ನಿಮ್ಮಿಂದ ರೈತರಿಗೆ ಅನುಕೂಲವಿಲ್ಲ ಎಂದ ಕೃಷ್ಣ ಭೈರೇಗೌಡ
ಯಲಹಂಕ, ಮಾ. 30: ಕೃಷಿ ಸಚಿವ ಕೃಷ್ಣ ಭೈರೇಗೌಡ ಕೃಷಿ ಪದವೀಧರ ವಿದ್ಯಾರ್ಥಿಗಳ ಬಗ್ಗೆ ಬೇಜವಾಬ್ದಾರಿತನದಿಂದ ಮಾತನಾಡಿರುವುದನ್ನು ಖಂಡಿಸಿ ಜಿಕೆವಿಕೆ ಆವರಣದ ಗಾಂ ಪ್ರತಿಮೆ ಎದುರು ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದರು.
ಕೃಷಿ ವಿಶ್ವವಿದ್ಯಾನಿಲಯದಲ್ಲಿ ಇರುವ ಸಮಸ್ಯೆಯನ್ನು ಬಗೆಹರಿಸಿ 5 ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಚಿವರಿಗೆ ಮನವಿ ಮಾಡಲು ಹೋದಾಗ ವಿದ್ಯಾರ್ಥಿಗಳಿಗೆ ಸರಕಾರಿ ಕೆಲಸ ನೀಡುವ ಬಗ್ಗೆ ಭರವಸೆ ನೀಡಿಲ್ಲ, ನಿಮ್ಮಿಂದ ರೈತರಿಗೆ ಅನುಕೂಲ ಇಲ್ಲ ಎಂದು ಹೇಳಿಕೆ ನೀಡಿರುವುದನ್ನು ವಿದ್ಯಾರ್ಥಿಗಳು ಖಂಡಿಸಿದ್ದಾರೆ.
ಸಚಿವರ ಈ ಹೇಳಿಕೆಯು ಕೃಷಿ ಪದವೀಧರರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಆದ್ದರಿಂದ ಸಚಿವರು ಕೃಷಿ ಪದವೀಧರ ವಿದ್ಯಾರ್ಥಿಗಳಿಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು. ಅಲ್ಲದೆ ಖಾಸಗಿ ಕೃಷಿ ವಿವಿಗಳಿಂದ ಶಿಕ್ಷಣ ಸಂಶೋಧನಾ ವಿಭಾಗಗಳಲ್ಲಿ ಸಮಸ್ಯೆಗಳು ಇದ್ದು, ಸರಕಾರ ಖಾಸಗಿ ವಿವಿಗಳಿಗೆ ಅನುಮತಿ ನೀಡಬಾರದು. ಈಗಾಗಲೇ ಅಸ್ತಿತ್ವದಲ್ಲಿರುವ ಖಾಸಗಿ ಕೃಷಿ ಕಾಲೇಜುಗಳ ಮಾನ್ಯತೆ ರದ್ದುಪಡಿಸುವಂತೆ ಆಗ್ರಹಿಸಿದರು.ೃಷಿ ಹಾಗೂ ಕೃಷಿಯೇತರ ಇಲಾಖೆಗಳಲ್ಲಿನ ಕಾರ್ಯನಿರ್ವಹಣೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು.