‘ವೆಂಕಟ್ಟಪ್ಪ ಆರ್ಟ್ ಗ್ಯಾಲರಿ’ ಖಾಸಗೀಕರಣ ಇಲ್ಲ
ಬೆಂಗಳೂರು, ಮಾ. 22: ನಗರದ ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡುವುದಿಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ಖಾಸಗಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಕಲಾವಿದರಿಗೆ ಆತಂಕ ಬೇಡ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಸಿಎಸ್‌ಆರ್) ನಿಧಿಯಲ್ಲಿ ಗ್ಯಾಲರಿಗೆ ಮೂಲ ಸೌಲಭ್ಯ ಕಲ್ಪಿಸುವ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಲಾವಿದರಲ್ಲಿ ಅನಗತ್ಯ ಸಂಶಯ ಸೃಷ್ಟಿಯಾಗಿದ್ದು, ವೆಂಕಟ್ಟಪ್ಪ ಆರ್ಟ್ ಗ್ಯಾಲರಿಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡುವುದಿಲ್ಲ. ಗುತ್ತಿಗೆಯನ್ನು ನೀಡಿಲ್ಲ, ಅಭಿವೃದ್ಧಿ ದೃಷ್ಟಿಯಿಂದ ‘ದತ್ತು’ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ, ಗ್ಯಾಲರಿಯ ಅಭಿವೃದ್ಧಿ ದೃಷ್ಟಿಯಿಂದ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇಲ್ಲಿ ಸಂಗ್ರಹಿಸುವ ಶುಲ್ಕವನ್ನು ಅಲ್ಲಿನ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗುವುದು. ಈ ಸಂಬಂಧ ಕಲಾವಿದರು ಸೇರಿದಂತೆ ಎಲ್ಲರ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಜಗದೀಶ್ ಶೆಟ್ಟರ್, ಆರ್ಟ್ ಗ್ಯಾಲರಿಯನ್ನು ಖಾಸಗೀಕರಣ ಸಲ್ಲ. ರಾಜ್ಯ ಸರಕಾರದ ಸುಪರ್ದಿಯಲ್ಲಿ ಗ್ಯಾಲರಿ ಇರಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಖಾಸಗಿಯವರಿಗೆ ಗ್ಯಾಲರಿ ಅಭಿವೃದ್ಧಿಗೆ ಗುತ್ತಿಗೆ ನೀಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈ ಸಂದರ್ಭದಲ್ಲಿ ಸದನದಲ್ಲಿ ಕೆಲ ಕಾಲ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ಗದ್ದಲ-ಕೋಲಾಹಲವೂ ಸೃಷ್ಟಿಯಾಯಿತು. ಆ ಬಳಿಕ ಸ್ಪೀಕರ್ ಕಾಗೋಡು ತಿಮ್ಮಪ್ಪ ಸ್ಪಷ್ಟನೆ ನೀಡಿದ ಹಿನ್ನೆಲೆಯಲ್ಲಿ ಕಾವೇರಿದ್ದ ಪರಿಸ್ಥಿತಿ ತಿಳಿಯಾಯಿತು.
ವೆಂಕಟಪ್ಪ ಆರ್ಟ್ ಗ್ಯಾಲರಿ ದತ್ತು ನೀಡದಂತೆ ಮನವಿ
ಬೆಂಗಳೂರು, ಮಾ.22: ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ತಸ್ವೀರ್ ಫೌಂಡೇಷನ್‌ಗೆ ದತ್ತು ನೀಡಲು ಒಡಂಬಡಿಕೆ ಮಾಡಿಕೊಂಡಿರುವುದನ್ನು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆಯವರು ಪುನರ್ ಪರಿಶೀಲಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಮನವಿ ಮಾಡಿದ್ದಾರೆ.
ವೆಂಕಟಪ್ಪ ಆರ್ಟ್ ಗ್ಯಾಲರಿಯು ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿದ್ದು, ಕಲಾವಿದರಿಗೆ ನೆಚ್ಚಿನ ಸ್ಥಳವಾಗಿದೆ. ಇದನ್ನು ತಸ್ವೀರ್ ಫೌಂಡೇಷನ್‌ಗೆ ದತ್ತು ನೀಡುವ ಮೂಲಕ ವಾಣಿಜ್ಯೀಕರಣ ಮಾಡಲಾಗುತ್ತದೆ. ಚಿತ್ರಕಲಾವಿದರಿಗೆ ಮುಕ್ತವಾಗಿರಬೇಕಾದ ಸ್ಥಳವನ್ನು ವಾಣಿಜ್ಯೀಕರಣಗೊಳಿಸುವುದು ಸೂಕ್ತವಲ್ಲ ಎಂದು ತಿಳಿಸಿದರು. ಕರ್ನಾಟಕ ಚಿತ್ರ ಕಲಾವಿದರ ಹಿತಾಸಕ್ತಿಯನ್ನು ಕಾಪಾಡಿ, ಅವರನ್ನು ಪ್ರೋತ್ಸಾಹಿಸುವುದು ಸರಕಾರದ ಕರ್ತವ್ಯವಾಗಿದೆ. ಹೀಗಾಗಿ ಚಿತ್ರಕಲಾವಿದರ ನೆಚ್ಚಿನ ತಾಣವಾದ ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ತಸ್ವೀರ್ ಫೌಂಡೇಶನ್‌ಗೆ ದತ್ತು ಕೊಡುವಂತಹ ಒಡಂಬಡಿಕೆಯನ್ನು ಕೈಬಿಡಬೇಕು ಎಂದು ಸಚಿವೆ ಉಾಶ್ರೀ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.