‘ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ಆನ್‌ಲೈನ್ ಮಾರಾಟ ವ್ಯವಸ್ಥೆ’
ದೊಡ್ಡಬಳ್ಳಾಪುರ, ಮಾ. 15: ಮಧ್ಯವರ್ತಿಗಳಿಂದ ಆಗುವ ತೊಂದರೆಗೆ ಕಡಿವಾಣ ಹಾಕುವ ಉದ್ದೇಶದಿಂದ ಎಪಿಎಂಸಿ ಮಾರುಕಟ್ಟೆಗಳಲ್ಲಿ ಆನ್‌ಲೈನ್ ಮಾರಾಟ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಶಾಸಕ ವೆಂಕಟರಮಣಯ್ಯ ಹೇಳಿದರು.
ನಗರದಲ್ಲಿಂದು ಎಪಿಎಂಸಿ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ರಾಜ್ಯ ಕೃಷಿ ಮಾರಾಟ ಇಲಾಖೆ ವತಿಯಿಂದ ಆಯೋಜಿಸಿದ್ದ ಆನ್‌ಲೈನ್ ಮಾರಾಟ ವ್ಯವಸ್ಥೆ ಕುರಿತ ರೈತ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ಬೆವರು ಹರಿಸಿ ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಾಗ ಮಧ್ಯವರ್ತಿಗಳಿಂದ ಹಲವು ರೀತಿಯ ತೊಂದರೆಯಾಗುತಿತ್ತು. ಹೀಗಾಗಿ, ಎಲ್ಲ ಎಪಿಎಂಸಿಗಳಲ್ಲಿ ಆನ್‌ಲೈನ್ ಮಾರಾಟ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಪರಿಣಾಮ ರೈತರ ಶೋಷಣೆಗೆ ಕಡಿವಾಣ ಹಾಕಲು ಸಾಧ್ಯವಾಗಿದೆ ಅವರು ಅಭಿಪ್ರಾಯಪಟ್ಟರು. ಆನ್‌ಲೈನ್ ಮಾರಾಟ ಪ್ರಕ್ರಿಯೆಯಿಂದ ರೈತರು ಮುಕ್ತವಾಗಿ ಮತ್ತು ಪಾರದರ್ಶಕವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿಕೊಳ್ಳಲು ಸಹಾಯವಾಗಿದೆಯಲ್ಲದೆ, ವರ್ತಕರು ಸಹ ಆನ್‌ಲೈನ್ ಮೂಲಕವೆ ಬೆಲೆ ನಮೂದಿಸಲು ಸಾಧ್ಯವಾಗಿದೆ. ಅಲ್ಲದೆ, ಇದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದೆ ಎಂದರು.