ಈ ಬಿಸಿ ಪೇಯ ಕುಡಿದರೆ ನಿಮಗೆ ಬೇರೆ ನೆನಪಿನ ಟಾನಿಕ್ ಬೇಡ!
ಕೋಕೊ ಬೀಜದ ಪುಡಿಯ ಬಿಸಿ ರುಚಿಕರ ಪೇಯ ಯಾರಿಗೆ ಇಷ್ಟವಿಲ್ಲ? ಆ ಬಿಸಿ ಪೇಯದ ಸ್ವಾದ ರುಚಿಕರ-ಆಹ್ಲಾದಕರ! ಆದರೆ ಆರೋಗ್ಯಕ್ಕೆ ಕೂಡಾ ಅದು ಪೂರಕ ಎಂಬ ಅಂಶ ಗೊತ್ತಿರಲಿಲ್ಲ ಅಲ್ಲವೇ?
ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಅಧ್ಯಯನವೊಂದು ಇದನ್ನು ದೃಢಪಡಿಸಿದೆ. ಪ್ರತಿ ದಿನ ಕೆಲ ಕಪ್ ಬಿಸಿ ಕೊಕೊ ಪೇಯ ಕುಡಿದರೆ ವೃದ್ಧಾಪ್ಯದ ಮರೆವು ಮಾಯವಾಗುತ್ತದೆ. ನಿಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ.
70 ವರ್ಷ ಮೀರಿದ 60 ಮಂದಿಗೆ ಸತತ 30 ದಿನ ತಲಾ 2 ಕಪ್ ಕೋಕೊ ಪೇಯ ನೀಡಿ ಫಲಿತಾಂಶ ಅಧ್ಯಯನ ಮಾಡಲಾಯಿತು. ಇದು ಬಾಳ ಮುಸ್ಸಂಜೆಯಲ್ಲಿದ್ದ ಎಲ್ಲರ ರಕ್ತ ಚಲನೆ ಚುರುಕುಗೊಳ್ಳಲು, ನರಮಂಡಲ ಸಕ್ರಿಯವಾಗಲು ಕಾರಣವಾಗಿತ್ತು.
30 ದಿನ ಮೊದಲು ಇವರ ವೈದ್ಯಕೀಯ ತಪಾಸಣೆ ನಡೆಸಿದಾಗ ಮೂರನೇ ಒಂದರಷ್ಟು ಮಂದಿಗೆ ನರಮಂಡಲ ಸಮಸ್ಯೆ ಇದ್ದರೆ, 18 ಮಂದಿಯ ಮೆದುಳಿನಲ್ಲಿ ಬಿಳಿ ವಸ್ತು ಕೊರತೆ ಇದ್ದು, ಮೆದುಳಿಗೆ ರಕ್ತಪರಿಚಲನೆ ಕಡಿಮೆಯಾಗಿತ್ತು.
ಅಧ್ಯಯನಕ್ಕೆ ಮೊದಲು ಒಂದು ಸ್ಮರಣಶಕ್ತಿ ಪರೀಕ್ಷೆಯನ್ನು 167 ಸೆಕೆಂಡ್‌ಗಳಲ್ಲಿ ಪೂರೈಸಿದ್ದ ವೃದ್ಧರು, ಒಂದು ತಿಂಗಳ ಬಳಿಕ 116 ಸೆಕೆಂಡ್‌ನಲ್ಲಿ ಪೂರೈಸಲು ಸಫಲರಾದರು. ಅದರಲ್ಲೂ ಕಡಿಮೆ ಸಕ್ಕರೆ ಅಂಶ ಹಾಗೂ ಆಂಟಿಯೋಕ್ಸಿಡೆಂಟ್ ಅಧಿಕ ಇರುವ ಕಡುಬಣ್ಣದ ಸಾವಯವ ಚಾಕಲೇಟ್‌ಗಳಿಂದ ಪ್ರಯೋಜನ ಅತ್ಯಧಿಕ.