ಪತ್ರಕರ್ತ
ಮೋದಿ ಹಂಗು
ಆರ್ಟ್ ಆಫ್ ಲಿವಿಂಗ್‌ನ ವಿಶ್ವ ಸಾಂಸ್ಕೃತಿಕ ಮೇಳಕ್ಕೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ವಿವಾದದ ಕಿಡಿಯ ನಡುವೆಯೇ ಚಾಲನೆ ನೀಡಿದರು. ಪರಿಸರ ಸಂಬಂಧಿ ವಿಷಯಗಳು ಹಾಗೂ ಈ ಮೂರು ದಿನಗಳ ಮೇಳ ಆಯೋಜಿಸಲು ಕೇಂದ್ರ ಪೋಷಕತ್ವ ನೀಡಿರುವುದು ವಿವಾದದ ಮೂಲ. ಮೋದಿಗೆ ಬಹುಶಃ ಇದು ಇಕ್ಕಟ್ಟಿನ ವಿಚಾರ. ಪ್ರಧಾನಿಯಾಗಬೇಕೆಂಬ ಆಸೆ ಕುಡಿಯೊಡೆಯುವ ಮುನ್ನವೇ ಆರಂಭವಾದ ಶ್ರೀ ರವಿಶಂಕರ ಗುರೂಜಿ ನಡುವಿನ ಬಾಂಧವ್ಯವನ್ನು ಗೌರವಿಸಲೇಬೇಕು. 2004ರಲ್ಲಿ ತಾನು ಗುಜರಾತ್ ಗಲಭೆಯ ಬಗ್ಗೆ ಮೋದಿಯವರನ್ನು ಕುರಿತು, ಈ ಗಲಭೆಯನ್ನು ತಡೆಯಲು ನಿಮ್ಮ ಸಾಮರ್ಥ್ಯಕ್ಕೆ ತಕ್ಕುದಾದ ಎಲ್ಲ ಪ್ರಯತ್ನಗಳನ್ನು ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾಗಿ 2014ರಲ್ಲಿ ರವಿಶಂಕರ ಗುರೂಜಿ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಮೋದಿ ತೇವಭರಿತ ಕಣ್ಣುಗಳಿಂದ ಗುರೂಜಿ ನೀವು ಕೂಡಾ ಈ ಅಪಪ್ರಚಾರವನ್ನು ನಂಬುತ್ತೀರಾ? ಎಂದು ಪ್ರತಿಕ್ರಿಯಿಸಿದ್ದರು ಎನ್ನಲಾಗಿದೆ. ಆ ಭೇಟಿ ಬಳಿಕ ರವಿಶಂಕರ ಗುರೂಜಿ ಮೋದಿ ಪರವಾಗಿ ಪ್ರಚಾರ ಕೈಗೊಂಡರು. ಈ ಹಿನ್ನೆಲೆಯಲ್ಲಿ ಮೋದಿ, ಬಾಂಧವ್ಯದ ಹಂಗಿಗಾದರೂ ಗೌರವ ನೀಡಲೇಬೇಕು. ಯಾವ ವಿವಾದ ಇದ್ದರೂ ಅದು ಪ್ರಮುಖವಲ್ಲ.
