ಮೈ ಷುಗರ್ ಪುನರಾರಂಭಕ್ಕೆ ಆಪ್ ಒತ್ತಾಯ
ಬೆಂಗಳೂರು,ಮಾ.23: ಮಂಡ್ಯದ ಮೈ ಷುಗರ್ ಕಾರ್ಖಾನೆಯನ್ನು ಮುಚ್ಚುವ ಮೂಲಕ ಅದನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುವ ಹುನ್ನಾರ ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಸಹಸಂಚಾಲಕ ರವಿ ಕೃಷ್ಣಾರೆಡ್ಡಿ, ಈ ಕಾರ್ಖಾನೆಯನ್ನು ಅವಲಂಬಿಸಿ ಹದಿನೈದು ಸಾವಿರಕ್ಕೂ ಹೆಚ್ಚು ಕಬ್ಬು ಉತ್ಪಾದಕರು, ಸಾವಿರಾರು ಕೃಷಿಕರು ಮತ್ತು ಕಾರ್ಮಿಕರು ಇಂದು ಬೀದಿ ಪಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೂಡಲೇ ಸರಕಾರ ಮಧ್ಯ ಪ್ರವೇಶ ಮಾಡಿ ಕಾರ್ಖಾನೆಯ ಮರು ಸ್ಥಾಪನೆಗೆ ಮುಂದಾಗಬೇಕು ಎಂದು ಹೇಳಿದರು.
ಕಾರ್ಖಾನೆಯನ್ನು ನಡೆಸಲು ಜವಾಬ್ದಾರಿ ಹೊಂದಿರುವ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಗರ್ಗ್ ಅಧಿಕಾರ ವಹಿಸಿಕೊಂಡು 2 ತಿಂಗಳು ಕಳೆದರೂ ಶೇ.1 ರಷ್ಟು ಸಕಾರಾತ್ಮಕ ಬದಲಾವಣೆಯೂ ಆಗಿಲ್ಲ. ರೈತರ, ಕಾರ್ಮಿಕರ ಸಮಸ್ಯೆಗಳಿಗೂ ಸ್ವಂದಿಸುತ್ತಿಲ್ಲ. ಯಾರನ್ನೂ ಭೇಟಿಯಾಗುವುದಕ್ಕೆ ಮುಂದಾಗುತ್ತಿಲ್ಲ. ಹಾಗಾಗಿ ವ್ಯವಸ್ಥಾಪಕ ನಿರ್ದೇಶಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಂಡ್ಯ ಜಿಲ್ಲೆಯೊಂದರಲ್ಲಿಯೇ ನೂರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಸರಕಾರ ಇತ್ತ ಗಮನ ಹರಿಸುತ್ತಿಲ್ಲ. ಈ ಆತ್ಮಹತ್ಯೆಗಳಿಗೆ ಸರಕಾರವೇ ನೇರ ಹೊಣೆ ಎಂದು ದೂರಿದರು.