ನೇರ ನೇಮಕಾತಿಗೆ ತಾತ್ಕಾಲಿಕ ತಡೆ: ಅನಿಲ್ ಕುಮಾರ್ ಭರವಸೆ
ಬೆಂಗಳೂರು, ಮಾ.12: ನಗರ ಸ್ಥಳಿಯ ಸಂಸ್ಥೆಗಳಾದ ಪಟ್ಟಣ ಪಂಚಾಯತ್, ನಗರಸಭೆ, ನಗರಪಾಲಿಕೆಗಳಲ್ಲಿ ನೇರ ನೇಮಕಾತಿಗೆ ಜಿಲ್ಲಾಧಿ ಕಾರಿಗಳಿಗೆ ಅಧಿಕಾರ ನೀಡಿದ್ದ ಆದೇಶವನ್ನು ತಾತ್ಕಾಲಿಕ ತಡೆ ಹಿಡಿಯಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಭರವಸೆ ನೀಡಿದ್ದಾರೆ.
ಶನಿವಾರ ಇಲ್ಲಿನ ಸ್ವಾತಂತ್ರ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ ಹಮ್ಮಿಕೊಂಡಿದ್ದ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾ ಡಿದ ಅವರು, ಹದಿನೈದು-ಇಪ್ಪತ್ತು ವರ್ಷಗಳಿಂದ ಗುತ್ತಿಗೆ ಅಧಾರದಲ್ಲಿ ದುಡಿಯುತ್ತಿರುವ ಮುನ್ಸಿಪಲ್ ಕಾರ್ಮಿಕರಿಗೆ ನ್ಯಾಯದೊರಕಿಸಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.
ಮುನ್ಸಿಪಲ್ ಕಾರ್ಮಿಕರಿಗೆ ಸೂಕ್ತ ವೇತನ, ಅಗತ್ಯ ಮೂಲಭೂತ ಸೌಲಭ್ಯ ಹಾಗೂ ಖಾಯಮಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿರುವ ಅನಿಲ್ ಕುಮಾರ್, ಈ ಸಂಬಂಧ ಶೀಘ್ರದಲ್ಲೆ ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಸಂಘದ ಮುಖಂಡರ ಸಭೆ ಕರೆಯುವ ಭರವಸೆ ನೀಡಿದರು.
ಬಳಿಕ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜಿಬ್, ಮುನ್ಸಿಪಲ್ ಕಾರ್ಮಿಕರ ನೇರ ನೇಮಕಾತಿ ವಿರೋಧಿಸಿ, ಗುತ್ತಿಗೆ ಮುನ್ಸಿಪಲ್ ಕಾರ್ಮಿಕರ ಖಾಯಾಮಾತಿಗಾಗಿ ಒತ್ತಾಯಿಸಿ ಮಾ.10ರಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗಿತ್ತು ಎಂದರು.
ಪೌರ ಕಾರ್ಮಿಕರನ್ನು ಖಾಯಂಗೊಳಿಸದಿದ್ದಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಕೈ ಜೋಡಿಸುವ ಭರವಸೆಯನ್ನು ಅಧ್ಯಕ್ಷ ನಾರಾಯಣ ನೀಡಿದ್ದರು. ಅಲ್ಲದೆ, ಹರಿಯಾಣ ಮಾದರಿ ಕಾರ್ಮಿಕರಿಗೆ ನೇರ ವೇತನ, ಗುತ್ತಿಗೆ ಪದ್ದತಿ ರದ್ದತಿಯ ಬಗ್ಗೆ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.
ಪೌರ ಕಾರ್ಮಿಕರಿಗೆ ಸಮಾನ ವೇತನ, ಅಗತ್ಯ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ನ್ಯಾಯ ದೊರಕಿಸಿಕೊಡಲಾಗುವುದು ಎಂದು ಕಾರ್ಮಿಕ ಇಲಾಖೆ ಜಂಟಿ ಆಯುಕ್ತ ಡಾ.ಶ್ರೀಪಾದಭಟ್ ಭರವಸೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.
ಸಂಘದ ಅಧ್ಯಕ್ಷ ಹರೀಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಸೈಯದ್ ಮುಜಿಬ್, ಖಚಾಂಚಿ ಸಿ.ವೆಂಕಟೇಶ್, ಪ್ರಕಾಶ್,ಲಕ್ಷ್ಮಣ್ ಹಂದರಾಳ್, ಬಸವರಾಜು ಕಾಂಬಳೆ, ಸುಬ್ರಮಣ್ಯ, ಚಂದ್ರಪ್ಪ, ಸಿಐಟಿಯುನ ರಾಜ್ಯ ಕಾರ್ಯದರ್ಶಿ ಉಮೇಶ್ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.