ನಜ್ಮಾ ಲಾಜಿಕ್
ದ್ವೇ ಷ ಭಾಷಣ ಹಾಗೂ ಅಭಿವೃದ್ಧಿ ಘೋಷಣೆಗಳು ಜತೆ ಜತೆಗೆ ಸಾಗಬಹುದು ಎಂಬ ಹೇಳಿಕೆ ನೀಡುವ ಮೂಲಕ ಕೇಂದ್ರ ಸಚಿವೆ ನಜ್ಮಾ ಹೆಪ್ತುಲ್ಲಾ ಪತ್ರಕರ್ತರನ್ನು ದಂಗುಬಡಿಸಿದ್ದರು. ಕೇಂದ್ರ ಸಚಿವ ರಾಮ್ ಶಂಕರ್ ಕಠಾರಿಯಾ ಆಗ್ರಾದಲ್ಲಿ ಮಾಡಿದ್ದರೆನ್ನಲಾದ ದ್ವೇಷಭಾವನೆ ಹರಡುವ ಭಾಷಣದ ಬಗ್ಗೆ ಪತ್ರಕರ್ತರು ಪತ್ರಿಕಾಗೋಷ್ಠಿಯಲ್ಲಿ ಹೆಪ್ತುಲ್ಲಾ ಅವರನ್ನು ಪ್ರಶ್ನಿಸಿದಾಗ ಈ ಹೇಳಿಕೆ ಬಂದಿತ್ತು. ಸರಕಾರದ ಅಭಿವೃದ್ಧಿ ಘೋಷಣೆಗಳ ಬಗ್ಗೆ ವಿವರಿಸಲು ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವೆ ನಜ್ಮಾ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಇಲ್ಲಿ ಈ ದ್ವೇಷಹೇಳಿಕೆಯನ್ನು ಅಭಿವೃದ್ಧಿ ಘೋಷಣೆಯಲ್ಲಿ ಸಮನ್ವಯಗೊಳಿಸಲು ಸಚಿವೆ ಮುಂದಾದರು. ದ್ವೇಷ ಭಾಷಣ ಹಾಗೂ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಜತೆಜತೆಗೆ ನಡೆಯುತ್ತಿದೆ ಎಂದು ನಿರ್ಭೀತಿಯಿಂದ ಹೇಳಿದರು. ಬಳಿಕ ತಪ್ಪಿನ ಅರಿವಾಗಿ ದ್ವೇಷಹೇಳಿಕೆಗಳ ಬಗ್ಗೆ ಕ್ರಮ ಕೈಗೊಳ್ಳುವುದು ನಮ್ಮ ಖಾತೆಯ ವ್ಯಾಪ್ತಿಯಲ್ಲಿಲ್ಲ ಎಂದು ಸಬೂಬು ಹೇಳಿದರು. ಅಲ್ಪಸಂಖ್ಯಾತ ವಿರೋಧಿ ಭಾಷಣವನ್ನು ಬಹಿರಂಗವಾಗಿ ಟೀಕಿಸಲಾಗದ ಸಚಿವೆಯ ಅಸಹಾಯಕತೆ ಎಂದು ಕೆಲ ಪತ್ರಕರ್ತರು ಅದನ್ನು ವಿಶ್ಲೇಷಿಸಿದರು. ಇದು ಕಾಲದ ಸಂಕೇತ ಎಂದು ಅನುಭವಿ ಪತ್ರಕರ್ತರೊಬ್ಬರು ಕುಹಕವಾಡಿದರು.
ಉದಯ ತಾರೆ
ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್ ದೇಶದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ ಎಂದು ಅವರ ಬೆಂಬಲಿಗರು ಬೀಗುತ್ತಿದ್ದಾರೆ. ಕೆಲ ಕಾಮ್ರೇಡ್ ಮುಖಂಡರು ಕೂಡಾ ಈ ವಿದ್ಯಾರ್ಥಿ ನಾಯಕ ಹಾಗೂ ಆತನ ಭಾಷಣದ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕನ್ಹಯ್ಯಾ ಕುಮಾರ್, ಮುಂದಿನ ಚುನಾವಣೆಯಲ್ಲಿ ಎಡಪಕ್ಷಗಳ ಪರ ಪ್ರಚಾರ ಕೈಗೊಳ್ಳುತ್ತಾರೆ ಎಂದು ಸಿಪಿಎಂ ಮುಖಂಡ ಸೀತಾರಾಂ ಯಚೂರಿ ಪದೇ ಪದೇ ಹೇಳುತ್ತಿದ್ದಾರೆ. ಆದರೆ ಈ ಪ್ರತಿಭಾವಂತ ಮುಖಂಡ ಮಾತ್ರ ರಕ್ಷಣಾತ್ಮಕ ಆಟಕ್ಕೇ ಒತ್ತು ನೀಡಿದ್ದಾರೆ. ರಾಜಕೀಯ ರಂಗಪ್ರವೇಶ ಅಥವಾ ಪ್ರಚಾರಕಾರ್ಯಕ್ಕೆ ಧುಮುಕುವ ವಿಚಾರದಲ್ಲಿ ಅವರು ಎಚ್ಚರಿಕೆಯ ನಡೆ ಇಡುವ ಸೂಚನೆ ಇದೆ. ಕನ್ಹಯ್ಯೆ ಅವರಿಗೆ ಜಾಮೀನು ದೊರಕಿಸಿಕೊಟ್ಟ ಹೆಗ್ಗಳಿಕೆ ತನ್ನದು ಎಂದು ಎಡಪಕ್ಷಗಳು ಒಂದೆಡೆ ಹೇಳಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಕನ್ಹಯ್ಯೊ ಕುಮಾರ್ ಪರವಾಗಿ ವಾದ ಮಂಡಿಸಲು ಕಾನೂನು ತಜ್ಞರನ್ನು ಮನವೊಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಿ ನಿತೀಶ್ ಕುಮಾರ್ ಹಾಗೂ ಅರವಿಂದ ಕೇಜ್ರಿವಾಲ್ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಆದರೆ ಸ್ವತಃ ಕನ್ಹಯ್ಯಾ ಯಾರಿಗೆ ಋಣಿಯಾಗಿರುತ್ತಾರೆ ಎನ್ನುವುದು ಈ ರಾಜಕೀಯ ಪಕ್ಷಗಳನ್ನು ಕಾಡುತ್ತಿರುವ ಪ್ರಶ್ನೆ.
ಸ್ಮತಿ ಏಳಿಗೆ ಮತ್ತು ಹೊಟ್ಟೆ ಕಿಚ್ಚು
ಜೆಎನ್‌ಯು ವಿವಾದ ಹಾಗೂ ರೋಹಿತ್ ವೇಮುಲಾ ಪ್ರಕರಣದಲ್ಲಿ ತಪ್ಪು ಮಾಡಿದ ಆರೋಪ ಎದುರಿಸುತ್ತಿದ್ದ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮತಿ ಇರಾನಿ ತಮ್ಮನ್ನು ಸಮರ್ಥಿಸಿಕೊಂಡ ಅದ್ಭುತ ರೀತಿಗೆ ಸ್ವತಃ ಮೋದಿ ಶಹಬ್ಬಾಸ್‌ಗಿರಿ ನೀಡಿದ್ದಾರೆ. ಆದರೆ ಬಿಜೆಪಿಯ ಒಂದು ಗುಂಪು ಮಾತ್ರ ಇರಾನಿಯತ್ತ ಕಣ್ಣಿಟ್ಟಿದೆ. ಉತ್ತರ ಪ್ರದೇಶದಲ್ಲಿ ನಡೆಯುವ ಮಹತ್ವದ ಚುನಾವಣೆಗೆ ಮುನ್ನ ಮಾಯಾವತಿ ಹೆಸರನ್ನು ಉಲ್ಲೇಖಿಸಿದ್ದು, ಇದಕ್ಕೆ ಕಾರಣ. ರಾಜ್ಯಸಭೆಯಲ್ಲಿ ಚರ್ಚೆ ವೇಳೆ ಇರಾನಿ, ತನ್ನ ಪ್ರತಿಕ್ರಿಯೆ ಬಗ್ಗೆ ಬಿಎಸ್ಪಿ ನಾಯಕಿ ಮಾಯಾವತಿಯವರಿಗೆ ಇನ್ನೂ ಅಸಮಾಧಾನ ಉಳಿದುಕೊಂಡರೆ, ಮಾಯಾವತಿಗೆ ತಲೆ ಒಪ್ಪಿಸಲೂ ಸಿದ್ಧ ಎಂದು ಹೇಳಿದ್ದರು. ಚರ್ಚೆಯ ಕೊನೆಯಲ್ಲಿ ಇರಾನಿ ಸಮರ್ಥನೆಯಿಂದ ತಾವು ಸಂತುಷ್ಟರಾಗಿಲ್ಲ ಎಂದು ಮಾಯಾವತಿ ಹೇಳಿದರು. ಇರಾನಿ ಮುಂದೆ ಏನು ಮಾಡುತ್ತಾರೆ ಎನ್ನುವುದನ್ನು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಉತ್ತರ ಪ್ರದೇಶದ ಕಳಪೆ ಪ್ರದರ್ಶನಕ್ಕಾಗಿ ತಲೆದಂಡ ನೀಡಿದ ಆಕೆಯ ಹಲವು ಮಂದಿ ಸಹೋದ್ಯೋಗಿಗಳು ಮಾತ್ರ, ಇರಾನಿ ಬೂಟಾಟಿಕೆಯಿಂದ ತಲೆ ಮೇಲೆ ಕೈ ಇಟ್ಟುಕೊಳ್ಳಬೇಕಾಗಿದೆ ಎಂದು ಗೊಣಗುತ್ತಿದ್ದಾರೆ.
ಈಗ ರಾಜ್ಯಸಭೆಗೆ
ನಾಮಕರಣ ಸಮಯ
ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಸದಸ್ಯರ ಪಟ್ಟಿಯನ್ನು ಸರಕಾರ ಸಿದ್ಧಪಡಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಸಂಪುಟದ ಹಿರಿಯ ಸಚಿವರಿಗೆ ನೇಮಕಾತಿ ಮನವಿಗಳ ಮಹಾಪೂರವೇ ಹರಿದಿದೆ. ಹಲವು ಮಂದಿ ಸಚಿವರ ಕೃಪೆಗಾಗಿ ದುಂಬಾಲು ಬಿದ್ದಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲ್ಲಿಯವರನ್ನು ಇತ್ತೀಚೆಗೆ ಭೇಟಿ ಮಾಡಿದವರಲ್ಲಿ ನಟ ಧರ್ಮೇಂದ್ರ ಕೂಡಾ ಒಬ್ಬರು. ಅವರೂ ಈ ಸ್ಥಾನಕ್ಕೆ ಆಕಾಂಕ್ಷಿ ಎಂಬ ಪುಕಾರು ಹುಟ್ಟಿಕೊಂಡಿದೆ. ಧರ್ಮೇಂದ್ರ ಹಾಗೂ ಪುತ್ರ-ನಟ ಬಾಬ್ಬಿ ಡಿಯೋಲ್ ಕಳೆದ ವಾರ ಜೇಟ್ಲಿಯನ್ನು ಭೇಟಿ ಮಾಡಿದ್ದರು. ಮಣಿ ಶಂಕರ್ ಅಯ್ಯರ್, ಜಾವೇದ್ ಅಖ್ತರ್ ಹಾಗೂ ಇತರ ಹಲವು ಮಂದಿ ಸದಸ್ಯರು ರಾಜ್ಯಸಭೆಯಿಂದ ನಿವೃತ್ತರಾಗುತ್ತಿದ್ದಾರೆ. ಒಂದು ವೇಳೆ ಧರ್ಮೇಂದ್ರ ರಾಜ್ಯಸಭೆಗೆ ನಾಮಕರಣಗೊಂಡರೆ ಲೋಕಸಭೆ ಹಾಗೂ ರಾಜ್ಯಸಭೆೆ ಸದಸ್ಯರಾದ ಗೌರವಕ್ಕೆ ಅವರು ಪಾತ್ರರಾಗಲಿದ್ದಾರೆ. ಈ ಹಿಂದೆ ಎರಡು ಬಾರಿ ಧರ್ಮೇಂದ್ರ ಬಿಜೆಪಿ ಟಿಕೆಟ್‌ನಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು.