ಜನತಾದಳ ಮುಖಂಡನಿಂದ ಆಸ್ತಿ ಕಬಳಿಕೆ: ಅಲ್ಲಾಬಕ್ಷ್ ಆರೋಪ
ಬೆಂಗಳೂರು, ಮಾ.23: ಹೆಣ್ಣೂರು ಬಂಡೆಯಲ್ಲಿ ಯುವ ಜನತಾದಳ ಮುಖಂಡ ಎಚ್.ಎಂ.ರಮೇಶ್ ಎಂಬವರು ನ್ಯಾಯಾಲಯದ ತೀರ್ಪನ್ನು ಕಡೆಗಣಿಸಿ ಅಕ್ರಮ ಮನೆ ನಿರ್ಮಾಣ ಮಾಡಿದ್ದಾರೆ ಎಂದು ಸಮಾಜ ಸೇವಕ ಅಲ್ಲಾಬಕ್ಷ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 5-6 ವರ್ಷಗಳ ಹಿಂದೆ ಇದೇ ಗ್ರಾಮದ ನಿವಾಸಿಗಳಾದ ಲಕ್ಷ್ಮಮ್ಮ, ಕೆಂಪಮ್ಮ ಹಾಗೂ ಮುನೇಗೌಡ ಕುಟುಂಬಗಳಿಗೆ ಸೇರಿದ 3000x3000 ಚದರಡಿ ಆಸ್ತಿಯಲ್ಲಿ 2 ನಿವೇಶನಗಳನ್ನು ಕೊಂಡುಕೊಳ್ಳಲಾಗಿತ್ತು. ಆದರೆ ಈ ಜಾಗಕ್ಕೆ ರಮೇಶ್ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿದ್ದಾರೆ ಎಂದು ದೂರಿದರು. ಈ ಸಂಬಂಧ ಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದರೂ ಸಹ ಅವರು ಸ್ಥಳೀಯ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ನಮಗೆ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡುತ್ತಿದ್ದಾರೆ. ಹಾಗೂ ರಮೇಶ್ ನಮ್ಮ ಮೇಲೆ ಗೂಂಡಾಗಿರಿ ನಡೆಸುತ್ತಿದ್ದು ನಾವು ಆತಂಕ ಸ್ಥಿತಿಯಲ್ಲಿ ಜೀವನ ನಡೆಸಬೇಕಾಗಿದೆ ಎಂದು ಹೇಳಿದರು.
ಆದುದರಿಂದ ಸರಕಾರ ಮಧ್ಯಪ್ರವೇಶ ಮಾಡಿ, ರಮೇಶ್ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಬೇಕು. ನಮ್ಮ ಆಸ್ತಿಯನ್ನು ಉಳಿಸಿಕೊಡಬೇಕು ಎಂದು ಅವರು ಕೋರಿದರು.