ಬೆಂಗಳೂರು : ಕಳಸಾ ಬಂಡೂರಿ ಯೋಜನೆ ವಿವಾದ ಬಗೆಹರಿಸಲು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

Update: 2016-03-30 14:55 GMT

ಬೆಂಗಳೂರು, ಮಾ.30: ಕಳಸಾ ಬಂಡೂರಿ ಯೋಜನೆ ವಿವಾದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸಬೇಕೆಂದು ಒತ್ತಾಯಿಸಿ ಬಿಜೆಪಿಯ ತೀವ್ರ ವಿರೋಧದ ನಡುವೆ ವಿಧಾನಸಭೆಯಲ್ಲಿಂದು ನಿರ್ಣಯ ಅಂಗೀಕರಿಸಲಾಯಿತು. ಈ ಮೂಲಕ ಪ್ರಧಾನಿ ಅವರಿಗೆ ಮುಜುಗರ ಉಂಟಾದರೆ, ಬಿಜೆಪಿ ಸದಸ್ಯರು ಇಕ್ಕಟ್ಟಿಗೆ ಸಿಲುಕಿದರು. ಬಿಜೆಪಿ ಸದಸ್ಯರು ಇತ್ತ ಸಭಾತ್ಯಾಗ ಮಾಡಲೂ ಆಗದೇ, ನಿರ್ಣಯವನ್ನು ಬೆಂಬಲಿಸಲೂ ಆಗದೇ ತೀವ್ರ ತಾಕಲಾಟಕ್ಕೆ ಸಿಲುಕಿದ ಪ್ರಸಂಗವೂ ಜರುಗಿತು. ಬಿಜೆಪಿ ಸದಸ್ಯರ ಪ್ರತಿಭಟನೆಯ ನಡುವೆ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ನಿರ್ಣಯ ಮಂಡಿಸಿ, ಪ್ರಧಾನಿ ಮದ್ಯ ಪ್ರವೇಶ ಮಾಡಬೇಕು. ಕರ್ನಾಟಕ, ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ಕರೆಯಬೇಕು. ಪ್ರಧಾನಿ ಮದ್ಯಸ್ಥಿಕೆಯಲ್ಲೇ ಜಲ ಸಮಸ್ಯೆ ಬಗೆಹರಿಸಬೇಕು ಎಂದು ಕೋರಿದರು. ಆಗ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕ್ರಿಯಾ ಲೋಪ ಎತ್ತಿ ನ್ಯಾಯಾಧೀಕರಣದಲ್ಲಿ ಇರುವ ವಿಚಾರಗಳನ್ನು ಸದನದಲ್ಲಿ ನಿರ್ಣಯ ಮಂಡಿಸಬಾರದು ಎಂದು ನಾವೇ ಮಾಡಿಕೊಂಡಿರುವ ನಿಯಮಗಳನ್ನು ಉಲ್ಲಂಘಿಸಬಾರದು ಎಂದು ಹೇಳಿದಾಗ, ಇದಕ್ಕೆ ಸಚಿವ ಎಚ್.ಕೆ. ಪಾಟೀಲ್ ಉತ್ತರಿಸಿ ಗಡಿ, ನೀರು, ಭಾಷೆ ವಿಚಾರದಲ್ಲಿ ಹಲವಾರು ಭಾರಿ, ಹಲವಾರು ರಾಜ್ಯಗಳಲ್ಲಿ ಇಂತಹದ್ದೇ ನಿರ್ಣಯಗಳನ್ನು ಮಂಡಿಸಿದ ನಿದರ್ಶನಗಳಿವೆ. ಹಾಗಾಗಿ ಈ ನಿರ್ಣಯ ಮಂಡಿಸಲು ಅಡ್ಡಿಯಿಲ್ಲ ಎಂದರು. ಇದಕ್ಕೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಧನಿಗೂಡಿಸಿ ಅಂತಹದ್ದೇನು ಆಗುವುದಿಲ್ಲ ಎಂದರು.

