ಹೆದರಬೇಡಿ! ಎರಡು ಬಾರಿ ಬೆಳಗಿನ ತಿಂಡಿ ತಿಂದರೆ ದಪ್ಪ ಆಗುವುದಿಲ್ಲ
ಬೆಳಗಿನ ತಿಂಡಿಯನ್ನು ತಿನ್ನದವರಿಗೆ ಹೋಲಿಸಿದರೆ ಬೆಳಗಿನ ಜಾವ ಎರಡು ಬಾರಿ ಉಪಹಾರ ಸೇವಿಸುವ ಮಕ್ಕಳು ಹೆಚ್ಚು ದಪ್ಪ ಆಗುವುದಿಲ್ಲ! ಬಹಳಷ್ಟು ಮಕ್ಕಳು ಶಾಲೆಯಲ್ಲಿ ಉಚಿತ ಉಪಹಾರ ಸೇವಿಸುತ್ತಾರೆ. ಆದರೆ ಬಡ ಸಮುದಾಯದ ಮಕ್ಕಳಿಗೆ ಬೆಳಗಿನ ಉಪಹಾರ ಕೊಡುವ ಯೋಜನೆಯಿಂದ ಬಹುತೇಕ ಮಕ್ಕಳು ಎರಡು ಬಾರಿ ಉಪಹಾರ ಸೇವಿಸುವ ಸಾಧ್ಯತೆ ಇದೆ ಎನ್ನುವ ಕಾಳಜಿ ವ್ಯಕ್ತವಾಗಿದೆ. ಮನೆಯಲ್ಲಿ ಉಪಹಾರ ಸೇವಿಸಿದ ನಂತರ ಮತ್ತೆ ಶಾಲೆಯಲ್ಲೂ ಸೇವಿಸುವುದು ಬೊಜ್ಜಿಗೆ ಕಾರಣವಾಗಬಹುದು ಎಂದು ಹೇಳಲಾಗಿತ್ತು.
ಹೊಸ ಅಧ್ಯಯನವೊಂದು ಹೇಳಿರುವ ಪ್ರಕಾರ ಎರಡು ಬಾರಿ ಉಪಹಾರ ಸೇವಿಸುವ ಮಕ್ಕಳಿಗಿಂತ ಹೆಚ್ಚಾಗಿ ಉಪಹಾರವನ್ನೇ ಸೇವಿಸದೆ ಇರುವ ಮಕ್ಕಳಿಗೆ ಬೊಜ್ಜು ಬರುವ ಸಾಧ್ಯತೆ ಅಧಿಕವಾಗಿದೆ. ಅಂದರೆ ಉಪಹಾರ ಸೇವಿಸದೆ ಇರುವ ಬದಲಾಗಿ ಎರಡು ಬಾರಿ ಅಥವಾ ಒಂದು ಬಾರಿ ಸೇವಿಸುವುದೇ ಆರೋಗ್ಯಕಾರಿ ಎನ್ನಲಾಗಿದೆ. ಕನೆಕ್ಟಿಕಟ್ ರಡ್ ಸೆಂಟರ್ ವಿಶ್ವವಿದ್ಯಾಲಯದ ಬೊಜ್ಜಿಗೆ ಸಂಬಂಧಿಸಿದ ಕೇಂದ್ರವು ಈ ಅಧ್ಯಯನ ಮಾಡಿದೆ.
ವಿಶ್ಲೇಷಕರ ಪ್ರಕಾರ ಶಾಲೆಗಳಲ್ಲಿ ಉಚಿತ ಊಟ, ಇತ್ತೀಚೆಗೆ ಆರಂಭಿಸಲಾಗಿರುವ ಉಪಹಾರಗಳು ಅಮೆರಿಕದ ಮಕ್ಕಳಲ್ಲಿ ಹಸಿವನ್ನು ನೀಗಿಸುವ ಉತ್ತಮ ಉಪಾಯವಾಗಿದೆ. 2012ರ ಅಂಕಿ ಅಂಶಗಳ ಪ್ರಕಾರ ಸುಮಾರು 4 ದಶಲಕ್ಷ ಅಮೆರಿಕದ ಮನೆಗಳು ತಮ್ಮ ಮಕ್ಕಳಿಗೆ ಪೌಷ್ಠಿಕಾಂಶದ ಆಹಾರ ಒದಗಿಸಲು ವಿಫಲರಾಗಿದ್ದಾರೆ. ಬಹುತೇಕ ಅಮೆರಿಕದ ಸಾರ್ವಜನಿಕ ಶಾಲೆಗಳು ಬೆಳಗಿನ ಉಪಹಾರ ಯೋಜನೆಯ ಭಾಗಿಗಳಾಗಿವೆ.
2014-15ರ ಅವಧಿಯಲ್ಲಿ ಅಮೆರಿಕದಲ್ಲಿ 12 ದಶಲಕ್ಷ್ಷ ಮಕ್ಕಳು ಅಗ್ಗದ ಅಥವಾ ಉಚಿತ ಊಟ ಪಡೆದಿದ್ದಾರೆ. ಸಬ್ಸಿಡಿ ಊಟ ಪಡೆದ 100 ಮಕ್ಕಳಲ್ಲಿ ಕೇವಲ 54 ಮಂದಿ ಮಾತ್ರ ಸಬ್ಸಿಡಿ ಉಪಹಾರ ಪಡೆದಿದ್ದಾರೆ. ಕೆಲವು ರಾಜ್ಯಗಳಲ್ಲಿ ಉಪಹಾರ ಪಡೆದ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.