×
Ad

ಕೇರಳ ಕಮ್ಯುನಿಸ್ಟರ ಸೋಲಿಗೆ ಭಾರತ ಬೆಲೆ ತೆರಬೇಕಾದೀತು..!

Update: 2025-12-20 10:42 IST

‘‘ಭಾರತದ ಇತರ ಯಾವುದೇ ಕಡೆ ಕೇರಳದಂತೆ ಕಮ್ಯುನಿಸ್ಟ್ ಸರಕಾರಗಳು ತಲೆ ಎತ್ತದಂತೆ ತಡೆಯಬೇಕು’’ ಎಂದು ಕೇರಳದ ಮೊದಲ ಕಮ್ಯುನಿಸ್ಟ್ ಸರಕಾರದ ಸಮಯದಲ್ಲಿದ ಭಾರತದ ಅಂದಿನ ಅಮೆರಿಕದ ರಾಯಭಾರಿ ಡೇನಿಯಲ್ ಪ್ಯಾಟ್ರಿಕ್ ಮೊಯ್ನಿಹಾನ್ ತಮ್ಮ ಆತ್ಮಕತೆಯಲ್ಲಿ ಬರೆದ ಮಾತಿದು..!. ಜನತಾಂತ್ರಿಕ ಚುನಾವಣಾ ಪ್ರಜಾಪ್ರಭುತ್ವದ ಮೂಲಕ ಆರಿಸಿ ಬಂದ ಜಗತ್ತಿನ ಹಾಗೂ ಭಾರತದ ಮೊದಲ ಕಮ್ಯುನಿಸ್ಟ್ ಸರಕಾರ ಕೇರಳ ರಾಜ್ಯದ್ದು. ಪುಟ್ಟ ರಾಜ್ಯ ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರವನ್ನು ಬುಡಸಮೇತ ಕಿತ್ತು ಹಾಕಲು ಜಗತ್ತಿನ ದೊಡ್ಡಣ್ಣನ ದುಸ್ಸಾಹಸಗಳನ್ನು ಇತಿಹಾಸದ ಪುಟಗಳೇ ಹೇಳುವಾಗ, ಯಕಶ್ಚಿತ್ ಸ್ಥಳೀಯ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷಗಳ ಸಣ್ಣ ಮಟ್ಟದ ಹಿನ್ನಡೆಯನ್ನು ಆಳುವ ಕೇಂದ್ರದ ಪ್ರಭುತ್ವ ಹಾಗೂ ಮಾಧ್ಯಮಗಳು ಸೇರಿದಂತೆ ಇಡೀ ವ್ಯವಸ್ಥೆ ಕೇಕೆ ಹಾಕುತ್ತಿರುವುದು ಕಂಡು ಆಶ್ಚರ್ಯವಾಗಬೇಕಿಲ್ಲ.

