ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನ
ಬೆಂಗಳೂರು, ಮಾ.13: ನಾಲ್ಕು ತಿಂಗಳ ಮಗುವಿನೊಂದಿಗೆ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ರಕ್ಷಿಸುವ ಮೂಲಕ ರೈಲು ಚಾಲಕ ಹಾಗೂ ರೈಲ್ವೆ ಗೇಟ್ ಭದ್ರತಾ ಸಿಬ್ಬಂದಿ ಸಮಯಪ್ರಜ್ಞೆ ಮೆರೆದಿದ್ದಾರೆ.
ತನ್ನ ಪ್ರಿಯಕರನಿಂದ ಮೋಸಹೋಗಿ ನಾಲ್ಕು ತಿಂಗಳ ಮಗುವನ್ನು ಹೊಂದಿರುವ ರಶ್ಮಿ (ಹೆಸರು ಬದಲಾಯಿಸಲಾಗಿದೆ) ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿಯ ಮೇಲೆ ಮಲಗಿದ್ದಳು ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.
ರಶ್ಮಿ ರೈಲ್ವೆ ಹಳಿಯ ಮೇಲೆ ಮಲಗಿರುವುದನ್ನು ದೂರದಿಂದ ಗಮನಿಸಿದ ರೈಲ್ವೆ ಗೇಟ್ ಭದ್ರತಾ ಸಿಬ್ಬಂದಿ ಚಲಿಸುತ್ತಿದ್ದ ರೈಲಿನ ಚಾಲಕನಿಗೆ ಮಾಹಿತಿ ನೀಡಿದರು. ರೈಲಿನ ವೇಗವನ್ನು ನಿಯಂತ್ರಣಕ್ಕೆ ತಂದು ನಿಲ್ಲಿಸುವಲ್ಲಿ ರೈಲು ಚಾಲಕ ಯಶಸ್ವಿಯಾದರು. ಇದರಿಂದಾಗಿ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ ಎಂದು ಪೊಲೀಸರು ಹೇಳಿದರು.
ಪ್ರಕರಣ ದಾಖಲಿಸಿಕೊಂಡಿರುವ ಬೈಯಪ್ಪನಹಳ್ಳಿ ಠಾಣಾ ಪೊಲೀಸರು, ರಶ್ಮಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮುಂದುವರಿಸಿದ್ದಾರೆ.