ಆಗ ಸದನದಲ್ಲಿ ಬಾರೀ ಕೋಲಾಹಲ, ಗದ್ದಲದ ವಾತಾವರಣ ನಿರ್ಮಾಣವಾಯಿತು. ಪ್ರತಿಭಟನೆ ನಡುವೆ ನಿರ್ಣಯವನ್ನು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಧ್ವನಿಮತಕ್ಕೆ ಹಾಕಿದರು. ಬಿಜೆಪಿ ಸದಸ್ಯರು ನಿರ್ಣಯ ವಿರೋಧಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಒಂದಾಗಿ ನಿರ್ಣಯವನ್ನು ಒಕ್ಕೊರಲಿನಿಂದ ಬೆಂಬಲಿಸಿದರು. ಮಹಾದಾಯಿ ನದಿ ನೀರಿನ ಬಳಕೆ ಬಗ್ಗೆ ರಾಜ್ಯದಲ್ಲಿ ರೈತರು ಸುಮಾರು 250ಕ್ಕೂ ಹೆಚ್ಚು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಜೆಡಿಎಸ್ ಶಾಸಕ ಕೋನರೆಡ್ಡಿ ಎರಡು ದಿನಗಳ ಹಿಂದೆ ನಿಯಮ 69ರ ಅಡಿ ಚರ್ಚೆ ನಡೆಸಿ ಸರ್ಕಾರದ ಗಮನಕ್ಕೆ ತಂದಿದ್ದರು. ಜೊತೆಗೆ ಈ ಸಮಸ್ಯೆ ಬಗೆಹರಿಸಲು ಸರ್ಕಾರವನ್ನು ಆಗ್ರಹಿಸಿದ್ದರು. ಇದಕ್ಕೆ ಸರ್ಕಾರ ಸರ್ವಾನುಮತದ ನಿರ್ಣಯ ಕೈಗೊಂಡು ಇದನ್ನು ಸದನದಲ್ಲಿ ಮಂಡಿಸಿತು. ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತು. ಈ ವಿವಾದ ನ್ಯಾಯಾಧೀಕರಣದಲ್ಲಿ ವಿಚಾರಣೇ ಹಂತದಲ್ಲಿದೆ. ಹೀಗಿರುವಾಗ ನಿರ್ಣಯ ಕೈಗೊಳ್ಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಬಿಜೆಪಿ ನಾಯಕರನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು, ಸಚಿವರು ತೀವ್ರ ತರಾಟೆ ತೆಗೆದುಕೊಂಡರು. ಬಿಜೆಪಿ ನಾಯಕರು ರಾಜ್ಯದ ಕಾಯುವ ವಿಚಾರದಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇವರಿಗೆ ರಾಜ್ಯದ ಜನರ ಸಮಸ್ಯೆ ಮುಖ್ಯವಲ್ಲ. ಪ್ರಧಾನಿ ನರೇಂದ್ರ ಮೋದಿಗೆ ಮುಜುಗರ ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಹಂತದಲ್ಲಿ ಬಸವರಾಜ್ ಬೊಮ್ಮಾಯಿ, ಸಿ.ಟಿ.ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತಿತರರು ಪ್ರತಿಭಟಿಸಿದರು. ಇದಕ್ಕೆ ಕ್ರಿಯಾಲೋಪ ಎತ್ತಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ನಿರ್ಣಯ ಕೈಗೊಳ್ಳುವುದರಿಂದ ಯಾವುದೇ ತಪ್ಪಿಲ್ಲ ಎಂದರು. ಇದಕ್ಕೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಕೂಡ ಸಹಮತ ವ್ಯಕ್ತಪಡಿಸಿದರು.
ಬಿಜೆಪಿ ಎಷ್ಟೇ ಪ್ರತಿರೋಧ ಒಡ್ಡಿದರೂ ಸರ್ಕಾರ ಸೊಪ್ಪು ಹಾಕಲಿಲ್ಲ. ರಾಜ್ಯದ ರೈತರು, ಉತ್ತರ ಕರ್ನಾಟಕದ ಹಿತ ದೃಷ್ಟಿ ಮುಖ್ಯವಾಗಿದೆ. ನ್ಯಾಯಾಧೀಕರಣದಲ್ಲಿ ವಿಚಾರಣೆ ಇರುವಾಗಲೂ ಪ್ರಧಾನಿ ಸಭೆ ಕರೆದು ಸಮಸ್ಯೆ ಬಗೆಹರಿಸಬಹುದು. ಕರ್ನಾಟಕ ರಾಜ್ಯವು ಮಹಾದಾಯಿ ಕಣಿವೆಯಿಂದ ತಕ್ಷಣವೇ ಮಲಪ್ರಭ ಜಲಾಶಯಕ್ಕೆ ಯೋಜಿಸಿರುವಂತೆ ನೀರನ್ನು ತಿರುವುಗೊಳಿಸಲು ಅನುವಾಗುವಂತೆ ಪ್ರಧಾನಿಗಳೇ ಸಮಸ್ಯೆ ಬಗೆಹರಿಸಬೇಕು. ಈ ಒತ್ತಾಯವನ್ನು ಪ್ರಧಾನಿಗೆ ಮಾಡಲು ಸದನದಲ್ಲಿ ನಿರ್ಣಯ ಮಂಡಿಸಿ ಅಂಗೀಕರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News