೆಟ್ ಏರ್‌ವೇಸ್ ಸಿಬ್ಬಂದಿ ಹೇಳಿದ್ದಾರೆ.