ಈ ದೇಶದಲ್ಲಿರಬೇಕಾದರೆ ಭಾರತ್ ಮಾತಾಕಿ ಜೈ ಹೇಳಲೇಬೇಕು: ದೇವೇಂದ್ರ ಫಡ್ನವೀಸ್
ಮುಂಬೈ, ಎಪ್ರಿಲ್.3: ಭಾರತ್ ಮಾತಾಕಿ ಜೈ ಕುರಿತು ಸೃಷ್ಟಿಯಾಗಿರುವ ವಿವಾದದೊಳಕ್ಕೆ ಈಗ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರವೇಶಿಸಿದ್ದಾರೆ. ಶನಿವಾರ ನಾಸಿಕ್‌ನಲ್ಲಿ ನಡೆದಿದ್ದ ರ್ಯಾಲಿಯೊಂದರಲ್ಲಿ ಮಾತಾಡುತ್ತಾ ಅವರು ಒಂದು ವೇಳೆ ಈ ದೇಶದಲ್ಲಿ ವಾಸಿಸಬೇಕಾದರೆ ಭಾರತ್‌ಮಾತಾಕಿ ಜೈ ಹೇಳಲೇ ಬೇಕು ಎಂದಿರುವುದಾಗಿ ವರದಿಗಳು ತಿಳಿಸಿವೆ.
ಫಡ್ನವೀಸ್ ನಾಸಿಕ್‌ನಲ್ಲಿ ನಡೆದಿದ್ದ ಬಿಜೆಪಿ ರ್ಯಾಲಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತಾಡುತ್ತಿದ್ದರು. ಈ ದೇಶದಲ್ಲಿ ಭಾರತ್ ಮಾತಾಕಿ ಜೈ ಹೇಳದಿರುವಷ್ಟು ಧೈರ್ಯ ಯಾರಿಗಿದೆ? ಈ ದೇಶದಲ್ಲಿ ಭಾರತ್ ಮಾತಾಕಿ ಜೈ ಎಂದು ಹೇಳಲೇ ಬೇಕಾಗಿದೆ. ಯಾರಾದರೂ ಭಾರತ್ ಮಾತಾಕಿ ಜೈ ಹೇಳುವುದಿಲ್ಲವಾದರೆ ಅವರಿಗೆ ಈ ದೇಶದಲ್ಲಿ ವಾಸಿಸುವ ಹಕ್ಕಿಲ್ಲ ಎಂದು ಫಡ್ನವೀಸ್ ಹೇಳಿರುವುದಾಗಿ ಪತ್ರಿಕೆಯೊಂದು ತಿಳಿಸಿದೆ.
ಜೊತೆಗೆ ನಾವೆತ್ತ ಸಾಗುತ್ತಿದ್ದೇವೆ ಎಂದು ಆಶ್ಚರ್ಯ ಪ್ರಕಟಿಸಿದ ಫಡ್ನವೀಸ್ ನನ್ನ ದೇಶದಲ್ಲಿ ನನಗೆ ಭಾರತ್ ಮಾತಾಕಿ ಜೈ ಎಂದು ಹೇಳಲು ಯಾಕೆ ನಾಚಿಕೆಯಾಗಬೇಕು ಎಂದು ಪ್ರಶ್ನಿಸಿದ ಅವರು ಇಲ್ಲಿ ಅದನ್ನು ಹೇಳದಿದ್ದರೆ ಚೀನಾ ಅಥವಾ ಪಾಕಿಸ್ತಾನದಲ್ಲಿ ಹೇಳಬೇಕೇ ಎಂದು ಕೇಳಿದ್ದಾರೆ.
ಬಿಜೆಪಿಯನ್ನು ಟೀಕಿಸಿದರೆ ಆಗಬಹುದು ಆದರೆ ದೇಶವನ್ನು ಟೀಕಿಸುವುದನ್ನು ಸಹಿಸಲಾಗದು ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ. ಮುಸ್ಲಿಮರು ಭಾರತ್ ಮಾತಾಕಿ ಜೈ ಹೇಳಬಾರದು ಎಂಬ ಫತ್ವಾವನ್ನು ದಾರುಲ್ ಉಲೂಂ ದೇವ್‌ಬಂದ್ ಹೊರಡಿಸಿದ ಒಂದು ದಿವಸದ ಬಳಿಕ ಫಡ್ನವೀಸ್‌ರ ಈ ಹೇಳಿಕೆ ಹೊರಬಂದಿದೆ ಎಂದು ವರದಿಗಳು ತಿಳಿಸಿವೆ.