ಜನವರಿಯಿಂದ ಔಷಧಿ ರಂಗದಲ್ಲೂ ಒಂದು ‘ಇಂಡಿಗೊ ಸಂಕಟಕ್ಕೆ’ ದೇಶ ಸನ್ನದ್ಧ
ಗೊತ್ತಿದ್ದೂ ಗೊತ್ತಿದ್ದೂ ಇಂತಹದೊಂದು ಸಂಕಟದ ಸ್ಥಿತಿಯತ್ತ ಔಷಧಿ ಉದ್ಯಮ ಏಕೆ ಸಾಗುತ್ತಿದೆ ಎಂದು ಆಳವಾಗಿ ನೋಡಿದರೆ, ಇದರಲ್ಲಿ ಒಂದೆಡೆ ಸಣ್ಣ ಉದ್ದಿಮೆಗಳ ನಿರುತ್ಸಾಹ, ಪ್ಲ್ಯಾನಿಂಗ್‌ನಲ್ಲಿ ಕೊರತೆ ಹಾಗೂ ಬೆಂಕಿ ಬಿದ್ದ ಬಳಿಕವಷ್ಟೇ ಅದನ್ನು ಆರಿಸಬೇಕೆಂದು ಎಚ್ಚರಗೊಳ್ಳುವ ಸರಕಾರಿ ಬುದ್ಧಿವಂತಿಕೆಗಳು ಎದ್ದು ಕಾಣಿಸುತ್ತಿವೆ. ಇಂಡಿಗೊ ಪ್ರಕರಣದಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಹೇಗೆ ಮುಂಗಾಣ್ಕೆ ಇಲ್ಲದೆ ವರ್ತಿಸಿತೋ, ಅದೇ ಹಾದಿಯಲ್ಲಿ ಈಗ ಔಷಧಿ ರಂಗದ ನಿಯಂತ್ರಣ ಹೊಂದಿರುವ ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಕೂಡ ವರ್ತಿಸುತ್ತಿದೆ ಎಂಬುದು ಮೇಲುನೋಟಕ್ಕೇ ಗೋಚರ.
ದೇಶದಲ್ಲಿರುವ ಸುಮಾರು 12,000 ಔಷಧಿ ಉತ್ಪಾದಕ ಸಂಸ್ಥೆಗಳಲ್ಲಿ, ಅಂದಾಜು 8,500ಕ್ಕೂ ಮಿಕ್ಕಿ ಸಂಸ್ಥೆಗಳು ಮಧ್ಯಮ, ಸಣ್ಣ ಮತ್ತು ಅತಿಸಣ್ಣ ಉದ್ಯಮಗಳ (MSME) ವ್ಯಾಪ್ತಿಯಲ್ಲಿ ಬರುತ್ತವೆ. ಸರಕಾರ ತನ್ನ ನಿಯಮಗಳನ್ನು ಇಂಡಿಗೊ ಪ್ರಕರಣದಲ್ಲಿ ಮಾಡಿದ ರೀತಿಯಲ್ಲೇ ಖಡಕ್ಕಾಗಿ ಪಾಲಿಸಿದರೆ, 8,500ರಲ್ಲಿ ಬಹುತೇಕ ಅರ್ಧಕ್ಕೂ ಮಿಕ್ಕಿ (ಶೇ. 