ಜೀವರಕ್ಷಿಸಿದ ವ್ಯಕ್ತಿಯ ಭೇಟಿಯಾಗಲು ಪ್ರತಿ ವರ್ಷ 5 ಸಾವಿರ ಮೈಲು ಈಜುವ ಪೆಂಗ್ವಿನ್!

Update: 2016-03-10 04:17 GMT

ಬ್ರೆಝಿಲಿಯಾ, ಮಾ.10: ಓದುಗರ ಮೈನವಿರೇಳಿಸುವ ನೈಜ ಕಥೆ ಇದು. ದಕ್ಷಿಣ ಅಮೆರಿಕದ ಮೆಗೆಲಿಕ್ ಪೆಂಗ್ವಿನ್ ಪ್ರತಿ ವರ್ಷವೂ ಐದು ಸಾವಿರ ಮೈಲು ಈಜಿಕೊಂಡು ಬಂದು ತನ್ನ ಜೀವ ರಕ್ಷಿಸಿದ ವ್ಯಕ್ತಿಯನ್ನು ಭೇಟಿ ಮಾಡುತ್ತದೆ. ಇದು ವಿಚಿತ್ರ ಆದರೂ ಸತ್ಯ!


ನಿವೃತ್ತ ಇಟ್ಟಿಗೆ ಕಾರ್ಮಿಕ ಹಾಗೂ ಅರೆ ಕಾಲಿಕ ಮೀನುಗಾರ ಜಾವೊ ಪೆರೇರಾ ಡಿಸೋಜಾ (71) ಬ್ರೆಜಿಲ್‌ನ ರಿಯೋ ಡೆ ಜನೈರೊ ಸಮೀಪದ ದ್ವೀಪ ಗ್ರಾಮದಲ್ಲಿ ವಾಸವಿದ್ದು, 2011ರಲ್ಲಿ ಪುಟ್ಟ ಪೆಂಗ್ವಿನ್ ತೈಲದಲ್ಲಿ ಮುಳುಗಿ ಇನ್ನೇನು ಸಾಯುವ ಸ್ಥಿತಿಯಲ್ಲಿದ್ದುದನ್ನು ನೋಡಿದರು.

ಸಮುದ್ರ ತೀರದ ಕಲ್ಲಿನ ಮೇಲೆ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿತ್ತು. ಜಾವೊ ಹಕ್ಕಿ ಬಳಿಗೆ ಬಂದು ಹಕ್ಕಿಯ ರೆಕ್ಕೆಯಲ್ಲಿದ್ದ ತೈಲವನ್ನು ಸ್ವಚ್ಛಗೊಳಿಸಿ, ಪ್ರತಿ ದಿನ ಮೀನಿನ ಆಹಾರ ನೀಡಿ, ಅದು ಚೇತರಿಸಿಕೊಳ್ಳುವವರೆಗೂ ಆರೈಕೆ ಮಾಡಿದರು. ಅದಕ್ಕೆ ಡಿನ್ ಡಿಮ್ ಎಂದು ಹೆಸರಿಟ್ಟರು.


ವಾರದ ಬಳಿಕ ಪೆಂಗ್ವಿನ್ ಹಕ್ಕಿಯನ್ನು ಸಮುದ್ರಕ್ಕೆ ಮರಳಿ ಬಿಡಲು ನಿರ್ಧರಿಸಿದರು. ಆದರೆ ಅದು ಅಲ್ಲಿಂದ ಕದಲಲು ನಿರಾಕರಿಸಿತು. "11 ತಿಂಗಳ ಕಾಲ ನನ್ನ ಜತೆಗೇ ಇದ್ದ ಹಕ್ಕಿ, ಹೊಸ ರೆಕ್ಕೆಪುಕ್ಕ ಬಲಿತ ಬಳಿಕ ಮಾಯವಾಯಿತು" ಎಂದು ಜಾವೊ ಸ್ಮರಿಸಿಕೊಳ್ಳುತ್ತಾರೆ.

ಕೆಲ ತಿಂಗಳ ಬಳಿಕ ಡಿನ್ ಡಿಮ್ ಮತ್ತೆ ಬಂತು. ದ್ವೀಪದಲ್ಲಿ ಆತನನ್ನು ಪತ್ತೆ ಮಾಡಿ ಮನೆಗೆ ಹಿಂಬಾಲಿಸಿತು. ಕಳೆದ ಐದು ವರ್ಷದಲ್ಲಿ ಪ್ರತಿ ವರ್ಷದ ಎಂಟು ತಿಂಗಳನ್ನು ಡಿನ್ ಡಿಮ್ ಜಾವೊ ಜತೆ ಕಳೆದಿದೆ. ಉಳಿದ ಅವಧಿಯಲ್ಲಿ ಅರ್ಜೆಂಟೀನಾ ಹಾಗೂ ಚಿಲಿಯಲ್ಲಿ ಸಂತಾನೋತ್ಪತ್ತಿಗೆ ತೆರಳುತ್ತದೆ ಎಂದು ಹೇಳಲಾಗಿದೆ. ಹೀಗೆ ಐದು ಸಾವಿರ ಮೈಲಿಗಳನ್ನು ಈಜಿಕೊಂಡು ತನ್ನ ಜೀವ ರಕ್ಷಿಸಿದ ವ್ಯಕ್ತಿಯನ್ನು ಮತ್ತೆ ಭೇಟಿ ಮಾಡಲು ಬರುತ್ತಿದೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News