ವಿಧಾನಸಭಾ ಚುನಾವಣೆಯ ಒಂದು ವರ್ಷದ ಹೊಸ್ತಿಲಲ್ಲಿ ನಡೆಯುವ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ರಾಜ್ಯದ ವಿಧಾನಸಭೆಯ ಮೇಲೂ ಪರಿಣಾಮ ಬೀರುವುದು ವಾಡಿಕೆ. ಆಳುವ ಪಕ್ಷದ ಮುಂದಿನ ಭವಿಷ್ಯವನ್ನು ಸ್ಥಳೀಯ ಸಂಸ್ಥೆಯ ಚುನಾವಣಾ ಫಲಿತಾಂಶವೇ ಕನ್ನಡಿ ಹಿಡಿದು ತೋರಿಸಿ ಬಿಡುತ್ತದೆ. ಆದ್ದರಿಂದಲೇ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದ್ದ ಬಿಜೆಪಿ ಕೇವಲ ಒಂದೇ ಮಹಾನಗರ ಪಾಲಿಕೆಯನ್ನು ಬಾಚಿಕೊಂಡು, ಕೆಲವು ಗ್ರಾಮೀಣ ಮಟ್ಟದಲ್ಲಿ ನಿರೀಕ್ಷೆ ಮೀರಿ ಬಂದಿರುವ ಫಲಿತಾಂಶದಿಂದ ಶಾಸನಸಭೆಯಲ್ಲಿ ಸಂಖ್ಯೆಯ ಬಲಾಬಲ ತೋರಿಸಿಕೊಳ್ಳುವ ಭ್ರಮಾಲೋಕದಲ್ಲಿ ತೇಲುತ್ತಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಾಲಿಗೆ ಬಂದಿರುವ ಸಕಾರಾತ್ಮಕ ಫಲಿತಾಂಶದಿಂದ ರಾಜ್ಯದ ಗದ್ದುಗೆ ಏರುವ ಕನಸು ಕಾಣುತ್ತಿದೆ. ಮೇಲಿನ ಇವೆರಡೂ ರಾಜಕೀಯ ಬೆಳವಣಿಗೆಗಳು ಮುಂದಿನ ಒಂದೇ ವರ್ಷದಲ್ಲಿ ಕೇರಳದಲ್ಲಿ ನಡೆಯಲು ಸಂಭವವೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲದಂತೆ ಸ್ಥಳೀಯ ಚುನಾವಣೆಯ ಫಲಿತಾಂಶ ಕಟ್ಟಿಹಾಕುತ್ತಿದೆ.

ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಒಳನೋಟಗಳನ್ನು ಸರಕಾರದ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ ಕೈಗಂಟಿಸಿಕೊಂಡಿರುವ ಮಂತ್ರಿಗಳು, ಶಬರಿಮಲೆ ವಿವಾದ, ಹೀಗೆ ಸಿದ್ಧಮಾದರಿಯ ಅಂಶಗಳನ್ನು ಮಾತ್ರ ಅವಲೋಕಿಸಿದರೆ ಪೇಲವವಾದೀತು. ಕೇರಳ ಇಂದು ಸ್ವಾಮಿ ವಿವೇಕಾನಂದರ ‘ಹುಚ್ಚರ ಸಂತೆ’ಯಿಂದ ಬಿಡುಗಡೆಗೊಂಡು, ಸುಶಿಕ್ಷಿತರ ನಾಡಾಗಿ ಹೊರಳುವ ಮಹತ್ತರ ಕಾಲದಲ್ಲಿಯೇ ಮೂಲಭೂತವಾದಿಗಳ ಕೈಗೆ ಹೋಗುತ್ತಿರುವ ಭಾರೀ ಅಪಾಯವನ್ನು ಒಳಗಣ್ಣಿನಿಂದಲೇ ನೋಡಬೇಕಿದೆ.

ಕೇರಳ ಕಳೆದ ದಶಕಗಳಿಂದ ಅತ್ಯಂತ ವ್ಯವಸ್ಥಿತವಾಗಿ ಮೂಲಭೂತವಾದಿಗಳ ಕ್ರಿಯಾಶೀಲ ಚಟುವಟಿಕೆಗಳಿಗೆ ಸಾಕ್ಷಿಯಾಗುತ್ತಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ. 26.56 ಮುಸ್ಲಿಮರನ್ನು, ಶೇ. 18.4 ಕ್ರಿಶ್ಚಿಯನ್ನರನ್ನೂ ಹೊಂದಿರುವ ಕೇರಳದಲ್ಲಿ ಸಂಘಪರಿವಾರಕ್ಕೆ ಸೈದ್ಧಾಂತಿಕ ಎದುರಾಳಿ ಕಮ್ಯುನಿಸ್ಟರೇ ಹೊರತು ಕಾಂಗ್ರೆಸ್ ಪಕ್ಷ ಅಲ್ಲವೇ ಅಲ್ಲ.