60 ಎಂದು ಅಂದಾಜು) ಔಷಧಿ ಕಂಪೆನಿಗಳು ಜನವರಿ ಒಂದರಿಂದ ಅಂಗಡಿ ಮುಚ್ಚುವುದು ಅನಿವಾರ್ಯ ಆಗಲಿದೆ. ಹಾಗೇನಾದರೂ ಆದರೆ, ಇಂಡಿಗೊ ಸಂಕಟದ ಸಮಯದಲ್ಲಿ ಆದಂತಹದೇ ಸನ್ನಿವೇಶ ಎದುರಾಗಬಹುದು. ಸಾಮಾನ್ಯವಾಗಿ ಬಳಕೆಯಲ್ಲಿರುವ ಹಲವು ಔಷಧಿಗಳ ಉತ್ಪಾದನೆ ಏಕಾಏಕಿ ಸ್ಥಗಿತಗೊಳ್ಳಲಿದೆ, ಭಾರತದಲ್ಲಿ ಮಾತ್ರವಲ್ಲದೆ ಭಾರತವು ಔಷಧಿ ರಫ್ತು ಮಾಡುವ ಹಲವು ಬಡ, ಮಧ್ಯಮ ಆದಾಯವರ್ಗದ ದೇಶಗಳಲ್ಲಿ ಔಷಧಿ ಕೊರತೆ ಕಾಡಲಿದೆ. ಮಾತ್ರವಲ್ಲದೆ, ಸಾವಿರಾರು ಮಂದಿ ಭಾರತೀಯರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಭಾರತದ ಒಟ್ಟು ಔಷಧಿ ಮಾರುಕಟ್ಟೆಯ ಗಾತ್ರ 2.5ಲಕ್ಷ ಕೋಟಿ ರೂ.ಗಳದಾಗಿದ್ದು, ಅದರಲ್ಲಿ 75,000 ಕೋಟಿ ರೂ.ಗಳ ವಹಿವಾಟು ಏಕಾಏಕಿ ಸ್ಥಗಿತಗೊಳ್ಳಬಹುದು. ಹಾಗೆಂದು ಔಷಧಿ ಉತ್ಪಾದಕ ಸಂಸ್ಥೆಗಳ ಸಂಘಟನೆಗಳು ಎಚ್ಚರಿಸಿವೆ.
ಗೊತ್ತಿದ್ದೂ ಗೊತ್ತಿದ್ದೂ ಇಂತಹದೊಂದು ಸಂಕಟದ ಸ್ಥಿತಿಯತ್ತ ಔಷಧಿ ಉದ್ಯಮ ಏಕೆ ಸಾಗುತ್ತಿದೆ ಎಂದು ಆಳವಾಗಿ ನೋಡಿದರೆ, ಇದರಲ್ಲಿ ಒಂದೆಡೆ ಸಣ್ಣ ಉದ್ದಿಮೆಗಳ ನಿರುತ್ಸಾಹ, ಪ್ಲ್ಯಾನಿಂಗ್‌ನಲ್ಲಿ ಕೊರತೆ ಹಾಗೂ ಬೆಂಕಿ ಬಿದ್ದ ಬಳಿಕವಷ್ಟೇ ಅದನ್ನು ಆರಿಸಬೇಕೆಂದು ಎಚ್ಚರಗೊಳ್ಳುವ ಸರಕಾರಿ ಬುದ್ಧಿವಂತಿಕೆಗಳು ಎದ್ದು ಕಾಣಿಸುತ್ತಿವೆ. ಇಂಡಿಗೊ ಪ್ರಕರಣದಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಹೇಗೆ ಮುಂಗಾಣ್ಕೆ ಇಲ್ಲದೆ ವರ್ತಿಸಿತೋ, ಅದೇ ಹಾದಿಯಲ್ಲಿ ಈಗ ಔಷಧಿ ರಂಗದ ನಿಯಂತ್ರಣ ಹೊಂದಿರುವ ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಕೂಡ ವರ್ತಿಸುತ್ತಿದೆ ಎಂಬುದು ಮೇಲುನೋಟಕ್ಕೇ ಗೋಚರ.
ಆಗಿರುವುದೇನು?
