ಬೆಂಗಳೂರು : ರಾಜ್ಯ ಸಚಿವ ಸಂಪುಟ ಪುನರ್ ರಚನೆಗೆ ಕಾಂಗ್ರೆಸ್‌ನ ಹಲವು ಶಾಸಕರು ಆಗ್ರಹ

Update: 2016-03-30 14:11 GMT

ಬೆಂಗಳೂರು, ಮಾ.30: ಹಿರಿಯ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇಂದು ರಾತ್ರಿ  ಸುಮಾರು 25ಕ್ಕೂ ಹೆಚ್ಚು ಶಾಸಕರು ಸಭೆ ಸೇರಿ, ಸಂಪುಟ ವಿಸ್ತರಣೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ಹಾಲಿ ಸಂಪುಟದಲ್ಲಿರುವ ಕನಿಷ್ಟ   15 ಸಚಿವರನ್ನು ಕೈಬಿಡಲು ಆಗ್ರಹಿಸಿದ್ದಾರೆ. ಜತೆಗೆ ದೆಹಲಿಗೆ ತೆರಳಿ ಹೈಕಮಾಂಡ್‌ಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಆದರೆ ಇದು ಸಿದ್ದರಾಮಯ್ಯ ಅವರ ವಿರುದ್ಧದ ಸಭೆ ಅಲ್ಲ ಎಂದು ಈ ಶಾಸಕರು ಸ್ಪಷ್ಟಪಡಿಸಿದ್ದಾರೆ.
ನಗರದ ಖಾಸಗಿ ಕ್ಲಬ್ ಒಂದರಲ್ಲಿದೀ ಶಾಸಕರು ಸಭೆ ಸೇರಿದ್ದರು. ಸಂಪುಟ ಪುನರ್ ರಚನೆ ಮಾಡದೇ ಇದ್ದರೆ ಪಕ್ಷಕ್ಕೆ ಮಾರಕವಾಗಲಿದೆ. ಈಗಾಗಲೇ ಅಧಿಕಾರದಲ್ಲಿದ್ದೂ ಸರಿಯಾಗಿ ಕೆಲಸ ಮಾಡದ ಸುಮಾರು 15 ಮಂದಿ ಸಚಿವರನ್ನು ಕೈಬಿಡಲು ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಲು ನಿಧರಿಸಲಾಗಿದೆ.
 ಎಸ್.ಟಿ. ಸೋಮಶೇಖರ್, ಮಾಲಿಕಯ್ಯ ಗುತ್ತೇದಾರ್ ಮುಂದಾಳತ್ವದಲ್ಲಿ ಈ ಸಭೆ ನಡೆಯಿತು. ಸಂಪುಟದಿಂದ ಕೈಬಿಡುವ ಸಚಿವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸಿ.   ಎರಡು ಮೂರು ಬಾರಿ ಗೆದ್ದ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವಂತೆ ಕೋರಿದ್ದಾರೆ.
ಇಷ್ಟು ದಿನ ಸಂಪುಟ ಪುನರ್ ರಚನೆಗೆ ಒಂದಿಲ್ಲೊಂದು ಕಾರಣ ಹೇಳಿಕೊಂಡು ಬರಲಾಯಿತು. ಆದರೆ ಅಂತಿಮವಾಗಿ ಬಜೆಟ್ ನಂತರ ಸಂಪುಟ ಪುನರ್ ರಚನೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿದ್ದರು. ಆದರೆ ಈಬಾರಿ ಕೂಡ ಏನಾದರೂ ನೆಪ ಹೇಳಿ ಸಂಪುಟ ಪುನರ್ ರಚನೆ ಮುಂದೂಡಿದರೆ ಇದು ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಮಾರಕವಾಗಲಿದೆ. ಹೀಗಾಗಿ ತಕ್ಷಣ ಸಂಪುಟ ಪುನರ್ ರಚನೆ ಮಾಡುವುದು ಸೂಕ್ತ ಎಂದು ಮಾಲಿಕಯ್ಯ ಗುತ್ತೇದಾರ್ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವುದು ಈ ಸಭೆಯ ಉದ್ದೇಶವಲ್ಲ. ಆದರೆ ಪಕ್ಷಕ್ಕಾಗಿ ದುಡಿದ ಹಿರಿಯ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಗಿಟ್ಟಿಸಬೇಕು. ಈಗಾಗಲೇ ಸಿಎಂ ಆಪ್ತರು ಸಂಪುಟ ಸೇರಿಯಾಗಿದೆ. ಈಗ ಮತ್ತೆ ಅಂತವರಿಗೇ ಸ್ಥಾನ ನೀಡಬಾರದು ಎಂಬ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ. ಜೊತೆಗೆ ಈ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳನ್ನು ಪಕ್ಷದ ಹೈಕಮಾಂಡ್‌ಗೆ ರವಾನಿಸಲು ಎಲ್ಲ ಶಾಸಕರು ದೆಹಲಿಗೆ ತೆರಳುವ ಬಗ್ಗೆ ಕೂಡ ಚಿಂತನೆ ನಡೆಸಲಾಗುತ್ತಿದೆ. ಆದರೆ ಈ ಸಭೆಯಲ್ಲಿ ಶಾಸಕರು ಯಾವ ರೀತಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದು ಕಾಂಗ್ರೆಸ್ ಪಾಳಯ ಮಾತ್ರವಲ್ಲ ಇಡೀ ರಾಜಕೀಯ ರಂಗದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News