ಅಲ್ಪಸಂಖ್ಯಾತ ಹಾಗೂ ಬಹುಸಂಖ್ಯಾತ ಮೂಲಭೂತವಾದಿಗಳಿಗೆ ಸೈದ್ಧಾಂತಿಕವಾಗಿ ಕಮ್ಯುನಿಸ್ಟರು ಶತ್ರುಗಳಾಗಿರುವಾಗ, ಕಮ್ಯುನಿಸ್ಟರು ಇವೆರಡೂ ವಿಚ್ಛಿದ್ರಕಾರಿ ಶಕ್ತಿಗಳನ್ನು ಎದುರಿಸಬೇಕಾಗಿದೆ. ಯುಡಿಎಫ್ ನೇತೃತ್ವದ ಕಾಂಗ್ರೆಸ್ ಪಕ್ಷವೂ ಸೈದ್ಧಾಂತಿಕ ರಾಜಕೀಯದ ಒಳಸುಳಿಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳದೆ ಅಪವಿತ್ರ ಮೈತ್ರಿಗಳಿಗೆ ಸಾಕ್ಷಿಯಾಗುತ್ತಿರುವುದು ಸ್ವತಃ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗುತ್ತಿದೆ. ಅದಕ್ಕೆ ತಿರುವಂತನಪುರ ಮಹಾನಗರಪಾಲಿಕೆ ಚುನಾವಣಾ ಫಲಿತಾಂಶವೇ ಸಾಕ್ಷಿ.!

1956-57ರಿಂದ 2021ರ ಕೇರಳ ವಿಧಾನಸಭೆ ಚುನಾವಣೆವರೆಗೂ ಐದು ಬಾರಿ ರಾಷ್ಟ್ರಪತಿ ಆಡಳಿತ ನೋಡಿರುವ ಕೇರಳ ರಾಜ್ಯ, ಐದು ವರ್ಷಗಳ ಆಡಳಿತ ನಡೆಸಿದ ಪಕ್ಷವನ್ನು ಮತ್ತೆ ಆಡಳಿತದಲ್ಲಿ ಮುಂದುವರಿಸಿರುವ ಇತಿಹಾಸ ಇಲ್ಲ. ಆದರೆ ಅಂತಹ ಇತಿಹಾಸವನ್ನೇ ಬದಲಾಯಿಸಿದ್ದು ಪಿಣರಾಯಿ ವಿಜಯನ್ ನೇತೃತ್ವದ ಸಿಪಿಎಂ ಪಕ್ಷ. ಸತತವಾಗಿ ಎರಡು ಬಾರಿ ಅಧಿಕಾರಕ್ಕೆ ತಂದ ಪಿಣರಾಯಿ ನೇತೃತ್ವದ ಸಿಪಿಎಂನ ಪಡೆ ಇಂದು ಸ್ಥಳೀಯ ಚುನಾವಣೆಯಲ್ಲಿ ಮುಗ್ಗರಿಸಿರುವುದು ಸ್ವತಃ ಸಿಪಿಎಂನ ಜಂಘಾಬಲವೇ ಕುಸಿಯುವಂತೆ ಮಾಡಿದೆ. ಲೋಕ ಸಭಾ ಚುನಾವಣೆಯ ಭಾರೀ ಸೋಲಿನಿಂದ ಪಕ್ಷ ಪಾಠ ಕಲಿತಿಲ್ಲ ಎಂಬುದನ್ನು ಸ್ಥಳೀಯ ಚುನಾವಣೆ ಫಲಿತಾಂಶ ಎತ್ತಿ ತೋರಿಸುತ್ತಿದೆ. ದೇಶದಲ್ಲಿ ಆಡಳಿತದಲ್ಲಿರುವ ಹಾಗೂ ಆಡಳಿತವನ್ನು ಉಳಿಸಿಕೊಳ್ಳಲೇಬೇಕಾದ ಕಮ್ಯುನಿಸ್ಟ್ ರಾಜ್ಯ ಕೇರಳ ಮಾತ್ರ. ಒಂದು ವೇಳೆ 2026ರಲ್ಲಿ ನಡೆಯಲಿರುವ ಕೇರಳ ವಿಧಾನಸಭೆಯಲ್ಲಿ ಸಿಪಿಎಂ ಸೋತಿದ್ದೇ ಆದರೆ ಸ್ವತಂತ್ರ ಭಾರತದ ಚುನಾವಣಾ ಇತಿಹಾಸದಲ್ಲಿ 1960ರ ನಂತರ ಯಾವ ರಾಜ್ಯದಲ್ಲೂ ಕಮ್ಯುನಿಸ್ಟ್ ಆಡಳಿತವೇ ಇಲ್ಲದ ಭಾರತವನ್ನು ಎದುರು ನೋಡಬೇಕಾಗುತ್ತದೆ.!