ಇವೆಲ್ಲ ರಾತ್ರೋರಾತ್ರಿ ಬಂದಿಳಿದಿರುವ ಸಂಕಟಗಳಲ್ಲ. ಭಾರತದಲ್ಲಿ ಔಷಧಿ ಉತ್ಪಾದನೆಯ ಮೇಲೆ ನಿಯಂತ್ರಣ ಇರುವುದು 1940ರ ಡ್ರಗ್ಸ್ ಆಂಡ್ ಕಾಸ್ಮೆಟಿಕ್ಸ್ ಕಾಯ್ದೆಯಲ್ಲಿ. ಈ ಕಾಯ್ದೆಯ ಅಡಿಯಲ್ಲಿ ನಿಯಮಗಳು ಪ್ರಕಟಗೊಂಡಿರುವುದು 1945ರಲ್ಲಿ (Drug Rules, 1945). ಈ ನಿಯಮಗಳಿಗೆ 2023ರ ಡಿಸೆಂಬರ್ 28ರಂದು ಭಾರತ ಸರಕಾರವು ಮಹತ್ವದ ಬದಲಾವಣೆಗಳನ್ನು ಪ್ರಕಟಿಸಿತ್ತು [GSR 922(E)]. ಅದರ ಅನ್ವಯ, ನಿಯಮಗಳ ಷೆಡ್ಯೂಲ್ ‘ಎಂ’ನಲ್ಲಿ, ‘ಒಳ್ಳೆಯ ಗುಣಮಟ್ಟದ ಉತ್ಪಾದನಾ ಕ್ರಮಗಳು ಮತ್ತು ಅದಕ್ಕಾಗಿ ಸೂಕ್ತ ಸ್ಥಳ, ಕಾರ್ಖಾನೆ, ಉಪಕರಣಗಳ ಅವಶ್ಯಕತೆ’ಯ ಬಗ್ಗೆ ಬಹಳ ವಿವರವಾಗಿ ಹೇಳಲಾಗಿತ್ತು.
ಔಷಧಿ ಗುಣಮಟ್ಟ ವ್ಯವಸ್ಥೆ (PQS); ಗುಣಮಟ್ಟ ಸಂಬಂಧಿ ರಿಸ್ಕ್‌ಗಳ ನಿರ್ವಹಣೆ (QRM); ಸ್ವಚ್ಛತೆ ಮತ್ತು ಶುದ್ಧತೆ; ಅರ್ಹತೆ ಮತ್ತು ಮೌಲ್ಯ ಮಾಪನ; ದೂರುಗಳು ಮತ್ತು ಅಡ್ಡ ಪರಿಣಾಮಗಳು; ಕಳಪೆ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂದೆ ಪಡೆಯುವುದು; ಬದಲಾವಣೆಗಳ ಮೇಲೆ ನಿಯಂತ್ರಣ... ಹೀಗೆ ಹಲವು ತಾತ್ವಿಕ ಬದಲಾವಣೆಗಳನ್ನು ನಿಯಮ ತಿದ್ದುಪಡಿಯಲ್ಲಿ ಸೂಚಿಸಲಾಗಿತ್ತು. ಇದನ್ನೆಲ್ಲ 250 ಕೋಟಿ ರೂ.ಗಿಂತ ಹೆಚ್ಚಿನ ವಾರ್ಷಿಕ ವಹಿವಾಟು ಇರುವ ಔಷಧಿ ಕಂಪೆನಿಗಳು ಆರು ತಿಂಗಳ ಒಳಗೂ (28 ಜೂನ್, 2024) ಮತ್ತು 250 ಕೋಟಿ ರೂ.ಗಿಂತ ಕಡಿಮೆ ವಾರ್ಷಿಕ ವಹಿವಾಟು ಇರುವ ಕಂಪೆನಿಗಳು ಒಂದು ವರ್ಷದ ಒಳಗೂ (28 ಡಿಸೆಂಬರ್, 2024) ಕಡ್ಡಾಯವಾಗಿ ಪಾಲಿಸತೊಡಗಬೇಕಿತ್ತು. ಬಹುತೇಕ ದೊಡ್ಡ ಕಂಪೆನಿಗಳು ಆರ್ಥಿಕವಾಗಿ ಬಲಾಢ್ಯವಾಗಿದ್ದುದರಿಂದ ಇದನ್ನು ಪಾಲಿಸಿದವು. ಆದರೆ ಸಣ್ಣ ಕಂಪೆನಿಗಳಿಗೆ (MSME) ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಸಾಧ್ಯ ಆಗಲಿಲ್ಲ. ಆ ಕಂಪೆನಿಗಳು ಮತ್ತು ಅವರ ಸಂಘಟನೆಗಳು ಸೇರಿ, ಸರಕಾರದ ಬಳಿ ಕೊನೆಯ ದಿನಾಂಕದ ವಿಸ್ತರಣೆಗಾಗಿ ಕೋರಿದವು. ಅದಕ್ಕೆ ಒಪ್ಪಿದ ಭಾರತ ಸರಕಾರವು ಮತ್ತೆ ಒಂದು ವರ್ಷದ ಅವಧಿ ವಿಸ್ತರಣೆ ನೀಡಿತ್ತು. ಆ ಅವಧಿ ಈಗ 2025ರ ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದೆ.
