ಶಾಸಕರಿಂದ ಸಾಲಸೌಲಭ್ಯ ವಿತರಣೆ ಖಂಡಿಸಿ ಪ್ರತಿಭಟನೆ
ಬೆಂಗಳೂರು, ಎ. 6: ಡಾ.ಬಿ.ಆರ್.ಅಂಬೇಡ್ಕರ್ ನಿಗಮದಿಂದ ಪರಿ ಶಿಷ್ಟ ಜಾತಿ, ಪಂಗಡದವರಿಗೆ ನೀಡಲಾಗುತ್ತಿರುವ ಸಾಲಸೌಲಭ್ಯಗಳನ್ನು ಸ್ಥಳೀಯ ಶಾಸಕರಿಂದ ವಿತರಿಸುವುದನ್ನು ಖಂಡಿಸಿ ‘ಡಾ.ಬಿ.ಆರ್.ಅಂಬೇಡ್ಕರ್ ಕರ್ನಾಟಕ ದಲಿತ್ ಹುಲಿಗಳು ಗುಡಿಸಲು ನಿವಾಸಿಗಳ ಸಂಘ’ ಹಾಗೂ ದಲಿತ ಮತ್ತು ಮೈನಾರಿಟಿ ಸೇನಾ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಬುಧವಾರ ನಗರದ ಪುರಭವನದ ಎದುರು ಡಾ.ಬಿ.ಆರ್.ಅಂಬೇಡ್ಕರ್ ಕರ್ನಾಟಕ ದಲಿತ್ ಹುಲಿಗಳು ಗುಡಿಸಲು ನಿವಾಸಿಗಳ ಸಂಘ ಹಾಗೂ ದಲಿತ ಮತ್ತು ಮೈನಾರಿಟಿ ಸೇನೆ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ದಲಿತ್ ವೆಂಕಟೇಶ್, ಅಂಬೇಡ್ಕರ್ ನಿಗಮದಿಂದ ಪರಿಶಿಷ್ಟ ಜಾತಿ-ಪಂಗಡದವರಿಗೆ ನೀಡಲಾಗುತ್ತಿರುವ ಸಾಲ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಸ್ಥಳೀಯ ಶಾಸಕರಿಂದ ವಿತರಣೆ ಮಾಡಲಾಗುತ್ತಿದೆ ಎಂದು ದೂರಿದರು.
ಫಲಾನುಭವಿಗಳಿಗೆ ಅಂಬೇಡ್ಕರ್ ನಿಗಮದಿಂದ ಮಂಜೂರಾದ ಹಣವನ್ನು ಸ್ಥಳೀಯ ಶಾಸಕರ ಕಚೇರಿಯಿಂದ ವಿತರಿಸುವುದನ್ನು ನಿಲ್ಲಿಸುವ ಜೊತೆಗೆ, ನೇರವಾಗಿ ನಿಗಮದಿಂದ ಫಲಾನುಭವಿಗಳು ಮಂಜೂರಾದ ಹಣವನ್ನು ಪಡೆಯುವ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ದಲಿತ ಮತ್ತು ಮೈನಾರಿಟಿ ಸೇನೆ ಅಧ್ಯಕ್ಷ ಎ.ಜೆ.ಖಾನ್ ಮಾತನಾಡಿ, ಬೆಂಗಳೂರಿನ ಆನೇಕಲ್, ಬನ್ನೇರುಘಟ್ಟ, ಗೊಲ್ಲಹಳ್ಳಿ ವ್ಯಾಪ್ತಿಯಲ್ಲಿ 40 ವರ್ಷಗಳಿಂದ ವಾಸ ಮಾಡುತ್ತಿರುವ 380 ಮನೆಗಳಿಗೆ ಹಕ್ಕುಪತ್ರ ವಿತರಣೆ ಮಾಡಬೇಕು. ಅದೇ ರೀತಿ, ಬನ್ನೇರುಘಟ್ಟ ರಸ್ತೆಯಲ್ಲಿರುವ ಜೇಡಿಮರ ಪ್ರದೇಶದಲ್ಲಿ ಸುಮಾರು 20 ವರ್ಷಗಳಿಂದ ವಾಸ ಮಾಡುತ್ತಿರುವ 1,900 ಕೊಳೆಗೇರಿ ನಿವಾಸಿಗಳಿಗೆ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ಈ ಕೂಡಲೇ ಪರಿಚಯ ಪತ್ರ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಎಲ್.ರವಿ,ವಿ. ತ್ಯಾಗರಾಜ್, ಲಿಯಾಕತ್ ಪಾಷ, ಖಾಲಿದ್ ಪಾಲ್ಗೊಂಡಿದ್ದರು.