×
Ad

ಪತಿಮನೆಯವರು ತನ್ನನ್ನು ಒಳಗೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿ ಮನೆಯ ಹೊರಗಡೆ ಧರಣಿ ಕುಳಿತ ಸೊಸೆ!

Update: 2016-03-16 12:19 IST

ಇಂದೋರ್, ಮಾರ್ಚ್.16: ಪತಿ ಮನೆಯ ಚಿತ್ರಹಿಂಸೆಯನ್ನು ಪ್ರತಿಭಟಿಸಿ ಇಲ್ಲೊಬ್ಬ ಸೊಸೆ ಮನೆಯ ಹೊರಗೆ ಧರಣಿಗೇ ಕೂತು ಬಿಟ್ಟಿದ್ದಾರೆ. ಪತಿಮನೆಯವರನ್ನು ತನ್ನನ್ನು ಒಳಗೆ ಸೇರಿಸಿಕೊಳ್ಳಬೇಕು ಮತ್ತು ಆಸ್ತಿಯಲ್ಲಿ ತನ್ನ ಪಾಲು ನೀಡಬೇಕೆಂದು ಧರಣಿ ನಿರತ ಗೃಹಣಿಯ ಅಹವಾಲು ಆಗಿದೆ. ತಾನು ಸತ್ತರೂ ತನ್ನ ಹಕ್ಕು ಸಿಗದೆ ಇಲ್ಲಿಂದ ಕದಲಲಾರೆ ಎಂದು ಹಠಹಿಡಿದು ಮನೆಯಹೊರಗಡೆ ಆಕೆ ಝಂಡಾ ಊರಿದ್ದಾರೆ.

 ಇಂದೋರ್‌ನ ಸ್ನೇಹಲತಾಗಂಜ್‌ನ ಸ್ಕೈ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಅಜಯ್‌ಗೋಖಲೆ ಮತ್ತು ಕುಟುಂಬ ಈ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದು ಅಜಯ್ ಪತ್ನಿ ಅಶ್ವಿನಿ ಧರಣಿ ನಿರತೆ ಗೃಹಣಿಯಾಗಿದ್ದಾರೆ. ಅಶ್ವಿನಿ ಅಲ್ಲಿಗೆ ಬಂದು ತನ್ನ ಮಗಳನ್ನು ಭೇಟಿಯಾಗಲು ಬಯಸಿದ್ದರು. ಆದರೆ ಪತಿಮನೆಯವರು ಅದಕ್ಕೂ ಅವಕಾಶ ನೀಡಿಲ್ಲ. ಇದರಿಂದ ಹತಾಶರಾದ ಮಹಿಳೆ ಧರಣಿ ಆರಂಭಿಸಿಯೇ ಬಿಟ್ಟರು. ಅಶ್ವಿನಿ ತನ್ನ ವಿವಾಹ ಅಜಯ್‌ನೊಂದಿಗೆ 1998ರಲ್ಲಿ ನಡೆದಿದೆ ಎಂದು ಹೇಳುತ್ತಿದ್ದಾರೆ. ಆರಂಭದಿಂದಲೇ ಪತಿಮನೆಯವರು ಕಿರುಕುಳ ಅರಂಭಿಸಿದ್ದರು. 2006ರಲ್ಲಿ ಆಕೆ ಗರ್ಭಿಣಿಯಾಗಿದ್ದಾಗ ಗರ್ಭಪಾತವನ್ನೂ ಮಾಡಿಸಿ ನಂತರ ವಿವಾಹವಿಚ್ಛೇದನಕ್ಕೆ ದೂರು ನೀಡಿದ್ದರು ಎಂದು ಮಹಿಳೆ ಹೇಳುತ್ತಿದ್ದಾರೆ. ಹೀಗೆ ಪರಿತ್ಯಕ್ತೆಯಾಗಿ ಬಹಳ ಸಂಕಷ್ಟವನ್ನು ಅನುಭವಿಸುತ್ತಿರುವ ತನಗೆ ತಿಂಗಳಿಗೆ ಬರೇ ಐದು ಸಾವಿರ ರೂ. ಅಜಯ್ ಖರ್ಚಿಗೆ ನೀಡುವುದು ಇಂದಿನ ದಿನಗಳಲ್ಲಿ ಇದು ಏನೇನೂ ಸಾಲದೆಂದು ಅಶ್ವಿನಿ ಅಲವತ್ತುಕೊಳ್ಳುತ್ತಿದ್ದಾರೆ.

ತನ್ನನ್ನು ಪತಿಮನೆಯವರು ಗೌರವದಿಂದ ತನ್ನನ್ನು ಮನೆಗೆ ಸೇರಿಸಿಕೊಳ್ಳಬೇಕು ಜೊತೆಗೆ ಆಸ್ತಿಯಲ್ಲಿ ತನ್ನ ಭಾಗವನ್ನು ನೀಡಬೇಕು ಇಲ್ಲದಿದ್ದರಿಂದ ಮನೆಯ ಹೊರಗೆ ಧರಣಿ ಕುಳಿತಲ್ಲಿಂದ ಏಳುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಅಶ್ವಿನಿಯ ಮಾವ ಶ್ರೀಕೃಷ್ಣ ಗಂಗಾಧರ ಗೋಖಲೆ "ಅಶ್ವಿನಿ ಮತ್ತು ಅವರ ಮಗ ಅಜಯ್‌ರ ವಿವಾಹ ವಿಚ್ಛೇದನದ ಕೇಸು ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಹೈಕೋರ್ಟ್ ಸೂಚನೆಯಂತೆ ಪ್ರತಿತಿಂಗಳು ಅಶ್ವಿನಿಗೆ ಐದು ಸಾವಿರ ರೂಪಾಯಿ ಖರ್ಚಿಗೆ ಕೊಡುತ್ತಿದ್ದೇವೆ. ಅಶ್ವಿನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ತಿಂಗಳಿಗೆ ಇಪ್ಪತ್ತೈದು ಸಾವಿರ ರೂಪಾಯಿಯ ಬೇಡಿಕೆಯನ್ನು ಇಟ್ಟಿದ್ದಾಳೆ. ಆದರೆ ಹೈಕೋರ್ಟ್ ಈ ಅಪೇಕ್ಷೆಯನ್ನು ನಿರಾಕರಿಸಿದೆ" ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News