ಈ ಒಂದು ಹೆಚ್ಚುವರಿ ವರ್ಷದಲ್ಲಿ ಕೂಡ ಹೆಚ್ಚಿನ ಕಂಪೆನಿಗಳಿಗೆ ಸರಕಾರ ಸೂಚಿಸಿರುವ ತಿದ್ದುಪಡಿಗಳನ್ನು ಮಾಡಿಕೊಳ್ಳುವುದು ಸಾಧ್ಯ ಆಗಿಲ್ಲ ಎಂದು ಹೇಳಲಾಗುತ್ತಿದೆ. ಈ ಕಂಪೆನಿಗಳು 20-30 ವರ್ಷಗಳಿಂದ ಮಾರುಕಟ್ಟೆಯಲ್ಲಿವೆಯಾದರೂ, ತಮ್ಮದೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿವೆ. ಹಾಗಾಗಿ, ಸರಕಾರ ಸೂಚಿಸಿರುವ ಸುಧಾರಣೆಗಳಿಗೆ ಅಗತ್ಯವಿರುವ ಅಪಾರ ಹೂಡಿಕೆ ಮಾಡಲು ಸಾಧ್ಯವಾಗುವ ಸ್ಥಿತಿಯಲ್ಲಿ ಅವು ಇಲ್ಲ. ಹೊಸ ನಿಯಮಗಳನ್ನು ಪಾಲಿಸಬೇಕಾದರೆ, ತಮ್ಮ ಕಾರ್ಖಾನೆಗಳನ್ನು ಅಪ್‌ಗ್ರೇಡ್ ಮಾಡುವುದು, ಔಷಧಿ ಗುಣಮಟ್ಟ ತಪಾಸಣಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಇವಕ್ಕೆಲ್ಲ ದಾಖಲೆಗಳ ನಿರ್ವಹಣೆ ಮಾಡುವುದು ಅನಿವಾರ್ಯ. ಮೊದಲೇ ಸಾಲದ ಸುಳಿ, ಸಿಬ್ಬಂದಿ ಕೊರತೆಯಿಂದ ಕಂಗೆಟ್ಟಿರುವ ಈ ಔಷಧಿ ಉತ್ಪಾದನಾ ಸಂಸ್ಥೆಗಳಿಗೆ ಸರಕಾರದ ಕಡೆಯಿಂದ ತರಬೇತಿಯ ನೆರವು ಮಾತ್ರವಲ್ಲದೆ, ಆಧುನಿಕ ಔಷಧಿ ತಂತ್ರಜ್ಞಾನ ಮೇಲ್ದರ್ಜೆಗೇರಿಸುವಿಕೆಗೆ ಸಹಾಯಧನ ಯೋಜನೆಯಡಿ (RPTUAS), ತಲಾ ಎರಡು ಕೋಟಿಗಳ ತನಕ ಹಣ ಒದಗಿಸುವುದಾಗಿ ಪ್ರಕಟಿಸಲಾಗಿದೆಯಂತೆ, ಆದರೆ ಈ ಹಣ ಕಾರ್ಖಾನೆಗಳಿಗೆ ತಲುಪುವಲ್ಲಿ ಬಾಟಲ್‌ನೆಕ್ ಇದೆ. ಬದಲಾಗಲು ಆಸಕ್ತಿ ಇರುವ ಕಂಪೆನಿಗಳಿಗೆ ಹಣ ಸಿಗುತ್ತಿಲ್ಲ ಮತ್ತು ಉಳಿದವರಿಗೆ ಬದಲಾಗುವ ಆಸಕ್ತಿಯೂ ಇಲ್ಲ- ಇದು ಒಟ್ಟು ಸನ್ನಿವೇಶ.
ಸರಕಾರದ ಕಡೆಯಿಂದ ಈಗಾಗಲೇ ನವೆಂಬರ್ 7ರಂದು ಔಷಧಿ ಕಂಪೆನಿಗಳಿಗೆ ಅಂತಿಮ ಎಚ್ಚರಿಕೆ ನೋಟಿಸ್ ಹೊರಟಿದ್ದು, ನಿಯಮ ಪಾಲಿಸದಿದ್ದಲ್ಲಿ ಕಠಿಣ ಕ್ರಮಗಳ ಎಚ್ಚರಿಕೆ ನೀಡಲಾಗಿದೆ. ಮಾತ್ರವಲ್ಲದೆ, ರಾಜ್ಯಗಳ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಮಹಿತಿ ಪಡೆಯಲು, ಪ್ರತೀ ತಿಂಗಳು ಔಷಧಿ ಕಂಪೆನಿಗಳ ತಪಾಸಣೆ, ಗಮನಿಸುವಿಕೆ, ಸೂಚಿಸಲಾದ ಕ್ರಮಗಳ ಬಗ್ಗೆ ವರದಿ ನೀಡುವಂತೆ ರಾಜ್ಯ ಔಷಧಿ ನಿಯಂತ್ರಕರಿಗೆ ಅಆSಅಔ ಆದೇಶ ನೀಡಿದೆ. ಜೊತೆಗೆ, ಉತ್ಪಾದಕ ಒSಒಇ ಕಂಪೆನಿಗಳಿಗೆ, ಸದ್ಯ ತಾವಿರುವ ಸ್ಥಿತಿಯಿಂದ, ಹೊಸ ನಿಯಮ ಪಾಲನೆಗೆ ತಲುಪಬೇಕಾಗಿರುವ ಸ್ಥಿತಿಯ ನಡುವೆ ಇರುವ ಕಂದರದ ವಿಶ್ಲೇಷಣೆ (gap analysis) ಮತ್ತು ಈ ಕಂದರ ತುಂಬಿ ನಿಯಮಗಳನ್ನು ಪಾಲಿಸಲು ಮಾಡಿಕೊಂಡಿರುವ ಯೋಜನೆಗಳನ್ನು ವಿವರವಾಗಿ ಸಲ್ಲಿಸಬೇಕೆಂದು ಆದೇಶಿಸಲಾಗಿದೆ.
