ಬಿಎಂಟಿಸಿ ಬಸ್ ಢಿಕ್ಕಿ: ಬೈಕ್ ಸವಾರ ಸಾವು
ಬೆಂಗಳೂರು, ಎ.7: ವೇಗವಾಗಿ ಎದುರಿನಿಂದ ಬಂದ ಬಿಎಂಟಿಸಿ ಬಸ್ ಬೈಕ್‌ಗೆ ಢಿಕ್ಕಿ ಹೊಡೆದು ಸವಾರ ಮೃತಪಟ್ಟು ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ದೇವನಹಳ್ಳಿಯ ಬೂದಿಗೆರೆ ರಸ್ತೆಯ ಅಗಲಕೋಟೆ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
ಚಿಕ್ಕಬಳ್ಳಾಪುರದ ಪೇರೆಸಂದ್ರದ ವಿಜಯ್ಕುಮಾರ್ (22) ಮೃತಪಟ್ಟವರು. ಗಾಯಗೊಂಡ ಹಿಂಬದಿ ಸವಾರ ಸುರೇಶ್ ಎಂಬವರು ದೇವನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಬೆಳಗ್ಗೆ 9ರ ವೇಳೆ ದೇವನಹಳ್ಳಿಯಿಂದ ಬೂದಿಗೆರೆಯತ್ತ ಹೊರಟಿದ್ದ ಬೈಕ್‌ಗೆ ದೇವನಹಳ್ಳಿ ಕಡೆಗೆ ಬರುತ್ತಿದ್ದ ಬಿಎಂಟಿಸಿ ಬಸ್ ಅಗಲಕೋಟೆ ಸಮೀಪ ರಸ್ತೆಯ ತಿರುವಿನಲ್ಲಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ವಿಜಯ್ಕುಮಾರ್ ಬಸ್ ಚಕ್ರದ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ದೇವನಹಳ್ಳಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಬಸ್ ಚಾಲಕ ಮಲ್ಲೇಗೌಡನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ರೇಣುಕಾ ತಿಳಿಸಿದ್ದಾರೆ.