ಬಂಗಾಳದಲ್ಲಿ ಏಳು ಬಾರಿ, ತ್ರಿಪುರಾದಲ್ಲಿ 25 ವರ್ಷಗಳ ಕಾಲ ಆಡಳಿತ ನಡೆಸಿದ್ದ ಸಿಪಿಎಂ, ಈ ಉಭಯ ರಾಜ್ಯಗಳಲ್ಲಿ ಕೇವಲ ಹತ್ತೇ ವರ್ಷಗಳಲ್ಲಿ ತನ್ನ ಅಸ್ತಿತ್ವದ ಉಳಿವಿನ ಹುಡುಕಾಟ ನಡೆಸುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲೂ ಅಧಿಕಾರ ಹಿಡಿಯುವ ಸಣ್ಣ ಸೂಚನೆಯೂ ಕಾಣುತ್ತಿಲ್ಲ. ಬಲಪಂಥೀಯ ರಾಜಕೀಯಕ್ಕೆ ಎಡಪಂಥವೇ ಸೈದ್ಧಾಂತಿಕ ಹೋರಾಟದ ಪರ್ಯಾಯ ಎಂದು ವ್ಯಾಖ್ಯಾನಿಸುವವರಿಗೆ ಬಿಜೆಪಿ ವಿರುದ್ಧ ಸಿಪಿಎಂ ಅನ್ನು ಎದುರಾಳಿಯಾಗಿ ನೋಡಲು ಈ ಎರಡೂ ರಾಜ್ಯಗಳ ರಾಜಕೀಯ ಬೆಳವಣಿಗೆ ಸಹಕರಿಸಲು ಸಾಧ್ಯವಾಗುವುದಿಲ್ಲ. ಕಳೆದ ಎರಡು ದಶಕಗಳಿಂದ ಸಿಪಿಎಂ ಹಾಗೂ ಎಡಪಕ್ಷಗಳು ಚುನಾವಣಾ ರಾಜಕೀಯದಲ್ಲಿ ಭಾರೀ ಹಿನ್ನಡೆ ಅನುಭವಿಸಿರುವುದು ಮಾತ್ರವಲ್ಲ, ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿದೆ.

ಕೊನೆಯ ಮಾತು.

ದೇಶದಲ್ಲಿ ಕಮ್ಯುನಿಸ್ಟ್ ಪಕ್ಷಗಳ ಚುನಾವಣಾ ಸೋಲು ದಮನಿತ, ಅಲ್ಪಸಂಖ್ಯಾತ, ಧ್ವನಿ ಇಲ್ಲದ ಶೋಷಿತ ವರ್ಗದ ಸೋಲೆಂದೇ ಅರ್ಥ. ಸಂಸತ್, ವಿಧಾನಸಭೆಗಳಲ್ಲಿ ಕಮ್ಯುನಿಸ್ಟರ ಸಂಖ್ಯೆಯ ಕ್ಷೀಣಿಸುವಿಕೆಯಿಂದ ದುಡಿಯುವ ವರ್ಗದ ಕತೆ ಏನಾಗಿದೆ? ಎಂಬುದನ್ನು ವರ್ತಮಾನ ಸಾಕ್ಷೀಕರಿಸಿದೆ. ಕಮ್ಯುನಿಸ್ಟರ ಸೋಲಿನ ಸಂಭ್ರಮ ಭವಿಷ್ಯತ್ತಿನ ಭಾರತದ ಕರಾಳತೆಯ ಆಹ್ವಾನವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸತೀಶ್ ನಾಯಕ್

contributor

Similar News