ಮನೆಗೆ ನುಗ್ಗಿದ ವೈದ್ಯನ ಕಾರು: ವ್ಯಕ್ತಿಯ ಸಾವು
Update: 2016-03-27 23:34 IST
ಬೆಂಗಳೂರು, ಮಾ. 27: ಮದ್ಯದ ಅಮಲಿನಲ್ಲಿ ವೈದ್ಯನೊಬ್ಬ ಶರವೇಗದಲ್ಲಿ ಕಾರು ಚಲಾಯಿಸಿ ಮನೆಯೊಂದಕ್ಕೆ ಗುದ್ದಿದ ಪರಿಣಾಮ ಮನೆಯಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಆತನ ಪತ್ನಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಇಲ್ಲಿನ ಮಾಧವನ್ ಪಾರ್ಕ್ ಬಳಿಯ ಮನೆಯೊಂದರ ನಿವಾಸಿ ರಿಝ್ವನ್ ಅಹ್ಮದ್(55)ಎಂದು ಗುರುತಿಸಲಾಗಿದೆ. ರವಿವಾರ ಮಧ್ಯಾಹ್ನ ಮದ್ಯದ ಅಮಲಿನಲ್ಲಿ ಐಷರಾಮಿ ಕಾರು ಚಲಾಯಿಸುತ್ತಿದ್ದ ಕ್ಲಿನಿಕ್‌ನ ವೈದ್ಯ ಡಾ.ಶಂಕರ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅತಿಯಾಗಿ ಮದ್ಯ ಸೇವನೆ ಮಾಡಿಕೊಂಡು ಕಾರು ಚಾಲನೆ ಮಾಡಿರುವ ಕಾರಣಕ್ಕಾಗಿಯೇ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದ್ದು, ಘಟನೆಯಲ್ಲಿ ರಿಝ್ವಿನ್ ಪತ್ನಿಗೂ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬ ಮೂಲಗಳು ಹೇಳಿವೆ.