ಮಳೆನೀರು ಕೊಯ್ಲು ಅಭಿವೃದ್ಧಿಪಡಿಸಲು ಸಾಫ್ಟ್‌ವೇರ್
ಬೆಂಗಳೂರು, ಮಾ.21: ಮಳೆನೀರು ಸಂಗ್ರಹಣೆಯನ್ನು ಅನುಷ್ಠಾನಗೊಳಿಸಲು ಬಯಸುವಂತಹವರಿಗೆ ಸೂಕ್ತ ಮಾಹಿತಿಯನ್ನು ಒದಗಿಸಲು ಡೂ ಇಟ್ ಯುವರ್‌ಸೆಲ್ಫ್- ಆರ್‌ಡಬ್ಲೂಎಚ್ ಟೂಲ್ ಎಂಬ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದು, ಮಾ. 22ರಂದು ಪಾಂಡಿಚೇರಿಯಲ್ಲಿ ಬಿಡುಗಡೆಯಾಗಲಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ತಂತ್ರವಿದ್ಯಾ ಮಂಡಳಿಯ ಯೋಜನಾ ಸಂಶೋಧಕ ಎ.ಆರ್.ಶಿವಕುಮಾರ್, ಮಳೆನೀರು ಕೊಯ್ಲನ್ನು ಹೆಚ್ಚು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಸಾಪ್ಟ್‌ವೇರ್ ತರಲಾಗಿದೆ. ಇದರಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಲು ಬೇಕಾದ ಪೂರಕ ಮಾಹಿತಿಯನ್ನು ನೀಡುತ್ತದೆ ಎಂದು ಹೇಳಿದರು.
ಸಾಪ್ಟ್‌ವೇರ್ ಮೂಲಕ ನಾವು ನಮ್ಮ ಸುತ್ತಮುತ್ತ ಮಳೆಯಾಗುವ ದಿನ ಮತ್ತು ಪ್ರಮಾಣ, ನಾವು ವಾರ್ಷಿಕವಾಗಿ ಸಂಗ್ರಹಿಸಬಹುದಾದಂತಹ ಮಳೆ ನೀರಿನ ಪ್ರಮಾಣ ಮತ್ತು ಅದರಿಂದ ನಾವು ಬಳಸಿಕೊಳ್ಳಲು ಅಗತ್ಯವಾದ ಟ್ಯಾಂಕ್‌ನ ಗಾತ್ರ, ವರ್ಷದ ಎಲ್ಲಾ ದಿನಗಳಲ್ಲಿ ಸ್ಥಳೀಯ ಮಳೆ ಪ್ರಮಾಣದ ಐತಿಹಾಸಿಕ ದತ್ತಾಂಶಗಳ ಕ್ರಿಯಾತ್ಮಕ ಗ್ರಾಫ್, ಮಳೆ ನೀರು ಕೊಯ್ಲು ತಯಾರಿಸಲು ಆಗುವ ಖರ್ಚು-ವೆಚ್ಚ ಕುರಿತು ಹಾಗೂ ಇನ್ನಿತರೆ ಮಾಹಿತಿಯನ್ನು ಇದರಲ್ಲಿ ಅಳವಡಿಸಲಾಗಿದೆ ಎಂದು ಹೇಳಿದರು. ಸಾಫ್ಟ್‌ವೇರ್‌ನಲ್ಲಿ ಅಗತ್ಯವಿರುವ ಸಣ್ಣ ಪ್ರಶ್ನಾವಳಿಯನ್ನು ಹೊಂದಿರುತ್ತದೆ. ಇದರಲ್ಲಿ ಸುಮಾರು 50 ವರ್ಷಗಳಿಂದ ದಾಖಲಾದ ಮಳೆಯ ಪ್ರಮಾಣವನ್ನು ದಾಖಲಿರಿಸಲಾಗಿದೆ. ಅದರಂತೆ ಮುಂದಿನ ದಿನಗಳಲ್ಲಾಗುವ ಮಳೆಯ ಪ್ರಮಾಣವನ್ನು ಸೂಚಿಸಿ ಅದಕ್ಕೆ ಅನುಗುಣವಾದ ಮಾಹಿತಿಯನ್ನು ನೀಡಲಾಗುತ್ತದೆ. ಮಳೆ ನೀರು ಕೊಯ್ಲು ಅಳವಡಿಸಲು ಅಗತ್ಯವಾದ ಪೂರಕ ಮಾಹಿತಿಯನ್ನು ನಾವು ನೀಡುವ ಪೂರ್ವ ಮಾಹಿತಿಯನ್ನಾಧರಿಸಿ ವರದಿಯನ್ನು ನೀಡುತ್ತದೆ ಎಂದು ಹೇಳಿದರು.
ರಾಜ್ಯದ 125 ತಾಲೂಕುಗಳ 50 ವರ್ಷಗಳ ದಿನನಿತ್ಯ ಮಳೆ ಪ್ರಮಾಣ ಸೇರಿದಂತೆ ಭಾರತದ 15 ರಾಜ್ಯಗಳ 285 ಜಿಲ್ಲಾ ಕೇಂದ್ರಗಳ ಪೂರ್ಣ ಮಾಹಿತಿಯನ್ನು ಆ್ಯಪ್‌ನಲ್ಲಿ ಶೇಖರಿಸಲಾಗಿದೆ. ಹಾಗೂ ತಾರ್ಕಿಕ ಲೆಕ್ಕಾಚಾರಗಳನ್ನು ಹಾಗೂ ಮುಂದುರಿದ ಗ್ರಾಫಿಕ್ ಉತ್ತರಗಳನ್ನು ಸಂಯೋಜಿಸಿ ಸೂಕ್ತ ಉತ್ತರಗಳನ್ನು ಮಳೆನೀರು ಸಂಗ್ರಹಣೆ ಮಾಡ ಬಯಸುವ ವ್ಯಕ್ತಿಯ ಸ್ಥಳಕ್ಕೆ ಅನುಗುಣವಾಗಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಿದರು.
ಸಾಫ್ಟ್‌ವೇರ್ ವೈಜ್ಞಾನಿಕ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದು ಇಂಟರ್‌ನೆಟ್ ಹಾಗೂ ಆಂಡ್ರಾಯ್ಡಾ ಮೊಬೈಲ್ ಫೋನುಗಳಲ್ಲಿ ಲಭ್ಯವಿದೆ. ಹಾಗೂ http://210.203.68/kscstnmitrwhbeta13.php. ಈ ಲಿಂಕ್‌ನಲ್ಲಿ ನಿಯಮಿತವಾಗಿ ಬಳಕೆಯಾಗುತ್ತದೆ ಎಂದು ಹೇಳಿದರು.