×
Ad

ಆಗಸ್ಟ್‌ನಲ್ಲಿ ಕಾಮಗಾರಿ ಆರಂಭಕ್ಕೆ ಸಿದ್ಧತೆ: ಸಚಿವ ಮಹದೇವಪ್ಪ

Update: 2016-04-06 23:50 IST

ಬೆಂಗಳೂರು, ಎ.6: ಮೈಸೂರು-ಬೆಂಗಳೂರು ನಡುವೆ 113 ಕಿ.ಮೀ ಉದ್ದದ ಷಟ್ಪಥದ ರಸ್ತೆ ನಿರ್ಮಾಣಕ್ಕೆ ಶೇ.60ರಷ್ಟು ಭೂಮಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಆಗಸ್ಟ್‌ನಲ್ಲಿ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಭೂ ಸ್ವಾಧೀನಕ್ಕೆ 2,400 ಕೋಟಿ ರೂ., ರಸ್ತೆ ನಿರ್ಮಾಣಕ್ಕೆ 3,700 ಕೋಟಿ ರೂ.ಖರ್ಚಾಗಲಿದೆ ಎಂದರು.

ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು ಹಾಗೂ ಶ್ರೀರಂಗಪಟ್ಟಣ ಸೇರಿದಂತೆ ಐದು ಕಡೆ ಬೈಪಾಸ್ ರಸ್ತೆ ನಿರ್ಮಿಸ ಲಿದ್ದು, ರಸ್ತೆಯ ಎರಡೂ ಪಥಗಳಲ್ಲಿ ಸೇವಾ ರಸ್ತೆ ನಿರ್ಮಿಸಲಾ ಗುವುದು. 2018ರ ವೇಳೆಗೆ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದೇವೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡರೆ ಬೆಂಗಳೂರಿನಿಂದ ಮೈಸೂರಿಗೆ ಕೇವಲ 1ಗಂಟೆ 30 ನಿಮಿಷದಲ್ಲಿ ತಲುಪ ಬಹುದು. ಇದಲ್ಲದೆ, ಹೊಸದಾಗಿ 4 ಸಾವಿರ ಕಿ.ಮೀ. ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಅವರು ಹೇಳಿದರು.

ರಾಜ್ಯದ ಎಲ್ಲ ಮೇಲ್ಸೇತುವೆಗಳ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನದ ಅಂದಾಜು ವೆಚ್ಚವನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸುವಂತೆ ನಿತಿನ್ ಗಡ್ಕರಿ ಸೂಚಿಸಿದ್ದಾರೆ. ಈ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 30 ಮೇಲ್ಸೇತುವೆಗಳು ಬರಲಿದ್ದು, ಅಂದಾಜು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಇದಲ್ಲದೆ ಬೇಲೆಕೇರಿ, ಮಂಗಳೂರು ಬಂದರು ಹಾಗೂ ಶಿರಾಡಿಘಾಟ್ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರಕಾರ ನೆರವು ನೀಡಲಿದೆ. ಕನಕಪುರ, ಮಳವಳ್ಳಿ, ಸತ್ಯಮಂಗಲ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಿದ್ದು, ಕನಕಪುರದವರೆಗೆ ನಾಲ್ಕು ಪಥ, ಅಲ್ಲಿಂದ ದ್ವಿಪಥ ರಸ್ತೆ ನಿರ್ಮಾಣಗೊಳ್ಳಲಿದೆ ಎಂದು ಮಹದೇವಪ್ಪ ಹೇಳಿದರು.

ವಿದ್ಯುನ್ಮಾನ ಟೋಲ್ ಸಂಗ್ರಹ: ರಾಜ್ಯದ ಎಲ್ಲ ಪ್ರಮುಖ ಟೋಲ್ ಸಂಗ್ರಹ ಕೇಂದ್ರಗಳಲ್ಲಿ ತಲಾ ಒಂದೊಂದು ವಿದ್ಯುನ್ಮಾನ ಟೋಲ್ ಸಂಗ್ರಹ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಟೋಲ್ ಸಂಗ್ರಹ ಕೇಂದ್ರದಲ್ಲಿ ಪ್ರಯಾಣಿಕರಿಂದ ಅತೀ ಹೆಚ್ಚು ಶುಲ್ಕ ಸಂಗ್ರಹ ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News