ಸಂಭಾವ್ಯ ಪರಿಣಾಮಗಳು
ಒಂದು ವೇಳೆ ಜನವರಿ 2026ರಿಂದ CDSCO ಕಠಿಣ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದರೆ, 4-5 ಸಾವಿರದಷ್ಟು ಸಣ್ಣಪುಟ್ಟ ಔಷಧಿ ಕಂಪೆನಿಗಳು ಮುಚ್ಚಿಕೊಳ್ಳಲಿವೆ. ಇದರ ಪರಿಣಾಮವಾಗಿ ದೇಶದೊಳಗಿನ ಔಷಧಿ ಮಾರುಕಟ್ಟೆಯಲ್ಲೂ ಹಲವು ಆ್ಯಂಟಿ ಬಯಾಟಿಕ್‌ಗಳು, ರಕ್ತದೊತ್ತಡ ನಿಯಂತ್ರಕಗಳು, ಉರಿಯೂತ ನಿವಾರಕಗಳು, ನೋವು ನಿವಾರಕಗಳು, ಕೆಮ್ಮು-ಶೀತದ ಔಷಧಿಗಳು, ಮಧುಮೇಹದ ಔಷಧಿಗಳ ಸರಬರಾಜಿನಲ್ಲಿ ಕೊರತೆ ಉಂಟಾಗಬಹುದಂತೆ. ಈ MSMEಗಳು ಸರಕಾರಕ್ಕೂ ಸರಬರಾಜು ಮಾಡುತ್ತವೆ. ಹಾಗಾಗಿ, ಕೆಲವು ಜನರಿಕ್ ಔಷಧಿಗಳ ಕೊರತೆಯೂ ಕಾಣಿಸಿಕೊಳ್ಳಬಹುದು ಎಂದು ಮಾರುಕಟ್ಟೆ ಮೂಲಗಳು ಅಭಿಪ್ರಾಯಪಟ್ಟಿವೆ. ‘ಇಕನಾಮಿಕ್ ಟೈಮ್ಸ್’ (ಡಿ.16) ವರದಿಯ ಪ್ರಕಾರ, 20ಕ್ಕೂ ಮಿಕ್ಕಿ ಔಷಧಿ ಉತ್ಪಾದಕರ ಸಂಘಟನೆಗಳು, ಡೆಡ್‌ಲೈನನ್ನು ಇನ್ನಷ್ಟು ವಿಸ್ತರಿಸುವಂತೆ ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿವೆ.
ಆದರೆ, ಸರಕಾರಕ್ಕೆ ಈ ಬಾರಿ ಸಲೀಸಾಗಿ ವಿಸ್ತರಣೆ ನೀಡುವುದು ಸಾಧ್ಯವಾಗದು. ಯಾಕೆಂದರೆ, ಭಾರತದ ಔಷಧಿ ಗುಣಮಟ್ಟಗಳ ಬಗ್ಗೆ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಹಲವು ಬಾರಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗಳೆದ್ದಿವೆ. ಇದೇ ಅಕ್ಟೋಬರ್ ತಿಂಗಳಿನಲ್ಲಿ ತಮಿಳುನಾಡು ಮೂಲದ ಔಷಧಿ ಕಂಪೆನಿಯೊಂದರ ಕೆಮ್ಮಿನ ಸಿರಪ್ ಸೇವಿಸಿದ 22 ಮಕ್ಕಳು ತೀರಿಕೊಂಡಿದ್ದರು. 2022ರಲ್ಲಿ ಭಾರತದ ಔಷಧಿಗಳನ್ನು ಸೇವಿಸಿದ ಗಾಂಬಿಯಾದ 70 ಮತ್ತು ಉಜ್ಬೆಕಿಸ್ಥಾನದ 18 ಮಕ್ಕಳು ತೀರಿಕೊಂಡಿದ್ದರು. ನಮ್ಮ ಔಷಧಿಗಳ ಗುಣಮಟ್ಟದ ಮೇಲೆ ವಿಶ್ವ ಆರೋಗ್ಯ ಸಂಸ್ಥೆ (WHO) ಕಡೆಯಿಂದಲೂ ಆಕ್ಷೇಪ ಎದುರಾಗಿತ್ತು. ಹೆಚ್ಚಿನಂಶ ಆ ಹಿನ್ನೆಲೆಯಲ್ಲೇ 2018ರಲ್ಲೇ ಸಿದ್ಧಗೊಂಡಿದ್ದ ನಿಯಮ ತಿದ್ದುಪಡಿಗಳನ್ನು 2023ರ ಡಿಸೆಂಬರಿನಲ್ಲಿ ಜಾರಿಗೊಳಿಸಲಾಗಿತ್ತು.
