ಜಿಐಒದಿಂದ ಮಹಿಳೆಯರಿಗೆ ‘ಜಿಹಾದ್’ ತರಬೇತಿ ಎಂದು ಪೊಲೀಸ್ ಸುತ್ತೋಲೆ : ಹೈಕೋರ್ಟ್ ಮೆಟ್ಟಿಲೇರಿದ ಜಮಾಅತೆ ಇಸ್ಲಾಮಿ

Update: 2016-03-22 04:58 GMT

   ಹೊಸದಿಲ್ಲಿ,ಮಾ.21: ಮಾನಹಾನಿಕರ ಮುಂಬೈ ಪೊಲೀಸ್ ಸುತ್ತೋಲೆಯೊಂದರ ವಿರುದ್ಧ ಜಮಾಅತೆ ಇಸ್ಲಾಮಿ ಹಿಂದ್ ಸಲ್ಲಿಸಿರುವ ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯವು ಸೋಮವಾರ ವಿಚಾರಣೆಗೆ ಅಂಗೀಕರಿಸಿದೆ. ಜಮಾಅತ್‌ನ ಅಂಗಸಂಸ್ಥೆ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್(ಜಿಐಒ) ಮುಸ್ಲಿಮ್ ಬಾಲಕಿಯರ ‘ಬ್ರೇನ್ ವಾಷ್’ ಮಾಡುತ್ತದೆ ಮತ್ತು ಅವರನ್ನು ‘ಜಿಹಾದ್’ಗೆ ತರಬೇತುಗೊಳಿಸುತ್ತದೆ ಎಂದು ಈ ಸುತ್ತೋಲೆಯಲ್ಲಿ ಆರೋಪಿಸಲಾಗಿದೆ.

ಪೊಲೀಸ್ ಸುತ್ತೋಲೆಯು ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ಹೇಗೆ ಎನ್ನುವುದನ್ನು ವಿವರಿಸುವಂತೆ ನ್ಯಾ.ಎಸ್.ಸಿ.ಧರ್ಮಾಧಿಕಾರಿ ಅವರ ನೇತೃತ್ವದ ಪೀಠವು ಮಹಾರಾಷ್ಟ್ರ ಸರಕಾರಕ್ಕೆ ಆದೇಶಿಸಿದೆ.

ಸುತ್ತೋಲೆಯಲ್ಲಿನ ವಿಷಯವನ್ನು ತಾನು ಮಾಧ್ಯಮಗಳಿಗೆ ಸೋರಿಕೆ ಮಾಡಿರುವುದನ್ನು ನಿರಾಕರಿಸಿ ಅಫಿದಾವತ್ತೊಂದನ್ನು ಸಲ್ಲಿಸಿದ ಪೊಲೀಸ್ ಇಲಾಖೆಯು, ಈ ವಿಷಯ ಮಾಧ್ಯಮಗಳಿಗೆ ತಲುಪಿದ್ದು ಹೇಗೆ ಎನ್ನುವುದನ್ನು ಪತ್ತೆ ಹಚ್ಚುವುದು ಕಠಿಣವಾಗಿದೆ ಎಂದು ಹೇಳಿತು.

ಮುಸ್ಲಿಮ್ ಬಾಲಕಿಯರ ಒಳಿತಿಗಾಗಿ ತಾನು ಜಿಐಒವನ್ನು ಪ್ರವರ್ತಿಸಿದ್ದಾಗಿ ಜಮಾಅತ್ ತನ್ನ ಅರ್ಜಿಯಲ್ಲಿ ತಿಳಿಸಿದೆ. ಮುಂಬೈ ಪೊಲೀಸ್‌ನ ವಿಶೇಷ ಶಾಖೆಯು 2013,ಮಾರ್ಚ್‌ನಲ್ಲಿ ಹೊರಡಿಸಿದ್ದ ಈ ಸುತ್ತೋಲೆಯಲ್ಲಿ ಮುಸ್ಲಿಮ್ ಬಾಲಕಿಯರಲ್ಲಿ ತಮ್ಮ ಧರ್ಮದ ಕುರಿತು ಅರಿವು ಮೂಡಿಸುವುದು ಮಾತ್ರ ಜಿಐಒ ಉದ್ದೇಶವಲ್ಲ. ಅವರ ಮನಸ್ಸನ್ನು ಪರಿವರ್ತಿಸಿ ಅವರನ್ನು ಜಿಹಾದ್‌ಗೆ ಸಿದ್ಧಗೊಳಿಸುವುದು ಸಹ ಅದರ ಗುರಿಯಾಗಿದೆ ಎಂದು ಆರೋಪಿಸಿತ್ತು ಎಂದು ಜಮಾಅತ್ ನ್ಯಾಯಾಲಯಕ್ಕೆ ತಿಳಿಸಿತು.

 ಸುತ್ತೋಲೆಯು ಮಾನಹಾನಿಕರವಾಗಿದೆ ಮತ್ತು ಜಿಐಒದ ವರ್ಚಸ್ಸನ್ನು ಹಾಳುಗೆಡವುವ ಉದ್ದೇಶ ಹೊಂದಿದೆ ಎಂದು ಆರೋಪಿಸಿರುವ ಅದು, ಈ ಸುತ್ತೋಲೆಯನ್ನು ಹೊರಡಿಸಲು ಕಾರಣರಾರು ಮತ್ತು ಯಾವ ಆಧಾರದಲ್ಲಿ ಅದನ್ನು ಹೊರಡಿಸಲಾಗಿದೆ ಎನ್ನುವುದನ್ನು ಪತ್ತೆ ಹಚ್ಚಲು ವಿಚಾರಣೆಗೆ ಆದೇಶಿಸುವಂತೆ ನ್ಯಾಯಾಲಯವನ್ನು ಕೋರಿದೆ. ಸೂಕ್ತ ಮಾನನಷ್ಟ ಪರಿಹಾರವನ್ನು ಕೊಡಿಸುವಂತೆಯೂ ಅದು ಕೋರಿದೆ.

ಪ್ರತಿವಾದಿಗಳಿಂದ ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಜಮಾಅತ್ ಹೇಳಿದೆ. ರಾಜ್ಯ ಸರಕಾರ,ಮುಂಬೈ ಪೊಲೀಸ್ ಆಯುಕ್ತ,ಪ್ರಧಾನ ಗೃಹ ಕಾರ್ಯದರ್ಶಿ ಮತ್ತು ಕೇಂದ್ರ ಸರಕಾರ ಪ್ರತಿವಾದಿಗಳಲ್ಲಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News