×
Ad

ಎ.16ರಂದು ‘ಸ್ಮತಿ ಇರಾನಿ ಗೋ ಬ್ಯಾಕ್’ ಆಂದೋಲನ

Update: 2016-04-06 23:54 IST

ಬೆಂಗಳೂರು, ಎ.6: ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಎ.16 ರಂದು ನಡೆಯಲಿರುವ ವಿವಿ ಘಟಿಕೋತ್ಸವಕ್ಕೆ ಸ್ಮತಿ ಇರಾನಿ ಮುಖ್ಯ ಅಥಿತಿಯಾಗಿ ಆಹ್ವಾನಿಸುತ್ತಿರುವುದನ್ನು ರೋಹಿತ್ ವೇಮುಲಾ ಪರ ನ್ಯಾಯಕ್ಕಾಗಿ ಜಂಟಿ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದೆ.

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಕಾರಣವಾಗಿರುವ ಕೇಂದ್ರ ಸಚಿವೆ ಸ್ಮತಿ ಇರಾನಿ ರಾಜ್ಯದ ವಿವಿಗಳಲ್ಲಿ ಕಾಲಿಟ್ಟರೆ ಇಲ್ಲಿಯೂ ಶಾಂತಿ-ಸೌಹಾರ್ದತೆಗೆ ಧಕ್ಕೆಯಾಗುತ್ತದೆ. ಆದುದರಿಂದ ಇರಾನಿಗೆ ನೀಡಿರುವ ಆಹ್ವಾನವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಒತ್ತಾಯಿಸಿದೆ.

ವಿರೋಧದ ನಂತರವೂ ಸಚಿವೆ ಆಗಮನ ರದ್ದುಗೊಳಿಸದಿದ್ದರೆ ಎ.16ರಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿರುವ ಘಟಿಕೋತ್ಸವ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಸಮಿತಿ ಎಚ್ಚರಿಕೆಯನ್ನು ನೀಡಿದೆ. ರೋಹಿತ್‌ಗೆ ನ್ಯಾಯ ಒದಗಿಸದೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವ ನೈತಿಕತೆ ಇಲ್ಲ. ಹೀಗಾಗಿ ‘ಗೋ ಬ್ಯಾಕ್ ಸ್ಮತಿ ಇರಾನಿ’ ಆಂದೋಲನ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿವಿಎಸ್ ಸಂಚಾಲಕ ಹರಿರಾಮ್, ಕೆಎಸ್‌ಎಸ್ ಸಂಚಾಲಕ ಡಾ.ಕುಮಾರಸ್ವಾಮಿ, ಎಸ್‌ಎಫ್‌ಐ ಉಪಾಧ್ಯಕ್ಷ ಎಸ್.ಚಿಕ್ಕರಾಜು, ಡಿಎಸ್‌ಎಫ್ ಸಂಚಾಲಕ ಡಿ.ರಾಜಗೋಪಾಲ, ಎಸ್‌ಐಒ ಕಾರ್ಯದರ್ಶಿ ಅಖಿಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News