ಆಟದ ಮೈದಾನದಲ್ಲಿ ಬಿಜೆಪಿಗರಿಂದ ಕ್ಲಬ್ ನಿರ್ಮಾಣ
ಬೆಂಗಳೂರು, ಮಾ.22: ಕೆಲವು ಪ್ರಭಾವಿ ರಾಜಕಾರಣಿಗಳ ಕೈವಾಡದಿಂದ ಹುಬ್ಬಳ್ಳಿ ನಗರದಲ್ಲಿರುವ ಹುಬ್ಬಳ್ಳಿ ಆಟದ ಮೈದಾನ(ಜಮ್‌ಖಾನ ಮೈದಾನ)ದಲ್ಲಿ ರಿಕ್ರಿಯೇಷನ್ ಕ್ಲಬ್ ನಿರ್ಮಾಣ ಮಾಡಲಾಗಿದೆ. ಹಾಗಾಗಿ ಸರಕಾರ ಮಧ್ಯಪ್ರವೇಶ ಮಾಡಿ ಇದನ್ನು ಕೆಡವಿ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಹುಬ್ಬಳ್ಳಿ ಸ್ಪೋರ್ಟ್ಸ್ ಗ್ರೌಂಡ್ ಬಚಾವೋ ಸಮಿತಿ ಗೌರವಾಧ್ಯಕ್ಷ ಪಾಟೀಲ ಪುಟ್ಟಪ್ಪ ಆಗ್ರಹಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಮಧ್ಯಭಾಗದಲ್ಲಿರುವ ಈ ಸ್ಥಳವನ್ನು ಬ್ರಿಟೀಷರ ಕಾಲದಲ್ಲಿ ಸಾರ್ವಜನಿಕರ ಉಪಯೋಗಕ್ಕೆಂದು ಸೀಮಿತ ಮಾಡಿ, ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಇನ್ನಿತರೆ ಸೀಮಿತ ಕ್ರೀಡೆಗಳಿಗೆ ಮಾತ್ರ ಮೈದಾನವನ್ನು ಮೀಸಲಿರಿಸಲಾಗಿತ್ತು. ಆದರೆ ಕೆಲವು ಪ್ರಭಾವಿ ರಾಜಕಾರಣಿಗಳ ಕಿತಾಪತಿಯಿಂದ ಇಂದು ಇಲ್ಲಿ ಕ್ಲಬ್ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರವದಿ ಸಂದರ್ಭ 2008 ರಲ್ಲಿ ಜಗದೀಶ್ ಶೆಟ್ಟರ್ ಕಂದಾಯ ಮಂತ್ರಿಯಾಗಿದ್ದ ಅವಧಿಯಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಲ್ಲಿನ ಸ್ಥಳೀಯ ದಾರವಾಡ ಕಮೀಷನರ್ ದರ್ಪಣ್ ಜೈನ್ ಮುಖಾಂತರ ಅನುಮತಿಯನ್ನು ಪಡೆದು ಮೈದಾನದಲ್ಲಿ ಅಕ್ರಮವಾಗಿ ಕ್ಲಬ್‌ಗೆ ಅವಕಾಶ ಮಾಡಿಕೊಡಲಾಯಿತು ಎಂದರು.
ರಿಕ್ರಿಯೇಷನ್ ಕ್ಲಬ್‌ನಲ್ಲಿ ಪ್ರಮುಖವಾಗಿ ವಿರೋಧಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮಾಜಿ ಕೇಂದ್ರ ಸಚಿವ ಅನಂತಕುಮಾರ್, ಬಿಜೆಪಿಯ ಮಾಜಿ ಮೇಯರ್ ವೀರಣ್ಣ ಸವಡಿ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಹಿ ಸೇರಿದಂತೆ ಇನ್ನೂ ಅನೇಕ ಪ್ರಭಾವಿ ರಾಜಕಾರಣಿಗಳು ಮತ್ತು ಅವರ ಸಂಬಂಧಿಕರು ಇದರಲ್ಲಿ ಭಾಗಿಯಾಗಿದ್ದಾರೆ. ಇವರು ತಮ್ಮ ಅಧಿಕಾರ ಬಳಸಿ ಅಕ್ರಮವಾಗಿ ಕ್ಲಬ್ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದರು.
ದಿನನಿತ್ಯ ಸಾರ್ವಜನಿಕರಿಂದ ತುಂಬಿರುತ್ತಿದ್ದ ಮೈದಾನವಿಂದು ಪೋಲಿಗಳ ತಾಣವಾಗಿದೆ. ಮೈದಾನದಲ್ಲಿ ಕ್ಲಬ್ ನಿರ್ಮಾಣವಾದ ಪರಿಣಾಮ ಪಕ್ಕದಲ್ಲಿ ಬಾರ್, ಮಸಾಜ್ ಸೆಂಟರ್ ಮತ್ತು ಸ್ಪಾಗಳನ್ನು ತೆರೆಯಲಾಗಿದೆ ಎಂದು ಹೇಳಿದರು.
ಸಾರ್ವಜನಿಕರಿಗೆ ಮೀಸಲಾಗಿರುವ ಮೈದಾನವನ್ನು ಸಾರ್ವಜನಿಕರಿಗೆ ಮಾತ್ರ ಮೀಸಲಿಡಬೇಕು. ಸರಕಾರ ಮಧ್ಯಪ್ರವೇಶ ಮಾಡಿ ಅಲ್ಲಿನ ಕ್ಲಬ್ ಕೆಡವಿ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಪ್ರಧಾನಿ ಭೇಟಿ: ಬಿಜೆಪಿ ನಾಯಕರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಮೈದಾನ ಉಳಿಸಲು ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಲು ಎಪ್ರಿಲ್‌ನಲ್ಲಿ ಪ್ರ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆಂದು ಅವರು ಹೇಳಿದರು.