ಭಾರತದ ಔಷಧಿ ಉತ್ಪಾದನಾ ಉದ್ದಿಮೆಗೆ ‘ಜಾಗತಿಕ ದಕ್ಷಿಣ ವಲಯದ ಫಾರ್ಮಸಿ’ ಎಂಬ ತುರಾಯಿ ಇದ್ದರೂ, ಗುಣಮಟ್ಟಕ್ಕೆ ಸಂಬಂಧಿಸಿದಂತೆ ಹಲವು ಆಕ್ಷೇಪಗಳಿವೆ. ಇಲ್ಲಿನ ನಿಯಮಗಳು ಕಾಗದಪತ್ರಗಳಲ್ಲಿ ಮಾತ್ರ ಬಿಗುವಾಗಿದ್ದು, ಆಚರಣೆಯಲ್ಲಿ ಅಪಾರ ಭ್ರಷ್ಟಾಚಾರ, ಸ್ವಜನಪಕ್ಷಪಾತ ತಾಂಡವವಾಡುತ್ತಿವೆ ಎಂಬ ದೂರುಗಳಿವೆ. ಹಾಗಾಗಿ, ಜಾಗತಿಕ ಔಷಧಿ ಮಾರುಕಟ್ಟೆಯಲ್ಲಿ ತನ್ನ ಕಳೆದುಕೊಂಡಿರುವ ವಿಶ್ವಾಸವನ್ನು ಮರಳಿ ಗಳಿಸಿಕೊಳ್ಳಲು, ಭಾರತಕ್ಕೆ ಗುಣಮಟ್ಟ ಸುಧಾರಿಸಬಲ್ಲ ಕಠಿಣ ನಿಯಮಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎನ್ನಿಸುವ ಸ್ಥಿತಿ ಇದೆ.
ಇಂತಹದೊಂದು ಸನ್ನಿವೇಶದ ಲಾಭವನ್ನು ಸಹಜವಾಗಿಯೇ ಔಷಧಿ ಉದ್ಯಮದ ಬೃಹತ್ ಕಾರ್ಪೊರೇಟ್‌ಗಳು ಪಡೆಯಲಿವೆ. MSMEಗಳು ಮುಚ್ಚುಗಡೆ ಆದರೆ, ಆ ವಲಯ ಉತ್ಪಾದಿಸುವ ಸರಕುಗಳತ್ತ ಈ ದೊಡ್ಡ ಕಂಪೆನಿಗಳು ಸಹಜವಾಗಿಯೇ ಕಣ್ಣುಹಾಕಲಿವೆ ಮತ್ತು ಮಾರುಕಟ್ಟೆಯನ್ನು ಕಸಿದುಕೊಳ್ಳಲಿವೆ. ದೇಶದ ಎಲ್ಲ ಉದ್ಯಮವಲಯಗಳಲ್ಲೂ ಇಂತಹದೇ ಪ್ಯಾಟರ್ನ್ ಕಾಣಿಸಿಕೊಳ್ಳತೊಡಗಿದಾಗ, ಇದು ಸರಕಾರದ ಕಡೆಯಿಂದ ಹಾವು ಹೊಡೆದು ಹದ್ದಿಗೆ ಉಣ್ಣಿಸುವ ಆಟ ಇರಬಹುದೆ? ಎಂಬ ಸಂಶಯ ಮೂಡದಿರದು. ಕೇವಲ ಬಾಯುಪಚಾರಕ್ಕಷ್ಟೇ ತಾನು MSME ಪರ ಎಂದು ಹೇಳಿಕೊಳ್ಳುವ ಭಾರತ ಸರಕಾರ, ಅದನ್ನು ಆಚರಿಸಿ ತೋರಿಸಿ, ಸಣ್ಣ ಫಾರ್ಮಾ ಉದ್ಯಮಗಳನ್ನು ಕೈ ಹಿಡಿದು ಮುನ್ನಡೆಸದಿದ್ದರೆ, ಸರಕಾರವು ದೊಡ್ಡ ಫಾರ್ಮಾ ‘ಆನಿ’ಗಳ ಪರವಾಗಿ ನಿಂತೇ ಈ ಆಟ ಆಡುತ್ತಿದೆ ಎಂಬ ಶಂಕೆ ಮೂಡುತ್ತದೆ. ಇಂಡಿಗೊ ವಿಚಾರದಲ್ಲಿ ಆಗಿರುವುದೂ ಇದೇ ಮಾದರಿಯ ಆಟ ಅಲ್ಲವೇ?!